ಮಣಿಪಾಲ: ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನಲ್ಲಿ ಸೋಮವಾರ ತಡರಾತ್ರಿ ನಕ್ಸಲ್ ನಾಯಕ ವಿಕ್ರಂ ಗೌಡ (Naxal Vikram Gowda) ಎನ್ಕೌಂಟರ್ ನಡೆದಿದೆ. ಇತ್ತೀಚಿನ ದಿನಗಳಲ್ಲಿ ತುಸು ತಣ್ಣಗಾಗಿದ್ದ ನಕ್ಸಲ್ ಸಂಚಲನ ಈ ಎನ್ಕೌಂಟರ್ ನಿಂದ ಮತ್ತೆ ಬೆಳಕಿಗೆ ಬಂದಿದೆ. 2003ರ ಈದು ಎನ್ಕೌಂಟರ್ (Eedu Encounter) ನಡೆದು ಸರಿಯಾಗಿ 21 ವರ್ಷದ 1 ದಿನದ ಬಳಿಕ ಕಬ್ಬಿನಾಲೆಯ ಪೀತೆಬೈಲು ಕಾಡಿನಲ್ಲಿ ಗುಂಡಿನ ಸದ್ದು ಕೇಳಿಸಿದೆ.
ಮತ್ತೆ ನೆನಪಾದ ಈದು ಎನ್ಕೌಂಟರ್
ಕಾರ್ಕಳ ತಾಲೂಕಿನ ಈದು ಎಂಬ ಕುಗ್ರಾಮ 2003ರ ನವೆಂಬರ್ ನಲ್ಲಿ ಮೊದಲ ಬಾರಿಗೆ ದೇಶದಾದ್ಯಂತ ಸುದ್ದಿಯಾಗಿತ್ತು. ಕಾರಣ ಈದು ನೂರಾಳ್ ಬೆಟ್ಟುವಿನಲ್ಲಿ ನಡೆದ ನಕ್ಸಲ್ ಎನ್ಕೌಂಟರ್. ಕರಾವಳಿಯನ್ನೇ ಬೆಚ್ಚಿ ಬೀಳಿಸಿದ್ದ ಸುದ್ದಿಯಿದು. ಇದು ಕರ್ನಾಟಕದ ಮೊದಲ ನಕ್ಸಲ್ ಎನ್ಕೌಂಟರ್.
2003ರ ನವೆಂಬರ್ 17ರ ಮುಂಜಾನೆ ಕಾರ್ಕಳ-ಮೂಡುಬಿದರೆ ನಡುವಿನ ಈದುವಿನಲ್ಲಿ ಅಂದಿನ ಪೊಲೀಸ್ ವರಿಷ್ಠಾಧಿಕಾರಿ ಮುರುಗನ್, ಡಿಸಿಬಿಐ ಇನ್ಸ್ಪೆಕ್ಟರ್ ಕೆ.ಸಿ.ಅಶೋಕನ್ ಹಾಗೂ ಸಿಬ್ಬಂದಿಗಳು ಮನೆಯೊಂದಕ್ಕೆ ದಾಳಿ ನಡೆಸಿ ನಕ್ಸಲೀಯರಾದ ಕೊಪ್ಪದ ಪಾರ್ವತಿ, ರಾಯಚೂರಿನ ಹಾಜಿಮಾ ಎಂಬವರನ್ನು ಗುಂಡು ಹಾರಿಸಿ ಕೊಂದಿದ್ದರು. ಬೊಳ್ಳೆಟ್ಟುವಿನ ರಾಮಪ್ಪ ಪೂಜಾರಿ ಎಂಬವರ ಮನೆಯಲ್ಲಿದ್ದ ಇಬ್ಬರು ಅಂದು ಗುಂಡೇಟಿಗೆ ಬಲಿಯಾಗಿದ್ದರು.
ಈ ಎನ್ಕೌಂಟರ್ ಸಮಯದಲ್ಲಿ ಅಲ್ಲಿಯೇ ಇದ್ದ ಯಶೋದ ಕಾಲಿಗೂ ಗುಂಡೇಟು ತಗುಲಿತ್ತು. ನಂತರ ಅವಳನ್ನು ಪೊಲೀಸರು ಬಂಧಿಸಿ, ಅಕ್ರಮ ಶಸ್ತ್ರಾಸ್ತ್ರ, ಪೊಲೀಸರ ಹತ್ಯಾ ಯತ್ನ ಹಾಗೂ ಕರ್ತವ್ಯಕ್ಕೆ ಅಡ್ಡಿ ಆರೋಪದಡಿ ಮೊಕದ್ದಮೆ ದಾಖಲಿಸಲಾಗಿತ್ತು. ಆದರೆ ಬಲವಾದ ಸಾಕ್ಷ್ಯಾಧಾರಗಳು ಇಲ್ಲದ ಕಾರಣದಿಂದ ಎಂಟು ವರ್ಷಗಳ ಬಳಿಕ ಯಶೋದಾಳನ್ನು ಆರೋಪಮುಕ್ತವಾಗಿಸಿ ಕೋರ್ಟ್ ತೀರ್ಪು ನೀಡಿತ್ತು.
ಈದು ಎನ್ ಕೌಂಟರ್ ರಾಜ್ಯದ ಗಮನ ಸೆಳೆದಿತ್ತು. ಮೊದಲ ಬಾರಿಗೆ ಕರಾವಳಿಯ ಪಶ್ಚಿಮ ಘಟ್ಟ ತಪ್ಪಲಿನಲ್ಲಿ ನಕ್ಸಲ್ ನೆತ್ತರು ಹರಿದಿದ್ದು ಜನರನ್ನು ಬೆಚ್ಚಿ ಬೀಳಿಸಿತ್ತು. ಇದಾಗಿ ಸರಿಯಾಗಿ 21 ವರ್ಷಗಳ ಬಳಿಕ ಮತ್ತೆ ನಕ್ಸಲ್ ನೆತ್ತರು ಹರಿದಿದೆ.
ಹುತಾತ್ಮರ ದಿನಕ್ಕೆ ಬಂದಿದ್ದರೆ?
ತಮ್ಮ ಗುಂಪಿನ ಯಾವುದೇ ಸದಸ್ಯನ ಹತ್ಯೆಯಾದರೆ ಆ ದಿನದಂದು ಪ್ರತಿ ವರ್ಷ ಹುತಾತ್ಮ ದಿನ ಆಚರಿಸುವುದು ನಕ್ಸಲರಲ್ಲಿ ನಡೆದು ಬಂದ ವಾಡಿಕೆ. ಅಂದು ನಕ್ಸಲರ ತಂಡವು ಆ ಜಾಗಕ್ಕೆ ಬಂದು ನಮನ ಸಲ್ಲಿಸಿ ಹೋಗುತ್ತಾರೆ. ಈದು ಎನ್ ಕೌಂಟರ್ ನ 21ನೇ ವರ್ಷದ ದಿನದ ಅಂಗವಾಗಿ ವಿಕ್ರಂ ಗೌಡ ತಂಡ ಮತ್ತೆ ಈ ಕಡೆಗೆ ಬಂದಿತ್ತೆ ಎನ್ನುವ ಅನುಮಾನವೂ ಈಗ ವ್ಯಕ್ತವಾಗಿದೆ.
ಈ ಹಿಂದೆಯೂ ಬಂದಿದ್ದರು
2003ರಲ್ಲಿ ಪಾರ್ವತಿ ಮತ್ತು ಹಲೀಮಾ ಹತ್ಯೆಯಾದ ಬಳಿಕ ಈದುವನ್ನು ನಕ್ಸಲರ ಪುಣ್ಯಭೂಮಿಯನ್ನಾಗಿ ಮಾಡುವತ್ತ ವಿಕ್ರಮ್ ಗೌಡ ಗುಂಪಿನ ನೇತೃತ್ವದಲ್ಲಿ ಮಾವೋವಾದಿಗಳು ಮುಂದಾಗಿದ್ದರು. ಆರಂಭದ ದಿನಗಳಲ್ಲಿ ಈ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರಿಗೆ ಬಂದೂಕು ತೋರಿಸಿ ಅಕ್ಕಿ, ಸೀಮೆಎಣ್ಣೆ, ತರಕಾರಿಗಳು, ಹಣ್ಣುಗಳು ಮತ್ತು ಕೆಲವೊಮ್ಮೆ ಕೋಳಿ ಮತ್ತು ಮಾಂಸವನ್ನು ಸಹ ಸಂಗ್ರಹಿಸಿದ್ದರು.