ಮುಂಬಯಿ: ಮಹಾರಾಷ್ಟ್ರದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಮತ್ತು ಬಿಜೆಪಿ ನಡುವಿನ ಸೀಟು ಹಂಚಿಕೆ ಹೊಂದಾಣಿಕೆ 2019 ರಂತೆಯೇ ಇರುತ್ತದೆ ಎಂದು ಹಿರಿಯ ಸೇನಾ ನಾಯಕ ಗಜಾನನ್ ಕೀರ್ತಿಕರ್ ಶುಕ್ರವಾರ ಹೇಳಿದ್ದಾರೆ. ಮತ್ತೊಂದೆಡೆ ಬಿಜೆಪಿ ಈ ಬಗ್ಗೆ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳಿದೆ.
2019ರ ಲೋಕಸಭೆ ಚುನಾವಣೆಯಲ್ಲ ಅವಿಭಜಿತವಾಗಿದ್ದ ಶಿವಸೇನೆ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡು ಸ್ಪರ್ಧಿಸಿದ್ದವು. “ಶಿವಸೇನೆ ಕಳೆದ ಬಾರಿ ರಾಜ್ಯದ ಒಟ್ಟು 48ಸ್ಥಾನಗಳ ಪೈಕಿ 22 ಸ್ಥಾನಗಳಲ್ಲಿ ಸ್ಪರ್ಧಿಸಿ 18 ಮತ್ತು ಬಿಜೆಪಿ 26 ರಲ್ಲಿ ಸ್ಪರ್ಧಿಸಿ 23 ಸ್ಥಾನಗಳಲ್ಲಿ ಗೆದ್ದಿತ್ತು. ಈ ಬಾರಿಯೂ ಅದೇ ವ್ಯವಸ್ಥೆ ಇರುತ್ತದೆ. ನಾವು ಈಗಾಗಲೇ ಚುನಾವಣೆಗೆ ಸಿದ್ಧತೆಗಳನ್ನು ಪ್ರಾರಂಭಿಸಿದ್ದೇವೆ ಎಂದು ಕೀರ್ತಿಕರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಮಹಾರಾಷ್ಟ್ರದಿಂದ ಶಿವಸೇನೆಯ 18 ಲೋಕಸಭಾ ಸದಸ್ಯರಲ್ಲಿ 13 ಮಂದಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರಿಗೆ ಬದ್ಧರಾಗಿದ್ದಾರೆ ಮತ್ತು ಐವರು ಉದ್ಧವ್ ಠಾಕ್ರೆ ನೇತೃತ್ವದ ಬಣಕ್ಕೆ ಸೇರಿದ್ದಾರೆ. ಶಿವಸೇನೆಯ ವಕ್ತಾರ ಮತ್ತು ರಾಜ್ಯ ಶಿಕ್ಷಣ ಸಚಿವ ದೀಪಕ್ ಕೇಸರ್ಕರ್ ಕೂಡ ತಮ್ಮ ಪಕ್ಷವು ಸೀಟು ಹಂಚಿಕೆ ಸೂತ್ರವು ಬದಲಾಗದೆ ಉಳಿಯುತ್ತದೆ ಎಂದು ಆಶಿಸುತ್ತಿದೆ ಎಂದು ಹೇಳಿದ್ದಾರೆ.
ಆದರೆ ಬಿಜೆಪಿ ನಾಯಕ ಮತ್ತು ಸಂಸ್ಕೃತಿ ಸಚಿವ ಸುಧೀರ್ ಮುಂಗಂತಿವಾರ್ ಅವರು ಯಾವುದೇ ಸೂತ್ರವನ್ನು ಇನ್ನೂ ರೂಪಿಸಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.ಏಕನಾಥ್ ಶಿಂಧೆ ಅವರ ಬೇಡಿಕೆಗಳನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಬಿಜೆಪಿಯ ಯಾವ ನಾಯಕರೂ ಹೇಳಿಲ್ಲ. ಜನರ ಹಿತಾಸಕ್ತಿ ಕಾಪಾಡುವ ಕೆಲಸ ಮಾಡುವ ಸರ್ಕಾರವನ್ನು ನೀಡಲು ಶಿಂಧೆ ಬಿಜೆಪಿಯೊಂದಿಗೆ ಕೈಜೋಡಿಸಿದರು. ಅವರ ಬೇಡಿಕೆಗಳನ್ನು ಗೌರವಿಸಲಾಗುವುದು. ಈ ಹಿಂದೆ ಬಾಳಾಸಾಹೇಬ್ ಠಾಕ್ರೆ ನೇತೃತ್ವದ ಶಿವಸೇನೆ ಮತ್ತು ಈಗ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆಗೆ ಬಿಜೆಪಿ ಹೆಚ್ಚಿನ ಗೌರವವನ್ನು ಹೊಂದಿದೆ. ಶಿಂಧೆ ಮತ್ತು ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಒಟ್ಟಿಗೆ ಕುಳಿತು ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗೆ ಸೀಟು ಹಂಚಿಕೆ ಕುರಿತು ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ರಾಜಭವನದಲ್ಲಿ ಸುದ್ದಿಗಾರರಿಗೆ ತಿಳಿಸಿದರು.