Advertisement

ಸೆ. 13: ಕದ್ರಿಯಲ್ಲಿ ರಾಷ್ಟ್ರ ಮಟ್ಟದ “ಶ್ರೀಕೃಷ್ಣ ವೇಷ ಸ್ಪರ್ಧೆ’

08:25 AM Sep 11, 2017 | Harsha Rao |

ಮಂಗಳೂರು: ಕಲ್ಕೂರ ಪ್ರತಿಷ್ಠಾನವು ಕಳೆದ ಮೂರು ದಶಕಗಳಿಂದ ನಡೆಸುತ್ತಿರುವ ರಾಷ್ಟ್ರ ಮಟ್ಟದ ಮಕ್ಕಳ ಉತ್ಸವ “ಶ್ರೀಕೃಷ್ಣ ವೇಷ ಸ್ಪರ್ಧೆ’ ಈ ಬಾರಿ ಸೆ. 13ರಂದು ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಜರಗಲಿದೆ.

Advertisement

ಮಕ್ಕಳಲ್ಲಿ ಧಾರ್ಮಿಕ ಪ್ರಜ್ಞೆ ಬೆಳೆಸುವ ಪ್ರಯತ್ನವಾಗಿ ಮತ್ತು ಅವರಲ್ಲಿನ ಪ್ರತಿಭೆಯನ್ನು ಗುರುತಿಸಿ ಬೆಳೆಸುವ ಸದುದ್ದೇಶದಿಂದ ಈ ಸ್ಪರ್ಧೆಯನ್ನು ಕಳೆದ ಮೂರು ದಶಕಗಳಿಂದ ಆಯೋಜಿಸಿಕೊಂಡು ಬರಲಾಗುತ್ತಿದೆ. ಸೆ. 13ರಂದು ಬೆಳಗ್ಗೆ 9ರಿಂದ ರಾತ್ರಿ 12ರ ತನಕ ಒಟ್ಟು 30 ವಿಭಾಗಗಳಲ್ಲಿ ಏಕಕಾಲದಲ್ಲಿ 8 ವೇದಿಕೆಗಳಲ್ಲಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಮಧ್ಯಾಹ್ನ 1ರಿಂದ ಶ್ರೀ ಕೃಷ್ಣ ವೇಷ ಸ್ಪರ್ಧೆ ಆರಂಭವಾಗಲಿದೆ. ರಾತ್ರಿ 12ರ ವರೆಗೆ ವಿವಿಧ ಸಾಹಿತ್ಯ-ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಈ ಉತ್ಸವದಲ್ಲಿ ಜೋಡಿಸಲಾಗಿದೆ ಎಂದು ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ್‌ ಕುಮಾರ್‌ ಕಲ್ಕೂರ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

30 ವಿಭಾಗಗಳು
ಶ್ರೀಕೃಷ್ಣ ವೇಷ ಸ್ಪರ್ಧೆ ಈ ಬಾರಿ ವಿಶೇಷವಾಗಿ ರಂಗೋಲಿಯಲ್ಲಿ ಶ್ರೀಕೃಷ್ಣ ರಚನೆ, ಶ್ರೀಕೃಷ್ಣ  ವರ್ಣ ವೈಭವ, ಶ್ರಿಕೃಷ್ಣ ಗಾನವೈಭವ ವಿಭಾಗಗಳನ್ನು ಒಳಗೊಂಡಂತೆ ಒಟ್ಟು 30 ವಿಭಾಗಗಳಲ್ಲಿ ಜರಗಲಿರುವುದು. ಕದ್ರಿ ದೇಗುಲದ ಒಟ್ಟು ಆವರಣದಲ್ಲಿ, ಶ್ರೀ ಮಹಾಗಣಪತಿ ದೇವಸ್ಥಾನ, ಅಭಿಷೇಕ ಮಂದಿರ, ಕದ್ರಿಕೆರೆ ಅಶ್ವತ್ಥಕಟ್ಟೆ ಬಳಿ, ಶ್ರೀ ಕೃಷ್ಣ ಜನ್ಮ ಮಹೋತ್ಸವ ಸಮಿತಿ ವೇದಿಕೆ, ಅಭಿಷೇಕ ಮಂದಿರ 1ನೇ ಮಹಡಿ, ಕಲ್ಯಾಣ ಮಂಟಪ, ಮಂಜುಶ್ರೀ ಹಾಗೂ ಪ್ರಧಾನ ವೇದಿಕೆಗಳಲ್ಲಿ ಏಕಕಾಲದಲ್ಲಿ ನಡೆಯಲಿದೆ.

ಕಂದ ಕೃಷ್ಣ ವಿಭಾಗ: 1 ವರ್ಷದ ಕೆಳಗಿನ ಮಕ್ಕಳು.

ಮುದ್ದು ಕೃಷ್ಣ: 1 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ 2 ವರ್ಷಕ್ಕಿಂತ ಕೆಳಗಿನ.

Advertisement

ತುಂಟ ಕೃಷ್ಣ: 2 ವರ್ಷಕ್ಕಿಂತ ಮೇಲ್ಪಟ್ಟ ಹಾಗೂ 3 ವರ್ಷಕ್ಕಿಂತ ಕೆಳಗಿನ.

ಬಾಲಕೃಷ್ಣ: ಬಾಲವಾಡಿ, ಅಂಗನವಾಡಿ, ಎಲ್‌ಕೆಜಿ.

ಕಿಶೋರಕೃಷ್ಣ: ಯುಕೆಜಿ ಮತ್ತು 1ನೇ ತರಗತಿ.

ಶ್ರೀ ಕೃಷ್ಣ: 2, 3, 4ನೇ ತರಗತಿಗಳ ವಿದ್ಯಾರ್ಥಿಗಳು.

ಗೀತಾ ಕೃಷ್ಣ : 7ನೇ ತರಗತಿ ವರೆಗೆ (ವೇಷಭೂಷಣದೊಂದಿಗೆ ಗೀತೋಪದೇಶದ ಚಿತ್ರಣಗೀತೆ. ಯಾವುದಾದರೂ ಶ್ಲೋಕದ ಪಠಣದೊಂದಿಗೆ).

ಯಕ್ಷ ಕೃಷ್ಣ: ಹತ್ತನೇ ತರಗತಿ (ಯಕ್ಷಗಾನ ವೇಷಭೂಷಣದೊಂದಿಗೆ).

ರಾಧಾಕೃಷ್ಣ: ಏಳನೇ ತರಗತಿ ಮಕ್ಕಳು (ಜೋಡಿ).

ಯಶೋದಾಕೃಷ್ಣ: ಯಾವುದೇ ವಯೋನಿರ್ಬಂಧವಿಲ್ಲದೆ ಮಹಿಳೆ ಯಶೋದೆಯಾಗಿ ಯಾವುದೇ ಮಗು ಕೃಷ್ಣನಾಗಿ ಭಾಗವಹಿಸಬಹುದು. ಮಗು 12 ವರ್ಷದೊಳಗಿನವರಾಗಿರಬೇಕು.

ಶಂಖನಾದ: 7ನೇ ತರಗತಿ ವರೆಗೆ. (ಸಾಂಪ್ರದಾಯಿಕ ಉಡುಗೆಯೊಂದಿಗೆ)

ಶಂಖ ಉದ್ಘೋಷ: 7ನೇ ತರಗತಿ ಮೇಲ್ಪಟ್ಟು (ಸಾಂಪ್ರದಾಯಿಕ ಉಡುಗೆಯೊಂದಿಗೆ).

“ದೇವಕಿ ಕೃಷ್ಣ: ಈ ಹಿಂದೆ ಕದ್ರಿ ಶ್ರೀ ಕ್ಷೇತ್ರದಲ್ಲಿ ಶ್ರೀ ಕೃಷ್ಣ ವೇಷ ಸ್ಪರ್ಧೆಯಲ್ಲಿ ಕೃಷ್ಣ ವೇಷ ಧರಿಸಿ ಸ್ಪರ್ಧಾಳುಗಳಾಗಿ ಭಾಗವಹಿಸಿದ ತಾಯಂದಿರು ದೇವಕಿಯಾಗಿ ಅಥವಾ ಯಶೋದೆಯಾಗಿ ಭಾಗವಹಿಸಬಹುದಾಗಿದೆ. ಈ ಸ್ಪರ್ಧಾಳು ತಮ್ಮ ಮಗು ಅಥವಾ ಯಾವುದೇ ಕೃಷ್ಣವೇಷಧಾರಿ ಮಗುವಿನೊಂದಿಗೆ ಬರಬಹುದು.

“ವಸುದೇವ ಕೃಷ್ಣ (ಮುಕ್ತ ವಿಭಾಗ): ಪುರುಷ ವಸುದೇವನಾಗಿ ಮಗುವನ್ನು ಫ್ಲಾಸ್ಟಿಕ್‌ ರಹಿತವಾದ ಬೆತ್ತ ಅಥವಾ ಬೀಳು ಇನ್ನಿತರ ಬುಟ್ಟಿಗಳಲ್ಲಿ ತಲೆಯ ಮೇಲೆ ಹೊತ್ತು ಸಾಂಪ್ರದಾಯಿಕ ಉಡುಗೆಯೊಂದಿಗೆ ಭಾಗವಹಿಸಬಹುದು.

“ನಂದ ಗೋಕುಲ’ (ಸಮೂಹ ವಿಭಾಗ): ಕೃಷ್ಣನ ಯಾವುದೇ ಸನ್ನಿವೇಶವನ್ನು (ಕನಿಷ್ಠ 5 ಜನ) ಗುಂಪಿನಲ್ಲಿ ಸ್ತಬ್ಧ ಚಿತ್ರದೃಶ್ಯ ಸ್ವರೂಪದೊಂದಿಗೆ ಪ್ರದರ್ಶಿಸಲು ಅವಕಾಶ ವಯೋಮಿತಿ ನಿರ್ಬಂಧವಿಲ್ಲ.

“ಬಾಲಕೃಷ್ಣ ರಸಪ್ರಶ್ನೆ: 7ನೇ ತರಗತಿ ವರೆಗಿನ (ಕೃಷ್ಣವೇಷ ಸ್ಪರ್ಧೆಯಲ್ಲಿ ಭಾಗವಹಿಸಿದ ಮಕ್ಕಳು ಭಾಗವಹಿಸಬಹುದು.)

ಶ್ರೀಕೃಷ್ಣ ರಸಪ್ರಶ್ನೆ ಸ್ಪರ್ಧೆ: 7ನೇ ತರಗತಿ ಮೇಲ್ಪಟ್ಟ .

“ಛಾಯಾಕೃಷ್ಣ’: ಶ್ರೀಕೃಷ್ಣ ವೇಷಧಾರಿಯಾಗಿ ಛಾಯಾಚಿತ್ರಕ್ಕೆ ಅನುಕೂಲಕರವಾಗಿ ಆಕರ್ಷಕ ಭಂಗಿಯಲ್ಲಿ ಎಲ್ಲ ಸ್ಪರ್ಧಾಳುಗಳು ಪಾಲ್ಗೊಳ್ಳಬಹುದು.

ಶ್ರೀಕೃಷ್ಣ ವರ್ಣ ವೈಭವ’ ಚಿತ್ರಕಲಾ ಸ್ಪರ್ಧೆ: ಮಕ್ಕಳಿಗಾಗಿ ಚಿತ್ರಕಲಾ ಸ್ಪರ್ಧೆ. ರಂಗೋಲಿಯಲ್ಲಿ ಶ್ರೀಕೃಷ್ಣ ರಚನೆ: ಬಾಲವಿಭಾಗ (5, 6, 7ನೇ ತರಗತಿ), ಕಿಶೋರ ವಿಭಾಗ (8, 9, 10ನೇ ತರಗತಿ) ಮುಕ್ತ ವಿಭಾಗದಲ್ಲಿ  ಹಾಗೂ ಶ್ರೀಕೃಷ್ಣ ಗಾನವೈಭವ ಸ್ಪರ್ಧೆ ಬೆಳಗ್ಗೆ 9.30ರಿಂದ ಜರಗಲಿರುವುದು.

ವಿಶೇಷ ಬಹುಮಾನಗಳು
ಭಾಗವಹಿಸುವ ಎಲ್ಲ ಸ್ಪರ್ಧಾಳುಗಳಿಗೆ ಉಡುಗೊರೆಗಳು ಹಾಗೂ ಪ್ರಶಂಸಾ ಪತ್ರ ನೀಡಲಾಗುವುದು. ಎಲ್ಲ ವಿಭಾಗದ ವಿಜೇತರಿಗೆ ಜತೆಗೆ ಪ್ರಥಮ, ದ್ವಿತೀಯ ಮತ್ತು ತೃತೀಯ ಬಹುಮಾನಗಳನ್ನು ನೀಡಲಾಗುವುದು. ಈ ಉತ್ಸವದ ಬಗ್ಗೆ ಹೆಚ್ಚಿನ ವಿವರಗಳಿಗೆ: ಕಲ್ಕೂರ ಪ್ರತಿಷ್ಠಾನ, ಶ್ರೀ ಕೃಷ್ಣ ಸಂಕೀರ್ಣ, ಮಹಾತ್ಮಾ ಗಾಂಧಿ ರಸ್ತೆ, ಕೊಡಿಯಾಲ್‌ಬೈಲ್‌, ಮಂಗಳೂರು ಅವರನ್ನು ಸಂಪರ್ಕಿಸಬಹುದು ಎಂದು ಪ್ರದೀಪ್‌ ಕುಮಾರ್‌ ಕಲ್ಕೂರ ವಿವರಿಸಿದರು.

ಸಮಿತಿ ಸದಸ್ಯರಾದ ಕದ್ರಿ  ನವನೀತ ಶೆಟ್ಟಿ, ಜಿ.ಕೆ. ಭಟ್‌ ಸೇರಾಜೆ, ಕೆ.ಎಸ್‌. ಕಲ್ಲೂರಾಯ, ದಯಾನಂದ ಕಟೀಲು, ಸುಧಾಕರ ರಾವ್‌ ಪೇಜಾವರ, ತಾರಾನಾಥ ಶೆಟ್ಟಿ ಬೋಳಾರ, ರತ್ನಾಕರ ಜೈನ್‌, ಪ್ರಭಾಕರ ರಾವ್‌ ಪೇಜಾವರ, ವಿಜಯಲಕ್ಷ್ಮೀ ಶೆಟ್ಟಿ, ಪೂರ್ಣಿಮಾ ರಾವ್‌ ಪೇಜಾವರ ಮತ್ತಿತರರು ಉಪಸ್ಥಿತರಿದ್ದರು.

ವಿಶೇಷತೆಗಳು
– 30 ವಿಭಾಗಗಳಲ್ಲಿ, ಏಕ ಕಾಲದಲ್ಲಿ ಕದ್ರಿದೇಗುಲದ ಆವರಣದ ಒಟ್ಟು 8 ಸ್ಥಳಗಳಲ್ಲಿ ಸ್ಪರ್ಧೆಗಳು

– 2,000ಕ್ಕೂ ಅಧಿಕ ಮಕ್ಕಳು ಭಾಗವಹಿಸುವ ನಿರೀಕ್ಷೆ

– ರಂಗೋಲಿಯಲ್ಲಿ ಶ್ರೀಕೃಷ್ಣ ರಚನೆ -ಮುಕ್ತವಿಭಾಗ ಸ್ಪರ್ಧೆ

– ಅತೀ ಹೆಚ್ಚಿನ ಸ್ಪರ್ಧಾಳುಗಳು ಭಾಗವಹಿಸಿದ ವಿದ್ಯಾ ಸಂಸ್ಥೆಗೆ ಪಾರಿತೋಷಕ

– ಯಾವುದೇ ಪ್ರವೇಶ ಶುಲ್ಕ ಇಲ್ಲ.

– ಸ್ಪರ್ಧಿಸುವ ಮಕ್ಕಳಿಗೆ ಬಿಸಿ ಹಾಲು, ಪೇಡಾ, ಐಸ್‌ಕ್ರೀಂ, ಚಾಕಲೆಟ್‌ ನೀಡಲಾಗುವುದು.

– ಭಾಗವಹಿಸುವ ಅಶಕ್ತ ಅಂಗವಿಕಲ ಹಾಗೂ ಬುದ್ಧಿಮಾಂದ್ಯ ಮಕ್ಕಳಿಗೆ ಮತ್ತು ಸಂಘಟನೆಗಳಿಗೆ ವಿಶೇಷವಾಗಿ ಪ್ರೋತ್ಸಾಹ ನೀಡಲಾಗುವುದು.

Advertisement

Udayavani is now on Telegram. Click here to join our channel and stay updated with the latest news.

Next