ಬೆಂಗಳೂರು: ಇಂದಿನಿಂದ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆ-2 ಆರಂಭಗೊಳ್ಳಲಿದ್ದು, ಪರೀಕ್ಷಾ ಕೇಂದ್ರಗಳ ಭದ್ರತೆಗೆ ಕ್ರಮ ಕೈಗೊಳ್ಳಲಾಗಿದೆ.
ಮೇ 16ರ ವರೆಗೆ ನಡೆಯಲಿರುವ ಪರೀಕ್ಷೆಗೆ 1,49,300 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 32,848 ವಿದ್ಯಾರ್ಥಿಗಳು ಫಲಿತಾಂಶ ಉನ್ನತೀಕರಿಸಿಕೊಳ್ಳಲು ಪರೀಕ್ಷೆ ತೆಗೆದುಕೊಂಡಿದ್ದು 27,092 ಮಂದಿ ಪುನರಾವರ್ತಿತ ವಿದ್ಯಾರ್ಥಿಗಳಾಗಿದ್ದಾರೆ.
ಅನುತ್ತೀರ್ಣಗೊಂಡ 89,221 ವಿದ್ಯಾರ್ಥಿಗಳು ಮತ್ತು ಶೇ.75ರಷ್ಟು ಹಾಜರಾತಿ ಇಲ್ಲದ 17 ವರ್ಷ ತುಂಬಿದ ಖಾಸಗಿಯಾಗಿ ನೋಂದಾಯಿಸಿಕೊಂಡ 139 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಕಲಾ ವಿಭಾಗದಲ್ಲಿ 52,492, ವಾಣಿಜ್ಯ 39,427 ಮತ್ತು ವಿಜ್ಞಾನ ವಿಭಾಗದಲ್ಲಿ 57,381 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.
ರಾಜ್ಯಾದ್ಯಂತ 301 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ನಡೆಸುವ ವ್ಯವಸ್ಥೆ ಮಾಡಿಕೊಳ್ಳಲಾಗುತ್ತಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ ತಿಳಿಸಿದೆ.