Advertisement
ಸಿಯಾಟಲ್ ಪಟ್ಟಣ ಅಮೇರಿಕಾದ ವಾಯುವ್ಯ ಭಾಗದಲ್ಲಿದೆ. ಮಲೆನಾಡಿನಂತೆ ಯಾವಾಗಲೂ ಹಚ್ಚ ಹಸುರಿನ ಸೀರೆಯುಟ್ಟಂತೆ ಕಾಣುತ್ತದೆ. ಮೈ ಝಮ್ಮೆನಿಸುವ ಸೋನೆ ಮಳೆ, ಶುದ್ಧ ಗಾಳಿ, ಕಾವೇರಿಯಷ್ಟೇ ತಿಳಿ – ತುಂಗೆಯಷ್ಟೇ ಸಿಹಿ ನಮ್ಮೂರಿನ ಹೊಳೆ ನೀರು. ಊರಿನ ಸುತ್ತ ಸರೋವರಗಳು, ಅಣತಿ ದೂರದಲ್ಲಿಯೇ ಸಮುದ್ರ, ಮಂಜು ಕವಿದ ಬೆಟ್ಟಗಳು, ಇಂದೋ ನಾಳೆಯೋ ಹೊರಚಿಮ್ಮಲು ಸಿದ್ಧವಾಗಿರುವ ಜ್ವಾಲಾಮುಖೀ ಪರ್ವತಗಳು, ಚಾರಣಿಗರಿಗೆ ಸವಾಲೊಡ್ಡುವ ಶಿಖರಗಳು, ಬಿಳಿ ಮೋಡದಿಂದ ಹೊರ ಚಾಚಿರುವ ಮಂಜು ಪರ್ವತಗಳು, ಹಾಲಿಂದ ಅಭಿಷೇಕವಾದ ಶಿವಲಿಂಗವೇ, ಶುಭೋದಯದ ಎಳೆ ಬಿಸಿಲಲ್ಲಿ ದರ್ಶನವಾದರೆ ಇದೇನು ಓಂ ಪರ್ವತವೇ, ಇದುವೇ ಶಿವಾಲಯ ಎಂದು ಉದ್ಘರಿಸುವಂತೆ ಮಾಡುತ್ತದೆ ಆಸ್ತಿಕರನ್ನು. ಅಬ್ಬಬ್ಬಾ! ಎಷ್ಟು ಸುಂದರ ನಮ್ಮೂರು.
Related Articles
Advertisement
ಕನ್ನಡ ಭಾರತಿ ವರ್ಷವಿಡೀ ವಾರಾಂತ್ಯಕ್ಕೆ ಭಾಷೆ ಮತ್ತು ಶಾಸ್ತ್ರೀಯ ಕಲೆಯ (ನೃತ್ಯ, ನಾಟಕ, ಸಂಗೀತ) ತರಗತಿಗಳನ್ನು ನಡೆಸಿಕೊಂಡು ಬರುತ್ತಿದೆ. ಕನ್ನಡಿಗರಿಗೆ, ವಿಶೇಷವಾಗಿ ಇಲ್ಲಿ ಬೆಳೆಯುತ್ತಿರುವ ಮಕ್ಕಳಿಗೆ ಇದರ ಪ್ರಯೋಜನ ವರ್ಣನಾತೀತ. ಸಂಸ್ಥೆಯ ಪದಾಧಿಕಾರಿಗಳ ನಿಸ್ವಾರ್ಥ ಸೇವೆಗೆ ಹಲವಾರು ಗಣ್ಯರು ಕೈ ಜೋಡಿಸಿದ್ದಾರೆ. ಗಣ್ಯರು ನೃತ್ಯ, ಕಲೆ ಹಾಗೂ ಭಾಷೆಯನ್ನು ಆಸಕ್ತರಿಗೆ ಅಭ್ಯಯಿಸುತ್ತಿದ್ದಾರೆ. ಇಲ್ಲಿ ಮಕ್ಕಳಂತೆಯೇ ಪೋಷಕರ ಕೊಡುಗೆಯೂ ಅಪಾರ. ಬಿಡುವಿಲ್ಲದ ಜೀವನದ ಮಧ್ಯೆಯೂ ನಮ್ಮ ಭಾಷೆ, ಸಂಸ್ಕೃತಿಯ ಬಗ್ಗೆ ಪ್ರೀತಿ – ಒಲವು ಗಮನೀಯವಾದದು.
ಶಾಲೆ ಅಂದಕೂಡಲೆ 15 – 20 ಮಕ್ಕಳು, ಶಾಲಾ ಕೊಠಡಿ ಮತ್ತು ಶಿಕ್ಷಕ ಎಂದು ಭಾವಿಸುತ್ತೇವೆ. ಕನ್ನಡ ಭಾರತಿ ಶಾಲೆಯ ವಿಶೇಷವೆಂದರೆ ಎಲ್ಲ ತರಗತಿಗಳು ಆನ್‌ಲೈನ್ ಕಲಿಕೆ ಅಂದರೆ ಮನೆಯಿಂದಲೇ ಗಣಕ ಯಂತ್ರ – ತಂತ್ರಜ್ಞಾನದ ಸಹಾಯದಿಂದ ಸಂಪನ್ನಗೊಳ್ಳುತ್ತದೆ. ಶಿಕ್ಷಕರಿಗೆ ಹೆಚ್ಚು ಅಂದರೆ 6 ಶಿಕ್ಷಾರ್ಥಿಗಳು. ಅಧ್ಯಯನಕ್ಕೆ ಬೇಕಾದ ಎÇÉಾ ಸಾಮಗ್ರಿಗಳನ್ನು ಕನ್ನಡ ಭಾರತಿ ಸಂಘವೇ ಒದಗಿಸಿಕೊಡುತ್ತದೆ
ಶಿಕ್ಷಾರ್ಥಿಗಳಿಂದ ಶುಲ್ಕವನ್ನು ಭರಿಸುವುದಿಲ್ಲ. ಅಂದರೆ ಸ್ವಯಂಸೇವಕರೇ ಪಾವತಿಸುತ್ತಾರೆ. ಇದು ಶ್ಲಾಘನೀಯವಲ್ಲದೆ ಮತ್ತೇನು? ಆಧುನಿಕತೆಯ ಪ್ರಗತಿ ಬಹಳ ವೇಗವಾಗಿ ಸಾಗುತ್ತಿದೆ. ಅದರಲ್ಲಿ ನಮ್ಮನ್ನು ಒಂದಾಗಿಸಿ ಸಾಗುವುದು ಕಷ್ಟಸಾಧ್ಯ. ಇದು ಮಕ್ಕಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿರುವುದು ಕಹಿ ಸತ್ಯ. ಹೀಗಿರುವಾಗ ತಂತ್ರಜ್ಞಾನವನ್ನು ಧನಾತ್ಮಕವಾಗಿ ಬಳಸಿ ಮಕ್ಕಳಿಗೆ ಆನ್‌ಲೈನ್ ತರಗತಿ ನಡೆಸುತ್ತಿರುವುದು ಅದ್ಭುತವೂ ಪ್ರಶಂಸನೀಯವೂ ಹೌದು. ಕನ್ನಡ ಕಲಿಕೆಗೆ ಬೇಕಾದ ಸಾಮಗ್ರಿಯನ್ನು ಕನ್ನಡ ಅಕಾಡೆಮಿ (https://www.kannadaacademy.com/home) ಒದಗಿಸಿಕೊಟ್ಟಿದೆ. ಅನಿವಾಸಿ ಕನ್ನಡ ಕಂದಮ್ಮಗಳಿಗೆ ಕಲಿಕೆ ಅಪ್ಯಾಯಮಾನವಾಗಿರಲೆಂದು 8 ಭಾಗ ಮಾಡಲಾಗಿದೆ – ಸ್ವರ ಬಲ್ಲ – 1/2, ಅಕ್ಷರ ಬಲ್ಲ 1/2, ಪದ ಬಲ್ಲ 1/2, ಮತ್ತು ಜಾಣ 1/2. ಎಲ್ಲ ಶಿಕ್ಷಾರ್ಥಿಗಳು ಸ್ವರ ಬಲ್ಲ 1 ರಿಂದ ಕಲಿಕೆಯನ್ನು ಆರಂಭಿಸಿ ಜಾಣ 2 ಕ್ಕೆ ಮುಕ್ತಾಯ ಆಗುತ್ತದೆ. ವರುಷಕ್ಕೆ ಒಂದು ಭಾಗವನ್ನು ಕಲಿಸಲಾಗುತ್ತದೆ. ಮಕ್ಕಳಿಗೆ ಸರಳ ಸಂಭಾಷಣೆ ಮತ್ತು ಸಾಹಿತ್ಯ ಜ್ಞಾನ ಉಣಿಸುವುದು ಮೂಲ ಉದ್ದೇಶ.
ಕನ್ನಡ ಭಾರತಿ ಸಂಸ್ಥೆಯ ಮತ್ತೊಂದು ವಿಶೇಷವೆಂದರೆ ಕರಾವಳಿ ಕಲೆಯ ನಂಟು. ತುಳು, ಕೊಂಕಣ ಸಂಸ್ಕೃತಿಯ ಕೃಷಿ, ಕಡಲತೀರ ಯಕ್ಷಕಲೆಯನ್ನೂ ಹೇಳಿಕೊಡುತ್ತಾರೆ. ಕೆಲವು ಬಾರಿ ಕಲಾವಿದರನ್ನು ಆಹ್ವಾನಿಸಿ ಯಕ್ಷಗಾನವನ್ನು ಪ್ರಾಯೋಜಿಸಿದ್ದಾರೆ. ಕಲಾವಿದರ ಕಲೆಯನ್ನು ಆರಾಧಿಸಿ ಗೌರವಿಸಿದ್ದಾರೆ. ಹಲವಾರು ಕಲಾರಸಿಕರು ಯಕ್ಷಕಲೆಯನ್ನು ಆನ್‌ಲೈನ್ ಮೂಲಕ ನುರಿತ ಕಲಾವಿದರಿಂದ ಕಲಿಯುತ್ತಿದ್ದಾರೆ. ಬರುವ ಸಂವತ್ಸರಗಳಲ್ಲಿ ಇಲ್ಲಿನ ಮಕ್ಕಳೇ ಯಕ್ಷಗಾನ ಪ್ರದರ್ಶನ ನೀಡುವುದರಲ್ಲಿ ಸಂಶಯವಿಲ್ಲ, ಕನ್ನಡ ಭಾರತಿ ಸಂಘದ ಈ ನಿಸ್ವಾರ್ಥ ಸಮಾಜ ಸೇವೆ ನಿರಂತರವಾಗಿ ಸಾಗುತ್ತಿರಲಿ; ಸಾಮರಸ್ಯ, ಸಹಬಾಳ್ವೆಗೆ ಪೂರಕವಾಗಿರಲಿ ಆರೋಗ್ಯವಂತ, ವೈಭವೋಪೇತ ಸಮಾಜಕ್ಕೆ ಕನ್ನಡ ಭಾರತಿ ಸಂಘದ ಸೇವೆ ಎಂದೆಂದೂ ಗ್ರಾಹ್ಯವಾಗಿರಲಿ.
*ಲವಕುಮಾರ ಬಸವಾಪಟ್ಟಣ, ಸಿಯಾಟಲ್, ವಾಷಿಂಗ್ಟನ್