ಸೇಡಂ: ದೇಶದೆಲ್ಲೆಡೆ ಲಾಕ್‌ಡೌನ್ ಇರುವ ಹಿನ್ನೆಲೆಯಲ್ಲಿ ಬಿಡಾಡಿ ನಾಯಿಗಳು, ಹಸುಗಳು ಹಸಿವಿನಿಂದ ಕಂಗಾಲಾಗಿರುವ ಹಿನ್ನೆಲೆಯಲ್ಲಿ ಪಟ್ಟಣದ ಕೆಲವು ಜನರು ಅವುಗಳಿಗೆ ಅನ್ನ, ರೊಟ್ಟಿ ನೀಡುವ ಮೂಲಕ ಧಾರಾಳತೆ ಮೆರೆದಿದ್ದಾರೆ.
ಸಮಾಜ ಸೇವಕ ಭರತ ಬಜಾಜ್ ಬೀದಿ ನಾಯಿಗಳಿಗೆ ಪ್ರತಿನಿತ್ಯ ಅನ್ನ ನೀಡುತ್ತಿದ್ದಾರೆ. ಕೆಲ ಯುವಕರು ಒಂದು ಮನೆ-ಒಂದು ರೋಟಿ ಅಭಿಯಾನ ಮೂಲಕ ಸಂಗ್ರಹಿಸಿದ ರೊಟ್ಟಿಗಳನ್ನು ದನ, ಕರುಗಳಿಗೆ ನೀಡುತ್ತಿದ್ದಾರೆ.ಕೆಲವರು ಕೊರೊನಾ ವಿರುದ್ಧ ಹೋರಾಡುತ್ತಿರುವ ಪೊಲೀಸ್ ಇಲಾಖೆ, ವೈದ್ಯಕೀಯ ಸಿಬ್ಬಂದಿ, ಪುರಸಭೆ ಸಿಬ್ಬಂದಿಗೆ ಊಟ ನೀಡುವ ಕೆಲಸ ಮಾಡುತ್ತಿದ್ದಾರೆ.
ಪಟ್ಟಣದ ಯುವ ಮುಖಂಡರಾದ ಪ್ರಶಾಂತ ಕೇರಿ, ಬಸವರಾಜ ಕೋಸಗಿ ಲಾಕ್‌ಡೌನ್ ಪ್ರಾರಂಭವಾದಾಗಿನಿಂದ ದಾನಿಗಳಿಂದ ದಾನ ಪಡೆದು, ನಿರ್ಗತಿಕರು, ಭಿಕ್ಷುಕರು ಹಾಗೂ ಬಡವರಿಗೆ ಧವಸ ಧಾನ್ಯಗಳನ್ನು ವಿತರಿಸುತ್ತಿದ್ದಾರೆ. ಉದ್ಯಮಿ ಶ್ರೀನಿವಾಸ ಕಾಸೋಜು ರೋಗ ನಿರೋಧಕ ಕಷಾಯ ಹಂಚುತ್ತಿದ್ದಾರೆ. ಮಾರ್ವಾಡಿ ಸಮಾಜ, ಕ್ಷತ್ರೀಯ ಸಮಾಜ, ಬಂಜಾರಾ ಸಮಾಜದವರು ಬಡವರಿಗೆ ದವಸ-ಧಾನ್ಯಗಳನ್ನು ವಿತರಿಸುತ್ತಿದ್ದಾರೆ. ಲಯನ್ಸ್ ಕ್ಲಬ್ ವತಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ 51 ಸಾವಿರ ರೂ.ಗಳ ಚೆಕ್‌ನ್ನು
ಸಹಾಯಕ ಆಯುಕ್ತ ರಮೇಶ ಕೋಲಾರ ಮುಖಾಂತರ ಸಲ್ಲಿಸಲಾಗಿದೆ. ಅಲ್ಲದೇ ಪೊಲೀಸರಿಗೆ ನೆರಳು ಕಲ್ಪಿಸುವ ಬೃಹತ್ ಗಾತ್ರದ ಕೊಡೆ ವಿತರಿಸಿದ್ದಾರೆ. ಸಾಹಿತಿ ಮಹಿಪಾಲರೆಡ್ಡಿ ಮುನ್ನೂರು ಮತ್ತು ಶಿಕ್ಷಕಿ ರಾಜಶ್ರೀ ಕಲಾಲ 100 ದಿನಸಿ ಕಿಟ್ ಹಂಚಿದ್ದಾರೆ.