ಮಂಗಳೂರು: ಕೋವಿಡ್ ಸಂಬಂಧಿ ಲಾಕ್ ಡೌನ್ ಪರಿಸ್ಥಿತಿಯಿಂದಾಗಿ ವಿದೇಶಗಳಲ್ಲಿ ಸಂಕಷ್ಟದಲ್ಲಿರುವ ಭಾರತೀಯರನ್ನು ಸ್ವದೇಶಕ್ಕೆ ವಾಪಾಸು ಕರೆತರುವ ನಿಟ್ಟಿನಲ್ಲಿ ಕೇಂದ್ರ ಪ್ರಾರಂಭಿಸಿರುವ ‘ವಂದೇ ಭಾರತ್ ಮಿಷನ್’ನಡಿಯಲ್ಲಿ ದುಬಾಯಿಯಿಂದ 178 ಪ್ರಯಾಣಿಕರನ್ನು ಹೊತ್ತ ಎರಡನೇ ವಿಮಾನ ಇಂದು ರಾತ್ರಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯಿತು.
ಯುನೈಟೆಡ್ ಅರಬ್ ಎಮಿರೇಟ್ಸ್ ನಿಂದ ಸ್ವದೇಶಕ್ಕೆ ಆಗಮಿಸುತ್ತಿರುವ ಸುಮಾರು 178 ಕರಾವಳಿಗರು ಈ ವಿಮಾನದಲ್ಲಿದ್ದರು. ಈ ವಿಶೇಷ ವಿಮಾನವು ಸಂಜೆ 7.55 ಕ್ಕೆ ಲ್ಯಾಂಡ್ ಆಯಿತು.
ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಇಳಿದ ನಂತರ ಹಣ ವರ್ಗಾವಣೆ, ಸಿಮ್ ವಿತರಣೆ, ಆರೋಗ್ಯ ಕಿಟ್ ವಿತರಣೆ ಮತ್ತು ಉಪಹಾರ ವ್ಯವಸ್ಥೆಗಳನ್ನು ಮಾಡಲಾಯಿತು.
ಬಳಿಕ ಆರೋಗ್ಯ ಇಲಾಖೆಯ ತಪಾಸಣಾ ತಂಡದಿಂದ ಪ್ರತೀ ಪ್ರಯಾಣಿಕರ ಆರೋಗ್ಯ ತಪಾಸಣೆ ಮಾಡಲಾಯಿತು. ಪ್ರಯಾಣಿಕರಿಗೆ ಸ್ಟಾಂಪಿಂಗ್ ಮಾಡಿ, ಇಮಿಗ್ರೇಷನ್ ಪ್ರಕ್ರಿಯೆ ನಡೆಸಲಾಯಿತು. ಎಲ್ಲಾ ಪ್ರಯಾಣಿಕರಿಗೆ ಊಟದ ವ್ಯವಸ್ಥೆಯನ್ನೂ ಏರ್ಪಡಿಸಲಾಗಿದೆ.
ವಿಮಾನ ಆಗಮನ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಅಪರ ಜಿಲ್ಲಾಧಿಕಾರಿ ರೂಪಾ, ಪ್ರೊಬೇಷನರಿ ಐಎಎಸ್ ಅಧಿಕಾರಿ ರಾಹುಲ್ ಶಿಂಧೆ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ, ವಿಮಾನ ನಿಲ್ದಾಣ ನಿರ್ದೇಶಕ ವಿ.ವಿ. ರಾವ್, ಆರೋಗ್ಯ ಇಲಾಖೆಯ ಹಿರಿಯ ಅಧಿಕಾರಿಗಳು ವಿಮಾನ ನಿಲ್ದಾಣದಲ್ಲಿ ಉಪಸ್ಥಿತರಿದ್ದರು.
ದುಬಾಯಿಯಿಂದ ಸ್ವದೇಶಕ್ಕೆ ಆಗಮಿಸಿದ ಪ್ರಯಾಣಿಕರನ್ನು ನಿಗದಿತ ಕ್ವಾರೆಂಟೈನ್ ಕೇಂದ್ರಗಳಿಗೆ ಕರೆದುಕೊಂಡು ಹೋಗಲು ಜಿಲ್ಲಾಡಳಿತ ಬಸ್ಸಿನ ವ್ಯವಸ್ಥೆಯನ್ನು ಮಾಡಿದೆ.
ಈ ವಿಮಾನದಲ್ಲಿ ವಿದೇಶದಿಂದ ಆಗಮಿಸಿದ ಎಲ್ಲಾ ಪ್ರಯಾಣಿಕರ ಗಂಟಲ ದ್ರವ ಪರೀಕ್ಷೆ ಮಂಗಳವಾರ ನಡೆಯಲಿದೆ.