ಬೆಂಗಳೂರು: ಸೀಲ್‌ಡೌನ್ ಪ್ರದೇಶಗಳಲ್ಲಿ ಅದರಲ್ಲೂ ಪಾದರಾಯನಪುರ ಮತ್ತು ಹೊಂಗಸಂದ್ರದಲ್ಲಿ ಕೆಲಸ ಮಾಡುತ್ತಿರುವ ಪೊಲೀಸರು ಈಗ ಅಕ್ಷರಶಃ ಇಕ್ಕಟ್ಟಿಗೆ ಸಿಲುಕಿದ್ದಾರೆ. ಕೆಲಸ ಮಾಡುವುದಿಲ್ಲ ಎಂದು ಹೇಳುವಂತಿಲ್ಲ; ಹೇಳದೆ ಇರುವಂತೆಯೂ ಇಲ್ಲ. ಅದರಲ್ಲೂ ಪಾದರಾಯನಪುರದಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯ ಸಂಬಂಧಿಕರು, ಸ್ನೇಹಿತರು ಮಾತ್ರವಲ್ಲ; ಸ್ವಂತ ಮನೆಯವರೇ ಬೆಚ್ಚಿಬೀಳುತ್ತಾರೆ. ಪೊಲೀಸ್ ವಸತಿ ಗೃಹಗಳು ಹೊರತುಪಡಿಸಿ ಸ್ವಂತ ಹಾಗೂ ಬಾಡಿಗೆ ನೆಲೆಸಿರುವ ಪೊಲೀಸ್ ಸಿಬ್ಬಂದಿಯನ್ನು ಅಕ್ಕ-ಪಕ್ಕದ ನಿವಾಸಿಗಳು ಕೋವಿಡ್ ವಾರಿಯರ್ಸ್ ತರಹ ನೋಡದೆ, ಅನುಮಾನ ದಿಂದ ಕಾಣುತ್ತಿದ್ದಾರೆ.
ಇನ್ನು ದೂರದಲ್ಲಿರುವ ಸಂಬಂಧಿ ಕರ ಪೈಕಿ ಕೆಲವರಿಂದ ಮೆಚ್ಚುಗೆ ಮಾತುಗಳು ಕೇಳಿಬರುತ್ತಿದ್ದರೆ, ಹಲವರು, ಜೀವ ಇದ್ದರೆ, ಕೂಲಿ ಮಾಡಿಕೊಂಡಾದರೂ ಜೀವನ ನಡೆಸಬಹುದು, ಅದೇ ಇಲ್ಲವಾದ ಮೇಲೆ ಹೇಗೆ. ಕೆಲಸ ಬಿಟ್ಟು ಮನೆಗೆ ಬಾ ಎನ್ನುತ್ತಾರೆ. ಇದು ಮಾನಸಿಕವಾಗಿ ಕುಗ್ಗಿಸಲು ಕಾರಣವಾಗಿದೆ. ಹೀಗಾಗಿ 16 ದಿನಗಳಿಂದ ಮನೆಗೆ ಹೋಗಿಲ್ಲ.
ದೀಪಾಂಜಲಿನಗರದಲ್ಲಿ ಸ್ನೇಹಿತರೊಬ್ಬರ ಮನೆಯ ಮೇಲ್ಭಾಗದಲ್ಲಿರುವ ಕೊಠಡಿಯಲ್ಲೇ ವಾಸಿಸುತ್ತಿದ್ದೇನೆ. ಮಕ್ಕಳನ್ನು ವಿಡಿಯೋ ಕಾಲ್ ಮೂಲಕ ಮಾತನಾಡಿಸುತ್ತೇನೆ ಎನ್ನುತ್ತಾರೆ ಪಾದರಾಯನಪುರದ ಕರ್ತವ್ಯ ನಿರತ ಸಿಬ್ಬಂದಿ. ಈ ಎರಡು ಪ್ರದೇಶಗಳಲ್ಲಿ ಕೆಎಸ್‌ಆರ್‌ಪಿ ಹಾಗೂ ಜತೆಗೆ ಬೇಗೂರು ಮತ್ತು ಜೆ.ಜೆ.ನಗರ ಠಾಣೆ ವ್ಯಾಪ್ತಿಗೆ ಬರುವುದರಿಂದ ತಲಾ 60 ಮಂದಿ ಪೊಲೀಸರು ಸೇರಿ ನೂರಾರು ಸಿಬ್ಬಂದಿ ಹಗಲು-ರಾತ್ರಿ ಭದ್ರತಾ ಕಾರ್ಯದಲ್ಲಿ ನಿರತರಾಗಿದ್ದಾರೆ. ಸಾಮಾನ್ಯವಾಗಿ ಪೊಲೀಸ್ ಸಿಬ್ಬಂದಿ ಪೊಲೀಸ್ ವಸತಿ ಗೃಹ ಹಾಗೂ ಹಿರಿಯ ಸಿಬ್ಬಂದಿ ಸ್ವಂತ ಮನೆ ಹೊಂದಿದ್ದಾರೆ.
ಆದರೂ, ಕೆಲವರು ಮುನ್ನೆಚ್ಚರಿಕಾ ಕ್ರಮವಾಗಿ ಮನೆಗಳಿಗೆ ತೆರಳುತ್ತಿಲ್ಲ, ಲಾಡ್ಜ್ ಪರಿಚಯಸ್ಥರ ರೂಮ್‌ಗಳಲ್ಲಿ ಮಲಗುತ್ತಿದ್ದು, ಕೆಲಸಕ್ಕೆ ಹಾಜರಾಗುತ್ತಿದ್ದಾರೆ. ಪೊಲೀಸ್ ಇಲಾಖೆಗೆ ಸೇರಿದ ಮೇಲೆ ಸಹನೆ ಮುಖ್ಯ ಎಂದು ಹೆಸರು ಹೇಳಲಿಚ್ಛಿಸದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. ಪಾದರಾಯನಪುರದಲ್ಲಿ ಕರ್ತವ್ಯ ಮಾಡುವ ಪೊಲೀಸ್ ಸಿಬ್ಬಂದಿಗೆ ಬೆಳಗ್ಗೆ-ಸಂಜೆ ಆರೋಗ್ಯಾಧಿಕಾರಿಗಳು ತಪಾಸಣೆ ಮಾಡುತ್ತಾರೆ. ಆದರೂ ಕೆಲವೊಂದು ವಿಚಾರದಲ್ಲಿ ಮಾನಸಿಕವಾಗಿ ಕುಗ್ಗುತ್ತಾರೆ. ಹೀಗಾಗಿ ಕೆಲವರಿಗೆ ಕೌನ್ಸೆಲಿಂಗ್ ಅಗತ್ಯವಿದೆ ಎಂದು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.
ಸೀಲ್‌ಡೌನ್ ಮಾತ್ರವಲ್ಲ ನಗರದಲ್ಲಿ ಕೆಲಸ ಮಾಡುತ್ತಿರುವ ಪ್ರತಿಯೊಬ್ಬ ಸಿಬ್ಬಂದಿಗೆ ನಿರಂತರವಾಗಿ ಆರೋಗ್ಯ ತಪಾಸಣೆ ನಡೆಯುತ್ತಿದೆ. ಜತೆಗೆ ರಜೆಗಳನ್ನು ನೀಡಲು ಸೂಚಿಸಲಾಗಿದೆ. ಮುಂದಿನ ದಿನಗಳಲ್ಲಿ ಮಾನಸಿಕ ಸ್ಥೈರ್ಯ ತುಂಬುವ ಕೆಲಸವನ್ನೂ ಮಾಡಲಾಗುವುದು.
– ಭಾಸ್ಕರ್ ರಾವ್, ನಗರ ಪೊಲೀಸ್ ಆಯುಕ್ತರು.
– ಮೋಹನ್ ಭದ್ರಾವತಿ