Advertisement
ಮೈಸೂರು-ಕೊಡಗು ಕ್ಷೇತ್ರ ಪಡೆಯುವಲ್ಲಿ ಯಶಸ್ವಿಯಾಗದೆ ತುಮಕೂರು ಕ್ಷೇತ್ರಕ್ಕೆ ತೃಪ್ತಿ ಪಡುವಂತಾಗಿ ಮಾಜಿ ಪ್ರಧಾನಿ ಎಚ್ .ಡಿ.ದೇವೇಗೌಡರು ಸೋತು ಗೆದ್ದಿದ್ದರೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೊನೆಗೂ ಮೇಲುಗೈ ಸಾಧಿಸಿದ್ದಾರೆ. ಕಾಂಗ್ರೆಸ್‌ಗೆ ಸಮರ್ಥ ಅಭ್ಯರ್ಥಿಗಳು ಇಲ್ಲದ ಉಡುಪಿ-ಚಿಕ್ಕಮಗಳೂರು, ಉತ್ತರ ಕನ್ನಡ, ವಿಜಯಪುರ ಕ್ಷೇತ್ರಗಳು ಜೆಡಿಎಸ್‌ಗೆ ಬಂದಿರುವುದರಿಂದ ಕಠಿಣ ಸವಾಲು ಎದುರಾಗಿದೆ. ಸಿದ್ದರಾಮಯ್ಯ ಅವರ ಕಾರ್ಯತಂತ್ರದಿಂದ ಮೈಸೂರು -ಕೊಡಗು ಕ್ಷೇತ್ರ ಪಡೆಯಲು ಸಾಧ್ಯವಾಗದ ಬಗ್ಗೆ ಜೆಡಿಎಸ್ ಆಂತರಿಕ ವಲಯದಲ್ಲಿ ತೀವ್ರ ಆಕ್ರೋಶವೂ ಇದ್ದು, ಅದು ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆಯಲಿದೆ ಎಂಬುದು ಕುತೂಹಲ ಮೂಡಿಸಿದೆ. ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವ ಮಂಡ್ಯದಲ್ಲಿ ಕಾಂಗ್ರೆಸ್ ಟಿಕೆಟ್ ನಿರೀಕ್ಷೆಯಲ್ಲಿರುವ ಸುಮಲತಾ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಸಾಧ್ಯತೆಯಿದೆ. ಅದೇ ರೀತಿ ಹಾಸನದಲ್ಲಿ ಎ.ಮಂಜು ಬಿಜೆಪಿ ಸೇರುವ ಸಾಧ್ಯತೆ ಹೆಚ್ಚಾಗಿದೆ. ಅಲ್ಲಿನ ಮೂಲ ಕಾಂಗ್ರೆಸ್ಸಿಗರ ಬೆಂಬಲವೂ ಅವರಿಗೆ ಸಿಗಬಹುದು.
Related Articles
Advertisement
ಸರ್ಕಾರ ರಚನೆಯಾದ ದಿನದಿಂದಲೂ ಸಹಮತ ಮೂಡಿಲ್ಲ. ಸಂಪುಟ ವಿಸ್ತರಣೆಯಲ್ಲೂ ಹಗ್ಗಜಗ್ಗಾಟ, ಸಮನ್ವಯ ಸಮಿತಿ ಸಭೆಗೆ ಜೆಡಿಎಸ್ ರಾಜ್ಯಾಧ್ಯಕ್ಷರ ಸೇರ್ಪಡೆಗೆ ವಿರೋಧ, ನಂತರ ನಿಗಮ-ಮಂಡಳಿಗಳ ನೇಮಕ ವಿಚಾರದಲ್ಲೂ ತಿಕ್ಕಾಟ ನಡೆದು ಆಪರೇಷನ್ ಕಮಲ ಕಾರ್ಯಾಚರಣೆಗೆ ಕಾಂಗ್ರೆಸ್ ಶಾಸಕರು ಬಲಿಯಾಗಿ ಸರ್ಕಾರಕ್ಕೆ ಕಂಟಕ ತರುವ ಮಟ್ಟಕ್ಕೂ ಹೋಗಿತ್ತು. ಇದೀಗ ಕಾಂಗ್ರೆಸ್‌ನ ಕೆಲವು ನಾಯಕರೇ ಜೆಡಿಎಸ್ ಬೇಡಿಕೆ ಇಟ್ಟಿದ್ದ ಸೀಟು ಸಿಗದಂತೆ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಉತ್ತರ ಕನ್ನಡ ಕ್ಷೇತ್ರವನ್ನು ಜೆಡಿಎಸ್‌ಗೆ ಬಿಟ್ಟುಕೊಡಲು ಸಚಿವ ಆರ್.ವಿ.ದೇಶಪಾಂಡೆ ಹಾಗೂ ನನ್ನ ವಿರೋಧವಿದೆ. ಉತ್ತರ ಕನ್ನಡದಲ್ಲಿ ಜೆಡಿಎಸ್ ಗೆ ನೆಲೆ ಇಲ್ಲ. ಅನಂತಕುಮಾರ್ ಹೆಗಡೆಯನ್ನು ಸೋಲಿಸಲು ಜೆಡಿಎಸ್ ಬಳಿ ಸೂಕ್ತ ಅಭ್ಯರ್ಥಿಯಿಲ್ಲ.● ಮಾರ್ಗರೇಟ್ ಆಳ್ವಾ, ಕೇಂದ್ರದ ಮಾಜಿ ಸಚಿವೆ ಸೀಟು ಹಂಚಿಕೆಯಾದರೂ ತಳಮಟ್ಟದಲ್ಲಿ ಒಮ್ಮತ ಕಷ್ಟ. ಎರಡೂ ಪಕ್ಷಗಳಲ್ಲಿ ಪರಸ್ಪರ ಅಸಮಾಧಾನ ಪ್ರಾರಂಭವಾಗಿ ಎರಡೂ ಪಕ್ಷಗಳ ಕಾರ್ಯಕರ್ತರು ಪಕ್ಷದ ಆದೇಶ ಧಿಕ್ಕರಿಸಿ ಮೈತ್ರಿಕೂಟ ಅಭ್ಯರ್ಥಿ ಬಿಟ್ಟುಬೇರೆ ಅಭ್ಯರ್ಥಿ ಪರ ಕೆಲಸ ಮಾಡುವ ಸ್ಥಿತಿ ನಿರ್ಮಾಣವಾಗಲಿದೆ. ಒಂದೊಮ್ಮೆ ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಜೆಡಿಎಸ್‌ಗೆ ಬಿಟ್ಟುಕೊಟ್ಟಿರುವ ಕ್ಷೇತ್ರಗಳಲ್ಲಿ ಮನಪೂರ್ವಕವಾಗಿ ಕೆಲಸ ಮಾಡದೆ ಫಲಿತಾಂಶದಲ್ಲಿ ಏರು ಪೇರಾದರೆ ಚುನಾವಣೆ ನಂತರ ಮೈತ್ರಿ ಮುರಿದು ಬೀಳಲೂ ಬಹುದು. ಅಂತಿಮವಾಗಿ ಸರ್ಕಾರದ ಮೇಲೂ ಪರಿಣಾಮ ಬೀರಬಹುದೆಂದು ವಿಶ್ಲೇಷಿಸಲಾಗುತ್ತಿದೆ.