Advertisement

ಸಿಇಟಿಗೆ ಪಠ್ಯಕಡಿತ, ನೀಟ್‌ಗೇಕಿಲ್ಲ? ದ್ವಿತೀಯ ಪಿಯುಸಿ ವಿಜ್ಞಾನ ವಿದ್ಯಾರ್ಥಿಗಳಿಗೆ ಆತಂಕ

12:08 AM Mar 02, 2021 | Team Udayavani |

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಎಂಜಿನಿಯರಿಂಗ್‌, ಕೃಷಿ ವಿಜ್ಞಾನ ಮೊದಲಾದ ವೃತ್ತಿಪರ ಕೋರ್ಸ್‌ಗಳಿಗೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಶೇ.70ರಷ್ಟು ಪಠ್ಯಕ್ರಮದ ಆಧಾರದಲ್ಲೇ ನಡೆಯಲಿದೆ. ಆದರೆ ನೀಟ್‌ ಬರೆದು ವೈದ್ಯಕೀಯ, ದಂತವೈದ್ಯಕೀಯ ಕೋರ್ಸ್‌ಗಳಿಗೆ ಸೇರಬೇಕೆಂದಿರುವ ವಿದ್ಯಾರ್ಥಿಗಳು ಶತ ಪ್ರತಿಶತ ಪಠ್ಯವನ್ನು ಅಧ್ಯಯನ ಮಾಡಬೇಕಾಗಿದೆ.

Advertisement

ರಾಜ್ಯ ಸರಕಾರ ಪ್ರಸಕ್ತ ಸಾಲಿಗೆ ಅನ್ವಯವಾಗುವಂತೆ ಪಿಯುಸಿಗೆ ಶೇ. 30ರಷ್ಟು ಪಠ್ಯ ಕಡಿತ ಮಾಡಿದ್ದರೂ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ನಡೆಸುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್‌) ಪೂರ್ಣ ಪಠ್ಯಕ್ರಮದಡಿ ನಡೆಯಲಿದೆ. ಇದು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಲ್ಲಿ ಆತಂಕ ಸೃಷ್ಟಿಸಿದೆ.

ರಾಜ್ಯದ ವಿದ್ಯಾರ್ಥಿಗಳು ನೀಟ್‌ಗಾಗಿ ಶೇ. 100ರಷ್ಟು ಪಠ್ಯ ಅಧ್ಯಯನ ಮಾಡಬೇಕು. ಆದರೆ ಕಾಲೇಜುಗಳಲ್ಲಿ ಶೇ. 70ರಷ್ಟು ಮಾತ್ರ ಬೋಧನೆಗೆ ಸೂಚನೆ ನೀಡಲಾಗಿದೆ. ವಿಜ್ಞಾನ ವಿದ್ಯಾರ್ಥಿಗಳು ನೀಟ್‌ ಬರೆಯಲು ಅನುಕೂಲ ಆಗುವಂತೆ ಪರ್ಯಾಯ ಕ್ರಮ ತೆಗೆದುಕೊಳ್ಳಬೇಕು ಎಂಬುದು ವಿದ್ಯಾರ್ಥಿಗಳ ಆಗ್ರಹ.

ಅಧಿಕಾರಿಗಳ ನಡುವೆ ಚರ್ಚೆ
ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದ ಬಹುಪಾಲು ವಿದ್ಯಾರ್ಥಿಗಳು ಸಿಇಟಿ ಬರೆಯುವುದರಿಂದ ಸದ್ಯ ಇರುವ ವಿಜ್ಞಾನ ಪಠ್ಯ ಕ್ರಮದ ಆಧಾರದಲ್ಲೇ ಸಿಇಟಿ ಪ್ರಶ್ನೆಪತ್ರಿಕೆ ಸಿದ್ಧಪಡಿಸಬೇಕಿದೆ. ಉಳಿದಿರುವ ಪಠ್ಯದ ಆಧಾರದಲ್ಲಿ ಪ್ರಶ್ನೆಪತ್ರಿಕೆ ಸಿದ್ಧಪಡಿಸುವ ಸಂಬಂಧ ಪ್ರಾಧಿಕಾರದ ಅಧಿಕಾರಿಗಳು ಸಿಇಟಿ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ. ನೀಟ್‌ ಬರೆಯಲಿರುವ ವಿದ್ಯಾರ್ಥಿಗಳ ಬಗ್ಗೆಯೂ ಚರ್ಚೆ ನಡೆಯುವ ಸಾಧ್ಯತೆಯಿದೆ.

ವಿದ್ಯಾರ್ಥಿಗಳ ಆಗ್ರಹ
2021ರ ನೀಟ್‌ ಪಠ್ಯದಲ್ಲಿ ಬದಲಾವಣೆ ಸಾಧ್ಯತೆಯಿಲ್ಲ. ರಾಜ್ಯ ಸರಕಾರ ಶೇ. 30ರಷ್ಟು ಪಠ್ಯ ಕಡಿತ ಮಾಡಿರುವ ಮಾಹಿತಿಯನ್ನು ಎನ್‌ಟಿಎ ಗಮನಕ್ಕೆ ತರಬೇಕು. ರಾಜ್ಯದ ವಿದ್ಯಾರ್ಥಿಗಳಿಗೆ ಅನುಕೂಲ ಆಗುವಂತೆ ಮಾಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ಪಠ್ಯಕ್ರಮದ ಈ ಗೊಂದಲದಿಂದ ವಿದ್ಯಾರ್ಥಿಗಳು ನೀಟ್‌ ಕೋಚಿಂಗ್‌ಗಾಗಿ ಖಾಸಗಿಯವರ ಮೊರೆ ಹೋಗಬೇಕಾದ ಅನಿವಾರ್ಯ ಸೃಷ್ಟಿಯಾಗಿದೆ.

Advertisement

ಎಂಜಿನಿಯರಿಂಗ್‌, ಕೃಷಿ ವಿಜ್ಞಾನ ಸಹಿತ ವಿವಿಧ ವೃತ್ತಿಪರ ಕೋರ್ಸ್‌ ಗಳ ಪ್ರವೇಶಕ್ಕೆ ಸಿಇಟಿಯನ್ನು ಈಗಾಗಲೇ ಪಿಯು ಇಲಾಖೆ ಕಡಿತ ಮಾಡಿ, ಉಳಿಸಿಕೊಂಡಿರುವ ಶೇ. 70ರಷ್ಟು ಪಠ್ಯದ ಆಧಾರದಲ್ಲೇ ನಡೆಸಲಿದ್ದೇವೆ. ವಿದ್ಯಾರ್ಥಿಗಳು ಆ ಬಗ್ಗೆ ಗೊಂದಲಕ್ಕೆ ಒಳಗಾಗುವುದು ಬೇಡ.
– ವೆಂಕಟ್‌ ರಾಜ, ಕಾರ್ಯನಿರ್ವಾಹಕ ನಿರ್ದೇಶಕ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ

ಪಿಯುಸಿಗೆ ಸಿಬಿಎಸ್‌ಇ ಪಠ್ಯ ಕಡಿತ ಮಾಡಿರುವ ಆಧಾರದಲ್ಲೇ ರಾಜ್ಯದಲ್ಲೂ ಶೇ. 30ರಷ್ಟು ಕಡಿತ ಮಾಡಿದ್ದೇವೆ. ಆದರೆ ನೀಟ್‌ ಪಠ್ಯಕ್ರಮದ ಬಗ್ಗೆ ಸ್ಪಷ್ಟತೆ ಲಭಿಸಿಲ್ಲ. ಈ ಬಗ್ಗೆ ನೀಟ್‌ ನಡೆಸಲಿರುವ ಅಧಿಕೃತ ಸಂಸ್ಥೆಗಳಿಗೆ ಪತ್ರ ಬರೆದು ಮಾಹಿತಿ ಪಡೆಯಲಾಗುತ್ತದೆ.
-ಆರ್‌. ಸ್ನೇಹಲ್‌, ಪ.ಪೂ. ಶಿಕ್ಷಣ ಇಲಾಖೆ ನಿರ್ದೇಶಕಿ

– ರಾಜು ಖಾರ್ವಿ ಕೊಡೇರಿ

Advertisement

Udayavani is now on Telegram. Click here to join our channel and stay updated with the latest news.

Next