Advertisement
ಉಪೇಂದ್ರ ಅವರ ಹುಟ್ಟುಹಬ್ಬದ ಅಂಗವಾಗಿ ಮಂಗಳವಾರ ಹೊಸ ಪಕ್ಷ ಅಧಿಕೃತವಾಗಿ ಉದ್ಘಾಟಿಸಲಾಯಿತು. ಮಾಜಿ ಲೋಕಾಯುಕ್ತ ಸಂತೋಷ್ ಹೆಗ್ಡೆ ಸೇರಿ ಹಲವು ಗಣ್ಯರು ಈ ಸಂದರ್ಭದಲ್ಲಿ ಹಾಜರಿದ್ದು ಶುಭ ಕೋರಿದರು. ಕಳೆದ ವರ್ಷ ಉಪೇಂದ್ರ ಅವರು ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ (ಕೆಪಿಜೆಪಿ) ಪಕ್ಷದಿಂದ ರಾಜಕೀಯ ಪ್ರವೇಶ ಮಾಡಿ, ವಿಧಾನಸಭೆ ಚುನಾವಣೆಯಲ್ಲಿ ಪಕ್ಷವು ಸ್ಪರ್ಧಿಸಲಿದೆ ಎಂದು ಘೋಷಿಸಿದ್ದರು. ಆದರೆ, ಅದಾಗಿ ಕೆಲವು ತಿಂಗಳುಗಳಲ್ಲೇ ಆಂತರಿಕ ಭಿನ್ನಾಭಿಪ್ರಾಯದಿಂದ ಕೆಪಿಜೆಪಿಯಿಂದ ಹೊರಬಂದು ಹೊಸ ಪಕ್ಷ ಸ್ಥಾಪಿಸುವುದಾಗಿ ಹೇಳಿದ್ದರು. ವಿಧಾನಸಭಾ ಚುನಾವಣೆ ಪ್ರಕ್ರಿಯೆಯಿಂದ ದೂರವೇ ಉಳಿದಿದ್ದ ಉಪೇಂದ್ರ, ಕೊನೆಗೆ ಉತ್ತಮ ಪ್ರಜಾಕೀಯ ಪಕ್ಷ (ಯುಪಿಪಿ) ಎಂಬ ನೂತನ ರಾಜಕೀಯಪಕ್ಷವನ್ನು ಸ್ಥಾಪಿಸಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿದ ಉಪೇಂದ್ರ, ನಮ್ಮ ಪಕ್ಷ ಸೇರಬಯಸುವವರು ತಮ್ಮ ಕ್ಷೇತ್ರಗಳ ಸಮಸ್ಯೆಗಳು, ಅವುಗಳನ್ನು ಬಗೆಹರಿಸುವ ವಿಧಾನಗಳು, ತಗಲುವ ವೆಚ್ಚದ ಬಗ್ಗೆ ವಿಡಿಯೋ ಮಾಡಿ ಯುಪಿಪಿ ವೆಬ್‌ಸೈಟ್‌ಗೆ ಕಳುಹಿಸಬೇಕು. ನಮಗೆ ಬಂದ ಮಾಹಿತಿ ಯನ್ನು ಪಕ್ಷದ ಕಾರ್ಯಕರ್ತರ ಜತೆಗೆ ಚರ್ಚಿಸಿ, ಅಭ್ಯರ್ಥಿ ಗಳನ್ನು ಲಿಖೀತ ಪರೀಕ್ಷೆ ಮೂಲಕ ಆಯ್ಕೆ ಮಾಡಲಾಗುತ್ತದೆ ಎಂದರು.