ಪಾಟ್ನಾ: ಬಿಹಾರ ವಿಧಾನಸಭೆಗೆ ನಡೆಯುತ್ತಿರುವ ಚುನಾವಣೆಯ ಎರಡನೇ ಹಂತದ ಮತದಾನ ಪ್ರಕ್ರಿಯೆ ಇಂದು ನಡೆಯುತ್ತಿದೆ. ಮೊದಲ ಹಂತದ ಚುನಾವಣೆ ಅಕ್ಟೋಬರ್ 28ರಂದು ನಡೆದಿದ್ದು, ಇಂದು ಎರಡನೇ ಹಂತದ ಮತದಾನ ನಡೆಯುತ್ತಿದೆ.
ಎರಡನೇ ಹಂತದಲ್ಲಿ ಒಟ್ಟು 17 ಜಿಲ್ಲೆಗಳ 94 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಒಟ್ಟು 1463 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಆರ್ ಜೆಡಿಯ ನಾಯಕರಾದ ತೇಜಸ್ವಿ ಯಾದವ್ ಮತ್ತು ತೇಜ್ ಪ್ರತಾಪ್ ಯಾದವ್ ಅವರೂ ಇಂದು ಕಣದಲ್ಲಿದ್ದಾರೆ.
ಇಂದು ಬಿಜೆಪಿಯ 46 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಉಳಿದಂತೆ 43 ಮಂದಿ ಜೆಡಿಯು, ಅಭ್ಯರ್ಥಿಗಳು, ಎಲ್ ಜೆಪಿಯ 52 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
ಇದನ್ನೂ ಓದಿ:ಇಂದು ಮತ ಸಮರ; ಶಿರಾ, ಆರ್.ಆರ್. ನಗರ ಕ್ಷೇತ್ರಕ್ಕೆ ಹಕ್ಕು ಚಲಾವಣೆ
ಮೊದಲ ಹಂತದ ಚುನಾವಣೆಯಲ್ಲಿ ಶೇ. 53.54 ಮತದಾನವಾಗಿದ್ದು, ಮೂರನೇ ಹಂತದ ಮತದಾನ ಪ್ರಕ್ರಿಯೆ ನವೆಂಬರ್ 7ರಂದು ನಡೆಯಲಿದೆ. ಮತ ಎಣಿಕೆ ನವೆಂಬರ್ 10ರಂದು ನಡೆಯಲಿದೆ.
ಬಿಹಾರ ರಾಜ್ಯಪಾಲ ಪಾಗು ಚೌಹಾನ್ ಪಾಟ್ನಾದ ದಿಘಾದಲ್ಲಿನ ಸರ್ಕಾರಿ ಶಾಲೆಯಲ್ಲಿ ಮತ ಚಲಾಯಿಸಿದರು. ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಅವರು ಪಾಟ್ನಾದ ರಾಜೇಂದ್ರ ನಗರದ ಹೈಸ್ಕೂಲ್ ನಲ್ಲಿ ಮತದಾನ ಮಾಡಿದರು.