ಕಾಮಿಡಿ ನಟರಾಗಿ ಬೇಡಿಕೆಯಲ್ಲಿರುವಾಗಲೇ ಹೀರೋ ಆದವರು ಶರಣ್. ಅದು “ರ್‍ಯಾಂಬೋ’ ಚಿತ್ರದ ಮೂಲಕ. ಅವರ ಅದೃಷ್ಟ ಚೆನ್ನಾಗಿತ್ತು. ಸಿನಿಮಾ ಹಿಟ್ ಆಗಿ, ಶರಣ್ ಕ್ಲಿಕ್ ಆದರು. ಅಲ್ಲಿಂದ ಇಲ್ಲಿವರೆಗೆ ಶರಣ್ ಜರ್ನಿ ಚೆನ್ನಾಗಿಯೇ ಸಾಗಿಕೊಂಡು ಬಂದಿದೆ. ಅಂದು “ರ್‍ಯಾಂಬೋ’ ಕಥೆ ಕೇಳಿ ತಮ್ಮ ಅಕೌಂಟ್‌ನಲ್ಲಿದ್ದ ಏಳೇ ಏಳು ಸಾವಿರ ರೂಪಾಯಿಯನ್ನು ಬಿಡಿಸಿಕೊಂಡು ಬಂದು ಅಡ್ವಾನ್ಸ್ ಮಾಡಿದ್ದರಂತೆ.
ತಮ್ಮ “ಲಡ್ಡು ಸಿನಿಮಾಸ್ ಬ್ಯಾನರ್‌ನಡಿ’ ಅಟ್ಲಾಂಟ ನಾಗೇಂದ್ರ ಅವರ ಜೊತೆ ಸೇರಿ ಆ ಸಿನಿಮಾವನ್ನು ನಿರ್ಮಿಸಿದ್ದರು. ಈಗ “ರ್‍ಯಾಂಬೋ-2′ ಮಾಡಿದ್ದಾರೆ. ಈ ಬಾರಿಯೂ ನಿರ್ಮಾಪಕರ ಸ್ಥಾನದಲ್ಲಿ ಶರಣ್ ಹಾಗೂ ಅಟ್ಲಾಂಟ ನಾಗೇಂದ್ರ ಇದ್ದಾರೆ. ಆದರೆ, ಈ ಚಿತ್ರಕ್ಕೆ ಕೇವಲ ಅವರಿಬ್ಬರೇ ನಿರ್ಮಾಪಕರಲ್ಲ. ಚಿತ್ರದಲ್ಲಿ ದುಡಿಯುತ್ತಿರುವ ತಾಂತ್ರಿಕ ವರ್ಗ ಕೂಡಾ ಕೈ ಜೋಡಿಸಿದೆ. ಎಲ್ಲರೂ ವರ್ಕಿಂಗ್ ಪಾಟ್ನìರ್ ಆಗಿದ್ದಾರೆ.
ಚಿತ್ರದಲ್ಲಿ ನಟಿಸಿದ ಚಿಕ್ಕಣ್ಣ, ಛಾಯಾಗ್ರಾಹಕ ಸುಧಾಕರ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ, ಸಂಕಲನಕಾರ ಕೆ.ಎಂ.ಪ್ರಕಾಶ್, ಕಲಾ ನಿರ್ದೇಶಕ ಮೋಹನ್ ಬಿ ಕೆರೆ, ಮ್ಯಾನೇಜರ್ ನರಸಿಂಹ ಸೇರಿದಂತೆ ಅನೇಕರು ಈ ಸಿನಿಮಾದ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ಎಲ್ಲರೂ ತುಂಬಾ ಆಸಕ್ತಿಯಿಂದ ತೊಡಗಿರೋದನ್ನು ನೋಡಿ ಖುಷಿಯಾದ ಶರಣ್ ಪ್ರತಿ ವರ್ಷ ಟೆಕ್ನಿಷಿಯನ್ಸ್‌ಗಾಗಿ ಸಿನಿಮಾ ಮಾಡಲು ನಿರ್ಧರಿಸಿದ್ದಾರೆ.
“ರ್‍ಯಾಂಬೋ- 2 ತಂಡ ನೋಡುವಾಗ ಖುಷಿಯಾಗುತ್ತದೆ. ಎಲ್ಲರೂ ತುಂಬಾ ಉತ್ಸಾಹ, ಪ್ರೀತಿಯಿಂದ ಸಿನಿಮಾದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಸಿನಿಮಾದ ಫಲಿತಾಂಶ ಏನೇ ಆಗಿರಲಿ, ಪ್ರತಿ ವರ್ಷ ಟೆಕ್ನಿಷಿಯನ್ಸ್ ಜೊತೆ ಸೇರಿಕೊಂಡು ಸಿನಿಮಾ ಮಾಡುತ್ತೇನೆ. ವರ್ಷಕ್ಕೆ ಒಂದೆರಡು ಸಿನಿಮಾ ಮಾಡುವ ಆಸೆ ಇದೆ.
ಎಲ್ಲರೂ ಭಾಗಿಯಾದರೆ ಒಳ್ಳೆಯ ಸಿನಿಮಾ ಮಾಡಲು ಸಾಧ್ಯ’ ಎಂದು ತಮ್ಮ ಆಸೆ ತೋಡಿಕೊಳ್ಳುತ್ತಾರೆ ಶರಣ್. ಸಾಮಾನ್ಯವಾಗಿ ಶರಣ್ ಸಿನಿಮಾದಲ್ಲಿ ಹೆಚ್ಚಿನ ಮಾತು ಇರುತ್ತದೆ. ಮಾತಿನ ಮೂಲಕವೇ ನಗಿಸುವ ಪ್ರಯತ್ನ ಮಾಡುತ್ತಾರೆ. ಆದರೆ, ಈ ಸಿನಿಮಾದಲ್ಲಿ ಮಾತು ಕಡಿಮೆ ಇದ್ದು, ನಟನೆಯ ಮೂಲಕವೇ ನಗಿಸುವ ಪ್ರಯತ್ನ ಮಾಡಿದ್ದಾರಂತೆ.