ವಾಡಿ: ಕೇಂದ್ರ ಸರ್ಕಾರದ ಗುತ್ತಿಗೆಯಾ ದಾರಿತ ಸೇನಾ ನೇಮಕಾತಿ ಯೋಜನೆ “ಅಗ್ನಿಪಥ’ ಖಂಡಿಸಿ ದೇಶದಲ್ಲಿ ಭುಗಿಲೆದ್ದಿರುವ ರೈಲು ದಹನದಂತಹ ಹಿಂಸಾತ್ಮಾಕ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಎಚ್ಚೆತ್ತುಕೊಂಡಿರುವ ಪೊಲೀಸ್ ಇಲಾಖೆ, ರೈಲು ನಿಲ್ದಾಣಗಳ ಸುತ್ತಲೂ ಹೈ ಅಲರ್ಟ್ ಘೋಷಿಸಿದೆ.
ಸೋಮವಾರ ಪಟ್ಟಣದ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ ರಾಜ್ಯ ಗೃಹ ಇಲಾಖೆಯ ಕಲಬುರಗಿ ಎಸ್‌ಪಿ ಇಶಾ ಪಂತ್, ಪ್ಲಾಟ್‌ಫಾರ್ಮ್ಗಳ ಮೇಲೆ ಪಾದಯಾತ್ರೆ ನಡೆಸುವ ಮೂಲಕ ನಿಲ್ದಾಣದ ಸುರಕ್ಷತೆ ಪರಿಶೀಲಿಸಿದರು.
ನಿಲ್ದಾಣದ ವಿವಿಧ ಭಾಗಗಳಿಲ್ಲಿರುವ ಎಲ್ಲ ಅನಧಿ ಕೃತ ಪ್ರವೇಶ ದ್ವಾರಗಳನ್ನು ಮುಚ್ಚಿಸುವ ಮತ್ತು ಅವುಗಳ ಮೇಲೆ ಕಟ್ಟೆಚ್ಚರ ವಹಿಸುವಂತೆ ಸೂಚಿಸಿದರು.
ಇದೇ ವೇಳೆ ನಿಲ್ದಾಣದ ವ್ಯವಸ್ಥಾಪಕರೊಂದಿಗೆ ಸಭೆ ನಡೆಸಿದ ಎಸ್‌ಪಿ ಇಶಾ ಪಂತ್, ನಿಲ್ದಾಣವನ್ನು ಪ್ರವೇಶಿಸುವ ಪ್ರತಿಯೊಬ್ಬರ ಮೇಲೂ ಹದ್ದಿನ ಕಣ್ಣಿಡಬೇಕು. ಪ್ಲಾಟ್‌ಫಾರ್ಮ್ ಗಳ ಮೇಲೆ ಗುಂಪು ಗುಂಪಾಗಿ ಸೇರುವುದನ್ನು ತಡೆಯಬೇಕು. ರೈಲುಗಳು ನಿಲ್ದಾಣ ಪ್ರವೇಶಿಸಿದಾಗ ಅಲರ್ಟ್ ಆಗಿರಬೇಕು ಎಂದರು.
ರೈಲು ನಿಲ್ದಾಣ ವ್ಯವಸ್ಥಾಪಕ ಜೆ.ಎನ್. ಪರೀಡಾ, ಶಹಾಬಾದ ಡಿವೈಎಸ್‌ಪಿ ಉಮೇಶ ಚಿಕ್ಕಮಠ, ಸಿಪಿಐ ಪ್ರಕಾಶ ಯಾತನೂರ, ರೈಲ್ವೆ ಪಿಎಸ್‌ಐ ಎಂ.ಪಾಷಾ, ನಗರ ಠಾಣೆ ಪಿಎಸ್‌ಐ ಮಹಾಂತೇಶ ಪಾಟೀಲ, ಕ್ರೈಂ ಪಿಎಸ್‌ಐ ಶಿವುಕಾಂತ ಕಮಲಾಪುರ, ದತ್ತಾತ್ರೇಯ ಜಾನೆ, ಲಕ್ಷ್ಮಣ ತಳಕೇರಿ ಸೇರಿದಂತೆ ರೈಲ್ವೆ ಆರ್ ಪಿಎಫ್ ಮತ್ತು ಸಿವಿಲ್ ಪೊಲೀಸ್ ಪಡೆಯ ಸಿಬ್ಬಂದಿ ಇದ್ದರು.