Advertisement

ಎಸ್‌ಡಿಪಿ ಯೋಜನೆ ಮಾಹಿತಿಯೇ ಗೊತ್ತಿಲ್ಲ!

01:00 PM Mar 24, 2017 | |

ದಾವಣಗೆರೆ: ಡಾ|ಡಿ.ಎಂ.ನಂಜುಂಡಪ್ಪ ವರದಿ ಆಧರಿಸಿ, ಹಿಂದುಳಿದ ಪ್ರದೇಶಗಳ ಅಭಿವೃದ್ಧಿಗೆ ರಚಿಸಲಾದ ವಿಶೇಷ ಅಭಿವೃದ್ಧಿ ಕಾರ್ಯಕ್ರಮ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಮಾಹಿತಿಯೇ ಇಲ್ಲ! ಗುರುವಾರ ಜಿಲ್ಲಾ ಪಂಚಾಯತ್‌ ಮಿನಿ ಸಭಾಂಗಣದಲ್ಲಿ ಜಿಪಂ ಸಿಇಒ ಅಧ್ಯಕ್ಷತೆಯಲ್ಲಿ ನಡೆದ ಎಸ್‌ಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ಈ ಸತ್ಯ ಬೆಳಕಿಗೆ ಬಂತು. 

Advertisement

ಎಸ್‌ಡಿಪಿ ಅನುದಾನ ಕುರಿತು ಮಾಹಿತಿ ಕೇಳಿದರೆ, ಇಡೀ ಇಲಾಖೆಯ ಮಾಹಿತಿ ಇಲ್ಲವೇ ಟಿಎಸ್‌ಪಿ, ಎಸ್‌ಸಿಪಿ ಯೋಜನೆಯ ಮಾಹಿತಿ ನೀಡಿದರು. ಅಷ್ಟೇ ಅಲ್ಲ, ಕೆಲ ಇಲಾಖೆ ಅಧಿಕಾರಿಗಳು ಯೋಜನೆಯ ಕಟ್ಟುಪಾಡುಗಳನ್ನು ಮೀರಿ ಮನಬಂದ ಹಾಗೆ ಖರ್ಚು ಮಾಡಿದ್ದ ಲೆಕ್ಕ ಬಯಲಾಯ್ತು. ನಂಜುಂಡಪ್ಪ ವರದಿ ಪ್ರಕಾರ ಜಿಲ್ಲೆಯ ಚನ್ನಗಿರಿ, ಹರಪನಹಳ್ಳಿ ಅತ್ಯಂತ ಹಿಂದುಳಿದ, ಹೊನ್ನಾಳಿ, ಜಗಳೂರು ಅತೀ ಹಿಂದುಳಿದ ತಾಲ್ಲೂಕುಗಳಾಗಿ ಗುರುತಿಸಲ್ಪಟ್ಟಿವೆ.

ಇದಕ್ಕಾಗಿ ವಿವಿಧ ಇಲಾಖೆಗಳ ಮೂಲಕ ವಿಶೇಷ ಅನುದಾನ ನೀಡಿ, ಪ್ರದೇಶ, ಜನರ ಅಭಿವೃದ್ಧಿಗೆ ಪ್ರಯತ್ನಿಸಲಾಗುತ್ತಿದೆ. ಆದರೆ, ಸಭೆಯಲ್ಲಿ ಪಾಲ್ಗೊಂಡ ಈ ಕೆಲ ಅಧಿಕಾರಿಗಳಿಗೆ ಈ ಕುರಿತ ಕನಿಷ್ಠ ಮಾಹಿತಿ ಇದ್ದಂತೆ ಕಾಣಲಿಲ್ಲ. ಕೃಷಿ ಇಲಾಖೆಯ ಪ್ರಗತಿ ಪರಿಶೀಲನೆ ವೇಳೆ ಜಂಟಿ ನಿರ್ದೇಶಕ ಸದಾಶಿವ ಯೋಜನೆ ಕುರಿತು ಯಾವುದೇ ಮಾಹಿತಿ ಇಲ್ಲದೇ ಇರುವುದನ್ನು ಬಹಿರಂಗವಾಗಿ ತೋರಿಸಿಕೊಂಡರು.

ಅವರು ಈ ಮೊದಲು ಜಿಪಂ ಅಧಿಕಾರಿಗಳಿಗೆ ಕೊಟ್ಟಿದ್ದ ಮಾಹಿತಿ, ಸಭೆಗೆ ಕೊಟ್ಟ ಮಾಹಿತಿ ಸಂಪೂರ್ಣ ಭಿನ್ನವಾಗಿತ್ತು. ಇದರಿಂದ ಕೊಂಚ ಕೋಪಗೊಂಡ ಸಿಇಒ ಎಸ್‌. ಅಶ್ವತಿ, ನೀವು ಸಭೆಗೆ ಕೊಡುತ್ತಿರುವ ಮಾಹಿತಿಯೇ ಬೇರೆ ಇದೆ. ವಾಸ್ತವದ ಮಾಹಿತಿಯೇ ಬೇರೆ ಇದೆ. ಇದೇನಿದು? ಎಂದು ತರಾಟೆಗೆ ತೆಗೆದುಕೊಂಡರು. ಇದೇ ರೀತಿ ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕರು ತಮ್ಮ ಇಲಾಖೆಯ ವರದಿ ಓದಲಾಗದೆ ಪರದಾಡಿದರು.

ಕೊನೆಗೆ ಅಶ್ವತಿ, ಇದೇನಿದು? ನೀವೇ ಕೊಟ್ಟ ವರದಿ ಓದಲು ನಿಮಗೆ ಬಾರದೇ ಇದ್ದರೆ ಹೇಗೆ? ನೀವೆಲ್ಲಾ ಸಭೆಗೆ ಬರುವಾಗ ಸಮರ್ಪಕ ಮಾಹಿತಿ ಇಟ್ಟುಕೊಂಡು ಬರಬೇಕು ಎಂಬುದು ಗೊತ್ತಾಗುವುದಿಲ್ಲವೇ? ಎಂದು ಪ್ರಶ್ನಿಸಿದರು. ಆಗ ಅಧಿಕಾರಿ, ನಾನು 2 ದಿನಗಳ ಹಿಂದಷ್ಟೇ ಅಧಿಕಾರ ಸೀಕರಿಸಿದ್ದೇನೆ. ಪೂರ್ಣ ಮಾಹಿತಿ ಇಲ್ಲ ಎಂದಾಗ, ಜಿಪಂ ಮುಖ್ಯ ಯೋಜನಾಧಿಕಾರಿ ಪಿ. ಬಸವನಗೌಡ, ಮಾಹಿತಿ ಇಲ್ಲ ಎಂದು ಹೇಳಬಾರದು.

Advertisement

ಮಾಹಿತಿ ಪಡೆದುಕೊಂಡು ಬರಬೇಕು. ನಿಮ್ಮ ನಿರ್ದೇಶಕರಿಗೆ ಮಾಹಿತಿ ಕೊಡಲು ಹೇಳಿ ಎಂದು ತಿಳಿಸಿದರು. ಬೆಸ್ಕಾಂನ ಪ್ರಗತಿ ಪರಿಶೀಲನೆ ವೇಳೆ ಸಹ ಇಂತಹುದ್ದೇ ಸನ್ನಿವೇಶ ನಡೆಯಿತು. ಸಹಾಯಕ ಕಾರ್ಯಪಾಲಕ ಅಭಿಯಂತರ ಸುಭಾಷ್‌ ಚಂದ್ರ ಇಲಾಖೆಯ ಪ್ರಗತಿ ಕುರಿತು ತಿಳಿಸುವಾಗ, ನಾವು ಅನುದಾನವನ್ನು ಎಲ್ಲಾ ತಾಲೂಕುಗಳಿಗೆ ಬಳಸಿಕೊಂಡಿದ್ದೇವೆ. ಎಲ್ಲಿ ಅಗ್ಯವಿದೆಯೋ ಅಲ್ಲಿಗೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ ಎಂದರು. 

ಮಧ್ಯ ಪ್ರವೇಶಿಸಿದ ಬಸವನಗೌಡ, ನೀವು ಆ ರೀತಿ ಎಲ್ಲಾ ತಾಲೂಕಿಗೆ ಈ ಅನುದಾನ ಬಳಕೆ ಮಾಡಿಕೊಳ್ಳಲು ಬರುವುದಿಲ್ಲ. ಕೇವಲ ವರದಿಯಲ್ಲಿ ಹೆಸರಿಸಲಾಗಿರುವ ತಾಲೂಕುಗಳಲ್ಲಿ ಮಾತ್ರ ಬಳಕೆಮಾಡಿಕೊಳ್ಳಬೇಕು ಎಂದರು. ಸಿ. ಅಶ್ವತಿ, ನೀವು ಸರ್ಕಾರಕ್ಕೆ ದುಡ್ಡು ಖರ್ಚಾಗಿದೆ ಎಂದು ವರದಿ ನೀಡಿದೀರಿ. ಇಲ್ಲಿ ನೋಡಿದರೆ ಹಣ ಖರ್ಚು ಆಗಿಲ್ಲ. ಏನಿದು? ಎಂದು ತರಾಟೆಗೆ ತೆಗೆದುಕೊಂಡು. ಸುಭಾಷ್‌ಚಂದ್ರ, ಸರಿಪಡಿಸುವುದಾಗಿ ಹೇಳಿದರು. 

ಜಿಪಂ ಮುಖ್ಯ ಲೆಕ್ಕಾಧಿಕಾರಿ ಆಂಜನೇಯ, ಜಿಲ್ಲಾ ಆರೋಗ್ಯಾಧಿಕಾರಿ ಡಾ| ತ್ರಿಪುಲಾಂಬ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕಿ ಎಚ್‌.ಎಂ. ಪ್ರೇಮ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವೇದಮೂರ್ತಿ ಇತರೆ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next