Advertisement

ರೈತರ ಕೈಹಿಡಿದ ಬೀಜೋತ್ಪಾದನೆ

02:17 PM Aug 07, 2017 | |

ಹಗರಿಬೊಮ್ಮನಹಳ್ಳಿ: ಬರದಿಂದ ಬೇಸತ್ತಿರುವ ಸಾಂಪ್ರದಾಯಿಕ ಬೆಳೆಗಳಿಗೆ ಗುಡಬೈ ಹೇಳಿ ಅಂತ್ಯಂತ ಕಡಿಮೆ ಪ್ರಮಾಣದ ನೀರು ಮತ್ತು ಭೂಮಿಯಲ್ಲಿ ಬೀಜದ ಉತ್ಪಾದನೆ (ಸೀಡ್ಸ್‌)ಗೆ ತಾಲೂಕಿನ ವಟ್ಟಮ್ಮನಹಳ್ಳಿ ಗ್ರಾಮದ ರೈತರು ಮುಂದಾಗಿ ಲಕ್ಷಾಂತರ ರೂ. ಲಾಭ ಗಳಿಸುತ್ತಿದ್ದಾರೆ.
ಸುಮಾರು 430 ಮನೆಗಳನ್ನು ಹೊಂದಿರುವ ಪುಟ್ಟ ಗ್ರಾಮದಲ್ಲಿ ಬೀಜೋತ್ಪಾದನೆಯಲ್ಲಿ ಕ್ರಾಂತಿ ನಡೆಯುತ್ತಿದೆ.

Advertisement

ಗ್ರಾಮದ ಬಹುತೇಕ ರೈತರು ಸಾಂಪ್ರದಾಯಿಕ ಬೆಳೆಗಳಾದ ಮುಸುಕಿನ ಜೋಳ, ಜೋಳ, ಸಜ್ಜಿ ಇತರೆ ಬೆಳೆಗಳನ್ನು ಕೈ ಬಿಟ್ಟು ಪೂರ್ಣ ಪ್ರಮಾಣದಲ್ಲಿ ಬೀಜೋತ್ಪಾದನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಟೊಮೆಟೋ, ಕಲ್ಲಂಗಡಿ, ತುಪ್ಪದ ಈರಿಕಾಯಿ, ಮೆಣಸಿನ ಕಾಯಿ ಬೀಜೋತ್ಪಾದನೆಯನ್ನು ಕಳೆದ 30 ವರ್ಷಗಳಿಂದ ಮಾಡಿಕೊಂಡು ಬರುತ್ತಿದ್ದಾರೆ. ಗ್ರಾಮದಲ್ಲಿ ಪ್ರತಿ ವರ್ಷ 5 ಕೋಟಿ ರೂ.ವರೆಗೂ ಬೀಜೋತ್ಪಾದನೆ ಮತ್ತು ಮಾರಾಟದ ವಹಿವಾಟು
ನಡೆಯುತ್ತಿದೆ. ಇದು ಇಡೀ ಗ್ರಾಮದ ಆರ್ಥಿಕ ಸ್ಥಿತಿಗತಿಯ ಚಿತ್ರಣವನ್ನೇ ಬದಲಿಸಿದೆ.

ಯಂತ್ರಗಳ ಬಳಕೆ: ಕೇವಲ ಎಕರೆ ಪ್ರದೇಶದಲ್ಲಿ ಪ್ರತಿ ವರ್ಷ 60 ಕೆ.ಜಿ.ಯಷ್ಟು ವಿವಿಧ ಬೆಳೆಗಳ ಬೀಜ ಉತ್ಪಾದಿಸಲಾಗುತ್ತದೆ. ಎಕರೆಗೆ ಲಕ್ಷರೂ.ನಷ್ಟು ಉತ್ಪಾದನೆ ವೆಚ್ಚ ತೊಡಗಿಸಿ ಬರೋಬ್ಬರಿ 4 ಲಕ್ಷರೂ.ವರೆಗೂ ಲಾಭ ಪಡೆದ ಹಲವು ರೈತರು ಗ್ರಾಮದಲ್ಲಿದ್ದಾರೆ. 

ಅನುಭವವೇ ಆಧಾರ: ಬೀಜೋತ್ಪಾದನೆ ವಿಧಾನವನ್ನು ಅನುಭವದ ಆಧಾರವಾಗಿ ಸರಳೀಕೃತಗೊಳಿಸಿದ್ದಾರೆ. ಈ ಮೊದಲು ಕಾಯಿಯಿಂದ ಬೀಜ ಬೇರ್ಪಡಿಸಲು ಕಾರ್ಮಿಕರನ್ನು ಬಳಸುತ್ತಿದ್ದರು. ಇದೀಗ ಯಂತ್ರಗಳ ಆಸರೆಯಿಂದ ತ್ವರಿತಗತಿ ಕಂಡುಕೊಂಡಿದ್ದಾರೆ. ಗ್ರಾಮದಲ್ಲಿ ಬಹುತೇಕ ರೈತರ ಮುಖ್ಯ ಬೆಳೆ ಬೀಜೋತ್ಪಾದನೆಯಾಗಿದೆ. ದಾವಣಗೆರೆಯಿಂದ ಪರದೆ ಖರೀದಿಸಿ ನೆರಳು ಚಪ್ಪವರವನ್ನಾಗಿಸಿಕೊಂಡಿದ್ದಾರೆ. ಅಂತೆಯೇ ಗ್ರಾಮದ
ಸುತ್ತಲಿನ ಹೊಲಗಳಲ್ಲಿ ಶ್ವೇತ ಹಂದರಗಳೇ ತುಂಬಿ ತುಳುಕುತ್ತಿವೆ. ಕೆಲ ರೈತರು 2 ಎಕರೆಯಲ್ಲಿ 150 ಕ್ವಿಂಟಲ್‌ ವರೆಗೂ ಬೀಜ ಉತ್ಪಾದಿಸಿದ್ದಾರೆ.  ವಟ್ಟಮ್ಮನಹಳ್ಳಿ ಗ್ರಾಮ ಸುತ್ತಲಿನ ಬೆಣ್ಣಿಕಲ್ಲು, ಗೊಲ್ಲರಹಳ್ಳಿ ಕೋಗಳಿ, ವರಲಹಳ್ಳಿ ಸೇರಿ ಹಲವು ಗ್ರಾಮದ 350ಕ್ಕೂ ಹೆಚ್ಚು ಕೃಷಿ ಕಾರ್ಮಿಕರಿಗೆ ಉದ್ಯೋಗ ಕಲ್ಪಿಸಿದೆ. 

ಯಶಸ್ಸಿನತ್ತ ರೈತರು: ಈ ಮೊದಲು ಸಾಂಪ್ರದಾಯಿಕ ಬೆಳೆಗಳಿಂದ ಕೈ ಸುಟ್ಟುಕೊಂಡಿದ್ದ ರೈತರು ಸ್ವತಃ ಕೂಲಿ ಕಾರ್ಮಿಕರಾಗಿ ಪರಿವರ್ತನೆಗೊಂಡಿದ್ದರು. ಆರಂಭದಲ್ಲಿ ಬೆರಳೆಣಿಕೆಯಷ್ಟು ರೈತರು ಬೀಜೋತ್ಪಾದನೆಯಲ್ಲಿ ತೊಡಗಿದ್ದಾಗ ವ್ಯಂಗ್ಯವಾಡಿದ್ದವರೆ ಇದೀಗ ಮೂಗಿನಮೇಲೆ
ಬೆರಳಿಟ್ಟುಕೊಂತಹ ಸಾಧನೆ ಮಾಡಿದ್ದಾರೆ. 

Advertisement

ಆರ್ಥಿಕ ಪರಿಸ್ಥಿತಿ ಸುಧಾರಣೆ: ಬೀಜದ ಮಾರಾಟದಿಂದ ಬಂದ ಮೊತ್ತದಲ್ಲಿ ಕೆಲವರು ಟ್ರ್ಯಾಕ್ಟರ್‌ ಖರೀದಿ, ಗೃಹ ನಿರ್ಮಾಣ, ವಿವಾಹ, ಹಬ್ಬ, ಉತ್ಸವಗಳು ವಿಜೃಂಭಣೆಯಿಂದಲೆ ಜರುಗುತ್ತಿವೆ. 

ಗ್ರಾಮದ ಹೆಗಾಳ್‌ ರೇವಣ್ಣ, ಹಿರಿಲಿಂಗಪ್ಪನವರ ಜಾಥಪ್ಪ, ಗದ್ದಿಕೇರಿ ವೀರೇಶ, ಹೊಳೆಯಾಚೆ ಗುರುವನಗೌಡ, ಎಚ್‌. ಕಲ್ಲನಗೌಡ, ಮೂಗನಗೌಡ, ಅರಸಪ್ಪನವರ ಮೂಗಪ್ಪ, ಬಣಕಾರ ಪಂಪಣ್ಣ, ಬಿ. ಮಲ್ಲಿಕಾರ್ಜುನ, ರಂಗಮ್ಮನವರ ಕೋಟೆಪ್ಪ ಇತರರು ವಾರ್ಷಿಕ 5 ಲಕ್ಷ ರೂ.ವರೆಗೂ ಲಾಭ
ಪಡೆದಿದ್ದಾರೆ. ಇದಕ್ಕೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಂಘದಿಂದಲೂ ರೈತರಿಗೆ ಸಾಲಸೌಲಭ್ಯ ನೀಡಲಾಗಿದೆ.

ನಮ್ಮೂರಿನಲ್ಲಿ ಸೀಡ್ಸ್‌ ಮಾಡೋದು ಇಲ್ಲಾಂದ್ರ ಊರಿಗೆ ಊರೇ ಗುಳೆ ಹೋಗಬೇಕಿತ್ತು. ಇಂಚು ನೀರಿನಲ್ಲಿ ಬರೇ ಸ್ವಲ್ಪ ಪ್ಲಾಟ್‌ ಮಾಡಿ ರೈತರು
ಲಕ್ಷಗಟ್ಟಲೆ ಲಾಭ ಪಡೆದುಕೊಂಡಾರೆ. ಎಲ್ಲಾ ನಮೂನೆ ಬೀಜಾನು ಊರಲ್ಲೆ ಖರೀದಿಸಿ, ಪ್ರಯೋಗಾಲಯದಿಂದ ತಪಾಸಣೆಯಾದ ಮೇಲೆ ಒಂದೇ ಸರ್ತಿಗೆ ಫುಲ್‌ ಅಮೌಂಟ್‌ ಖರೀದಿದಾರರು ನೀಡುತ್ತಾರೆ. 
 ಅರಸಪ್ಪನವರ ರೇವಪ್ಪ, ಬಣಕಾರ ಕೊಟ್ರೇಶ್‌, ಹೆಗಾಳ್‌ ರೇವಣ್ಣ ವಟ್ಟಮ್ಮನಹಳ್ಳಿ ಗ್ರಾಮದ ಬೀಜೋತ್ಪಾದಕ ರೈತರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿ ಗ್ರಾಮದಲ್ಲಿ ಪ್ರಗತಿಬಂಧು ಸಂಘ ರಚಿಸಿ, ಯುವಕರಿಗೆ ಬೀಜದ ಉತ್ಪಾದನೆಗೆ ಸಾಲ ಸೌಲಭ್ಯ ನೀಡಲಾಗಿದೆ. ಈಗಾಗಲೇ ಸಾಲ ಪಡೆದ ರೈತರು ಮೆಣಸಿನ ಕಾಯಿ, ಸೌತೆ ಮತ್ತು ಕಲ್ಲಂಗಡಿ ಬೀಜ ಉತ್ಪಾದಿಸಿ ಲಾಭ ಪಡೆಯುತ್ತಿದ್ದಾರೆ.
 ಚಂದ್ರಶೇಖರ್‌, ಯೋಜನಾಧಿಕಾರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘ

Advertisement

Udayavani is now on Telegram. Click here to join our channel and stay updated with the latest news.

Next