ಬೆಂಗಳೂರು: ಭಾರತ-ದಕ್ಷಿಣ ಆಫ್ರಿಕಾ “ಎ’ ತಂಡಗಳು ಶುಕ್ರವಾರದಿಂದ ಆಲೂರಿನಲ್ಲಿ ನಡೆಯಲಿರುವ 2ನೇ ಅನಧಿಕೃತ ಟೆಸ್ಟ್ ಪಂದ್ಯದಲ್ಲಿ ಮುಖಾಮುಖೀಯಾಗಲಿವೆ.
ಈಗಾಗಲೇ “ಎಂ. ಚಿನ್ನಸ್ವಾಮಿ ಕ್ರೀಡಾಂಗಣ’ದಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಭಾರತ “ಎ’ ತಂಡ ಭಾರೀ ಅಂತರದ ಗೆಲುವು ಸಾಧಿಸಿ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಇದೀಗ ದ್ವಿತೀಯ ಪಂದ್ಯದಲ್ಲೂ ಮತ್ತೂಂದು ದೊಡ್ಡ ಗೆಲುವಿನ ನಿರೀಕ್ಷೆಯೊಂದಿಗೆ ಕ್ಲೀನ್‌ಸ್ವೀಪ್ ಗುರಿ ಹಾಕಿಕೊಂಡಿದೆ. ಭಾರತ “ಎ’ ತಂಡ ಬ್ಯಾಟಿಂಗ್ ಅತ್ಯಂತ ಬಲಿಷ್ಠ.
ಮಾಯಾಂಕ್ ಅಗರ್ವಾಲ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್ ಅವರಂಥ ಇನ್‌ಫಾರ್ಮ್ ಆಟಗಾರರನ್ನು ಹೊಂದಿದೆ. ಮೊದಲ ಟೆಸ್ಟ್‌ನಲ್ಲಿ ಮಾಯಾಂಕ್ ದ್ವಿಶತಕ ಸಿಡಿಸಿ ಆಫ್ರಿಕಾ ಬೌಲರ್‌ಗಳಿಗೆ ಚಳಿ ಬಿಡಿಸಿದ್ದರು. ಪೃಥ್ವಿ ಶಾ ಶತಕ ಸಿಡಿಸಿದ್ದರು.
ಬೌಲಿಂಗ್ ವಿಭಾಗದಲ್ಲಿ ವೇಗಿ ಮೊಹಮ್ಮದ್ ಸಿರಾಜ್ ಮೇಲೆ ಹೆಚ್ಚಿನ ನಿರೀಕ್ಷೆ ಇಡಲಾಗಿದೆ. ಇವರು ಮೊದಲ ಟೆಸ್ಟ್‌ನಲ್ಲಿ ಒಟ್ಟು 10 ವಿಕೆಟ್ ಕಿತ್ತು ದಕ್ಷಿಣ ಆಫ್ರಿಕಾ ಪತನಕ್ಕೆ ಪ್ರಮುಖ ಕಾರಣರಾಗಿದ್ದರು.
ಮೊದಲ ಟೆಸ್ಟ್ ಪಂದ್ಯವನ್ನು ಕಳೆದುಕೊಂಡು ಹಿನ್ನಡೆಯಲ್ಲಿರುವ ಆಫ್ರಿಕಾ “ಎ’ ತಂಡ 2ನೇ ಪಂದ್ಯದಲ್ಲಿ ತಿರುಗಿ ಬೀಳಬಹುದೆಂಬ ನಿರೀಕ್ಷೆಯೇನೂ ಇಲ್ಲ. ಮೊದಲ ಟೆಸ್ಟ್‌ನ ಅಂತಿಮ ದಿನದಾಟದಲ್ಲಿ ಕೇವಲ 6 ವಿಕೆಟ್ ಕೈಯಲ್ಲಿದ್ದರೂ ರುಡಿ ಸೆಕೆಂಡ್ ಮತ್ತು ಶಾನ್ ಬರ್ಗ್ ತಾಳ್ಮೆಯ ಆಟವಾಡಿ ಡ್ರಾ ಸಾಧಿಸಲು ದೊಡ್ಡ ಹೋರಾಟ ನಡೆಸಿದ್ದರು. ಒಂದು ದಿನವಿಡೀ ವಿಕೆಟ್ ಹಿಡಿದಿಟ್ಟುಕೊಂಡು ಭಾರತೀಯ ಬೌಲರ್‌ಗಳಿಗೆ ಸತಾಯಿಸಿದ್ದರು. ಆದರೆ ಇದರಲ್ಲಿ ಆಫ್ರಿಕಾ ಆಟಗಾರರು ಯಶಸ್ಸು ಸಾಧಿಸಲಿಲ್ಲ.