“ಮಳೆ ಕೆಳಗಿನಿಂದ ಮೇಲಕ್ಕೆ ಏಕೆ ಬೀಳದು?’
“ಚಂದ್ರನೇಕೆ ದುಂಡು?’
“ಸಾಬೂನಿನಿಂದ ಕೊಳೆ ಹೇಗೆ ಹೋಗುತ್ತದೆ?’
“ಒಬ್ಬರ ಮಾತು ಎಲ್ಲರಿಗೂ ಹೇಗೆ ಕೇಳಿಸುತ್ತದೆ?’
“ಭೂಮಿ ಚಲಿಸುತ್ತಿದ್ದರೂ ನಮಗೇಕೆ ಅದರ ಅರಿವಾಗದು?’
-ಇವೇ ಮುಂತಾದ ಪ್ರಶ್ನೆಗಳನ್ನು ಎಳೆಯರು ಕೇಳುತ್ತಾರೆ. ಅವರಿಗಾಗುವ ಅಚ್ಚರಿಯೆ ಹೀಗೆ ಪ್ರಶ್ನಿಸಲು ಪ್ರೇರಣೆ. ವಿಸ್ಮಯವೇ ಮಕ್ಕಳ ಜ್ಞಾನ ದಾಹಕ್ಕೆ ಮೂಲ. ಶಿಕ್ಷಣ ಮಕ್ಕಳ ಬದುಕಿನಲ್ಲಿ ಅವಿಭಾಜ್ಯ ಮಜಲು. ಅದು ತಿಳಿವಳಿಕೆಗೆ ಅವಕಾಶವೊದಗಿಸಿ ಸಾಂಘಿಕ ಜೀವನಕ್ಕೆ ಭದ್ರ ಅಡಿಪಾಯ ಹಾಕುತ್ತದೆ.
Advertisement
ಮೂರರಿಂದ ಏಳನೆಯ ವಯಸ್ಸಿನವರೆಗೆ ಮಗು ಕಾರ್ಯ ಕಾರಣ ಸಂಬಂಧ ವನ್ನು ಸಮರ್ಥವಾಗಿಯೇ ಅರಿಯುವುದು. ಹನ್ನೆರಡನೆ ವಯಸ್ಸಿನ ಸುಮಾರಿಗಾಗಲೇ ಅದಕ್ಕೆ ವಿಮರ್ಶಿಸುವ, ನಿರ್ವಚಿಸುವ ಛಾತಿ ಅಂಕುರಿಸಿರುತ್ತದೆ. ಒಂದು ಎಳನೀರನ್ನು ಒಂದು ಅಥವಾ ಒಂದೂವರೆ ವರ್ಷದ ನನ್ನ ಮೊಮ್ಮಗನಿಗೆ ತೋರಿಸಿ “ಇದೇನು?’ ಅಂದೆ. ಅದಿನ್ನೂ ಮಾತು ಕಲಿಯುವ ಹಂತದಲ್ಲಿದೆ. ಮೊದಲು ಅದು ಕೊಂಚ ತಬ್ಬಿಬ್ಟಾದರೂ ಸಾವರಿಸಿಕೊಂಡು ಬಾಗಿಲಾಚೆಗೆ ಎತ್ತರಕ್ಕೆ ದಿಟ್ಟಿಸಿತು. ತೆಂಗಿನ ಮರದತ್ತ ಕೈ ತೋರಿಸುವ ಮೂಲಕ ಅದೇ ಇದು ಎಂದು ಉತ್ತರಿಸಿತು! ಮಗು ಸಾಮ್ಯತೆ, ಕೊರತೆ, ಸಮತೆ, ಅಸಮತೆ, ಹೋಲಿಕೆಯನ್ನು ಗುರುತಿಸಬಲ್ಲದು. ತನ್ನ ಸುತ್ತಮುತ್ತಲನ್ನು ಕಂಡು, ಕೇಳಿ, ರುಚಿ ನೋಡಿ, ವಾಸನೆ ಗ್ರಹಿಸಿ ಹಾಗೂ ಸ್ಪರ್ಶಿಸಿ ಅಂದರೆ ಪಂಚೇದ್ರೀಯಗಳೆಲ್ಲವನ್ನೂ ಬಳಸಿ ಅರಿಯುತ್ತದೆ. ನಿಮ್ಮ ಮಗು ಪದೇ ಪದೇ ಹೇಗೆ, ಏನು, ಎತ್ತ ಎಂದು ಒಂದಲ್ಲೊಂದು ಪ್ರಶ್ನೆ ಕೇಳುತ್ತಿದ್ದರೆ ಸಹನೆಯಿಂದ ಉತ್ತರಿಸಿ. ಅವರು ಅರ್ಥೈಸಿಕೊಳ್ಳುವ ರೀತಿಯಲ್ಲಿ ಸರಳ ಭಾಷೆಯಲ್ಲಿ ವಿವರಿಸಲು ಮುಂದಾಗಿ. ನಿಮಗರಿವಿಲ್ಲದಂತೆಯೇ ನೀವು ಅವರ ಮೆಚ್ಚಿನ ಶಿಕ್ಷಕರಾಗಿರುತ್ತೀರಿ. ಅಂದಹಾಗೆ ಮಕ್ಕಳು ಮಾಡಿಕೊಳ್ಳ ಬಹುದಾದ ಕೆಲಸಗಳನ್ನು ನೀವು ಮಾಡದಿರಿ. ಅವರು ಅವನ್ನು ನಿರ್ವಹಿಸುವಾಗ ನಿಮ್ಮ ನಿಗಾ ಇರಬೇಕಷ್ಟೆ. ಇತರೆ ಮಕ್ಕಳೊಂದಿಗೆ ಒಡನಾಡುವುದಂತೂ ಅವರ ಭೌತಿಕ ಮತ್ತು ಬೌದ್ಧಿಕ ಬೆಳವಣಿಗೆ ಯಲ್ಲಿ ಬಹು ಮಹತ್ವದ ಪಾತ್ರ ವಹಿಸುವುದು.
Related Articles
Advertisement
ಏಕೆಂದರೆ ಅವರು ಮುಗ್ಧರು. ಪಾರದರ್ಶಕ ಮನಸ್ಸಿನವರು. ಕಳ್ಳ, ಕಪಟ ತಿಳಿಯದವರು. ಗುಟ್ಟಾಗಿಟ್ಟುಕೊ ಎಂದರೆ ನಾವೇ ಅವರಲ್ಲಿ ಸಂಚಿನ ಸೋಂಕು ಬಿತ್ತಿದಂತಾದೀತು. ಆಗಿಂದಾಗ್ಗೆ ಏನು ಕಲಿತಿರಿ, ಮುಂದೇನು ಕಲಿಯ ಬಯಸುತ್ತೀರಿ ಎಂದು ಚಿಣ್ಣರನ್ನು ತಾಕೀತಿಸುವುದು ಅಷ್ಟೇ ಮುಖ್ಯ. ತಾವು ಏನನ್ನು, ಏಕೆ ಕಲಿಯುತ್ತಿದ್ದೇವೆ ಎನ್ನುವುದು ಎಳೆಯರಿಗೆ ಮನವರಿಕೆ ಆಗಿರಬೇಕು. ಪೋಷಕರ ದೃಷ್ಟಿಯಲ್ಲಿ ಎಂಥದ್ದೇ ಅತ್ಯುತ್ತಮ ವಿದ್ಯಾಲಯದಲ್ಲಿ ಮಕ್ಕಳು ವ್ಯಾಸಂಗ ಮಾಡುತ್ತಿರಲಿ ಮಕ್ಕಳ ಬೆಳವಣಿಗೆಯ ಮೂಲ ನೆಲೆ ಮನೆಯೇ. ಟಿ.ಪಿ. ಕೈಲಾಸಂ “ಮಕ್ಕಳಿಸ್ಕೂಲ್ ಮನೇಲಲ್ವೆ?’ ಎಂದಿದ್ದು ಈ ವಿಶಾಲ ಹಿನ್ನೆಲೆಯಲ್ಲೇ. ಮಕ್ಕಳ ಅನ್ನಿಸಿಕೆ, ಅಭಿಪ್ರಾಯಗಳನ್ನು ಮತ್ತು ಅವರು ಕಲಿಯುವ ಶೈಲಿಗಳನ್ನು ಇತಿ, ಮಿತಿಗೊಳಪಟ್ಟು ಪುರಸ್ಕರಿಸಿ. ಶಾಲೆಯಲ್ಲಿ ಏನು ಕಲಿಯುತ್ತಿದ್ದಾರೆ ಎನ್ನುವುದನ್ನು ಅವರ ಬಾಯಿಂದಲೇ ಕೇಳಿ ತಿಳಿಯಿರಿ. ಮಕ್ಕಳ ಅರಿವು, ಮನಸ್ಸು, ಬುದ್ಧಿಯ ವೃದ್ಧಿಗೆ ಇಂಥದ್ದು ನಿರುಪಯೋಗ ವಸ್ತು, ಇಂಥದ್ದು ಅಲ್ಲ ಎನ್ನುವುದೇ ಇಲ್ಲ. ಎಲೆ, ಹಕ್ಕಿಯ ಗರಿ, ಕಲ್ಲು, ಕಾಗದದ ತುಣುಕು, ನೂಲು, ಮಣ್ಣು, ಮರದ ತೊಗಟೆ, ಹಿಟ್ಟಿನ ಕಣಕ…ಎಲ್ಲವೂ ಪ್ರಸ್ತುತವೆ. ಆಡಲು, ಹಾಡಲು ಅವರಿಗೆ ಮುಕ್ತ ಅವಕಾಶವನ್ನು ಕಲ್ಪಿಸಬೇಕಾದ್ದು ಪೋಷಕರ ಕರ್ತವ್ಯ.
ಇಂದಿಗೂ ಮನೋವಿಜ್ಞಾನಿಗಳನ್ನು ಹಾಗೂ ಶಿಕ್ಷಣತಜ್ಞರನ್ನು ಕಾಡುವ ಒಗಟೆಂದರೆ ಮಗು ವ್ಯಾಕರಣದ ಹಂಗಿಲ್ಲದೆ ಹೇಗೆ ಭಾಷೆ ಕಲಿಯುತ್ತದೆ ಎನ್ನುವುದು. ಮಗು ಒಂದಕ್ಕಿಂತ ಹೆಚ್ಚು ಭಾಷೆ ಕಲಿಯಬಲ್ಲದೆಂದರೆ ಮತ್ತೂ ಅಚ್ಚರಿ. ಅಪ್ಪಿತಪ್ಪಿಯೂ “ನಿನ್ನ ತರಗತಿಯಲ್ಲಿ ಯಾರು ಓದಿನಲ್ಲಿ ಫಸ್ಟ್, ನಿನ್ನ ಗ್ರೇಡ್ ಏನು?’ ಅಂತ ಮಕ್ಕಳನ್ನು ಕೇಳಬೇಡಿ. ತಮ್ಮ ಮಕ್ಕಳನ್ನು ಶಾಲೆಗೆ ಸೇರಿಸುವಾಗ ಅಲ್ಲಿ ಯಾವ ವಿಷಯಗಳನ್ನು ಕಲಿಸುತ್ತಾರೆ ಎನ್ನುವುದಕ್ಕಿಂತ ಯಾವ ವಿಧಾನದಲ್ಲಿ ಕಲಿಸಲಾಗುತ್ತದೆ ಎನ್ನುವುದು ಮುಖ್ಯವಾಗುತ್ತದೆ. ಪ್ರತೀ ಮಗುವೂ ಹಲವು ಬಗೆಗಳಲ್ಲಿ ಯಾವುದೇ “ಬುದ್ಧಿ ಸೂಚ್ಯಂಕ'(ಐ.ಕ್ಯೂ) ಪರೀಕ್ಷೆಗಳಿಗೂ ಮೀರಿ ಅನನ್ಯ ಹಾಗೂ ವಿಶೇಷ ಜ್ಞಾನವುಳ್ಳದ್ದು. ಮಗು ಮನಜನ ತಂದೆ ಎಂಬ ನುಡಿ ಅದೆಷ್ಟು ನಿಜ ಅಲ್ಲವೆ? ಎಳೆಯರು ತಪ್ಪು ಗಳಿಂದಲೂ ಕಲಿಯುತ್ತಾರೆ. ಆದ್ದರಿಂದ ಮಕ್ಕಳು ಪ್ರಮಾದವೆಸಗುತ್ತಿದ್ದರೆ ಪೋಷಕರು ಆಗಸವೆ ಕಳಚಿ ಬಿದ್ದಂತೆ ಕಳವಳಕ್ಕೊಳಗಾಗುವ ಅಗತ್ಯವಿಲ್ಲ. ಕಲಿಯುತ್ತಿರುವ ಶಾಲೆ, ತರಗತಿ. ಅಂಕಪಟ್ಟಿ ನಗಣ್ಯ. ಬಲೂನಿನ ಒಳಗಿರುವ ಗಾಳಿ ಯಾವ ತೆರನಾದ್ದು ಮುಖ್ಯ.ಕಣ್ಣೇಟಿನ ಬಣ್ಣದ ಬಲೂನು ಎಂದ ಮಾತ್ರಕ್ಕೆ ಅದು ತ್ವರಿತ ವಾಗಿಯೂ ಬಹು ಎತ್ತರಕ್ಕೂ ಮೇಲೇರೀತೆನ್ನಲಾದೀತೆ?
*ಬಿಂಡಿಗನವಿಲೆ ಭಗವಾನ್