ಮುಂಬಯಿ: ಕೊಯ್ನಾನಗರದಲ್ಲಿ ರಾಜ್ಯ ವಿಪತ್ತು ನಿರ್ವಹಣ ದಳ (ಎಸ್‌ಡಿಆರ್‌ಎಫ್) ಮತ್ತು ಪೊಲೀಸ್ ತರಬೇತಿ ಉಪಕೇಂದ್ರವನ್ನು ನಿರ್ಮಿಸುವ ಬಗ್ಗೆ ವಿವರವಾದ ಪ್ರಸ್ತಾವನೆಯನ್ನು ಮುಂದಿನ ಒಂದು ತಿಂಗಳೊಳಗೆ ಸಿದ್ಧಪಡಿಸಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಸಲ್ಲಿಸಬೇಕೆಂದು ಗೃಹ ವ್ಯವಹಾರಗಳ ರಾಜ್ಯ ಸಚಿವ (ಗ್ರಾಮೀಣ) ಶಂಭುರಾಜ್ ದೇಸಾಯಿ ನಿರ್ದೇಶಿಸಿದ್ದಾರೆ.
ಕೊಯ್ನಾನಗರದಲ್ಲಿರುವ ರಾಜ್ಯ ವಿಪತ್ತು ನಿರ್ವಹಣ ದಳ ಮತ್ತು ಪೊಲೀಸ್ ತರಬೇತಿ ಉಪ ಕೇಂದ್ರದ ನಿರ್ಮಾಣಕ್ಕೆ ಸಂಬಂಧಿಸಿದಂತೆ ಸಭೆ ನಡೆಸಿದ ಅವರು, ಸಿಎಂ ಠಾಕ್ರೆ ಈ ಹಿಂದೆ ಕೊಯ್ನಾ ಅಣೆಕಟ್ಟಿಗೆ ಭೇಟಿ ಸಮಯದಲ್ಲಿ ಬಹುಪಯೋಗಿ ಯೋಜನೆಗೆ ಅನುಮೋದನೆ ನೀಡುವುದಾಗಿ ಆಶ್ವಾಸನೆ ನೀಡಿದ್ದರು. ಆದ್ದರಿಂದ ಅಧಿಕಾರಿಗಳು ಯೋಜನೆಯ ನೀಲನಕ್ಷೆ ಸಿದ್ಧಪಡಿಸಬೇಕು. ಈ ಯೋಜನೆಯನ್ನು ಆದಷ್ಟು ಬೇಗ ಪೂರ್ಣ ಗೊಳಿಸಲು ಆಡಳಿತವು ತತ್‌ಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಮಳೆಗಾಲದಲ್ಲಿ ಸಾಂಗ್ಲಿ, ಸತಾರಾ ಮತ್ತು ಕೊಲ್ಲಾಪುರ ಪ್ರದೇಶಗಳಲ್ಲಿ ಪ್ರವಾಹ ಉಂಟಾಗುತ್ತದೆ. ಆ ಸಮಯದಲ್ಲಿ ಪರಿಹಾರ ಕಾರ್ಯಗಳಿಗಾಗಿ ಎನ್‌ಡಿಆರ್‌ಎಫ್, ಪೊಲೀಸ್, ಎಸ್‌ಆರ್‌ಪಿಎಫ್ ತಂಡಗಳ ಅಗತ್ಯವಿರುತ್ತದೆ.
ಪರಿಹಾರ ಕಾರ್ಯಗಳನ್ನು ತ್ವರಿತಗೊಳಿಸಲು ಕೊಯ್ನಾನಗರದಲ್ಲಿ ಎನ್‌ಡಿಆರ್‌ಎಫ್ ಮತ್ತು ಪೊಲೀಸ್ ತರಬೇತಿ ಉಪ ಕೇಂದ್ರವನ್ನು ಸ್ಥಾಪಿಸುವ ಆವಶ್ಯಕತೆಯಿದೆ. ಈ ಪ್ರದೇಶದಲ್ಲಿ ಎಲ್ಲ ಸೌಲಭ್ಯಗಳು ಲಭ್ಯವಿವೆ. ಈ ಎಸ್‌ಡಿಆರ್‌ಎಫ್ ಮತ್ತು ಪೊಲೀಸ್ ತರಬೇತಿ ಉಪಕೇಂದ್ರಕ್ಕಾಗಿ 80 ಎಕ್ರೆ ಭೂಮಿ ಲಭ್ಯವಿದೆ. ಕಂದಾಯ ಇಲಾಖೆಯ ಈ ಸ್ಥಳವನ್ನು ಗೃಹ ಇಲಾಖೆಗೆ ವರ್ಗಾಯಿಸಬೇಕಾಗಿದೆ. ಇದಕ್ಕಾಗಿ ಕಂದಾಯ ಇಲಾಖೆಯಿಂದ ಗೃಹ ಇಲಾಖೆಗೆ ಅಥವಾ ಪೊಲೀಸ್ ಮಹಾನಿರ್ದೇಶಕರ ಕಚೇರಿಗೆ ಜಿಲ್ಲಾಧಿಕಾರಿಯ ಮೂಲಕ ಜಮೀನನ್ನು ಹಸ್ತಾಂತರಿಸುವ ಕುರಿತು ಪ್ರಸ್ತಾವನೆಯನ್ನು ಸಲ್ಲಿಸುವಂತೆ ಸತಾರ ಪೊಲೀಸ್ ವರಿಷ್ಠಾಧಿಕಾರಿಗೆ ದೇಸಾಯಿ ನಿರ್ದೇಶಿಸಿದರು.
ಸಭೆಯಲ್ಲಿ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಆನಂದ್ ಲಿಮಾಯೆ, ಪೊಲೀಸ್ ಮಹಾನಿರ್ದೇಶಕ ಸಂಜಯ್ ಪಾಂಡೆ, ಗೃಹ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸಂಜಯ್ ಸಕ್ಸೆನಾ, ಸಹ ಪೊಲೀಸ್ ಮಹಾನಿರ್ದೇಶಕ ಎಸ್. ಜಗನ್ನಾಥನ್, ಹಣಕಾಸು ಜಂಟಿ ಕಾರ್ಯದರ್ಶಿ ವಿವೇಕ್ ದಹಿಫಲೆ, ಸತಾರಾ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಕುಮಾರ್ ಬನ್ಸಾಲ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.