Advertisement

ಎಸ್‌ಡಿಎಂ ಹಳೆ ವಿದ್ಯಾರ್ಥಿಗಳ ಹಾಡಿನ ಚಿಯರ್‌ ಅಪ್‌!

02:39 PM May 05, 2017 | |

ಉಳಿದ ಪಂದ್ಯಗಳಲ್ಲಾದರೂ ಆರ್‌ಸಿಬಿ ಗೆಲ್ಲಲಿ
ಉಡುಪಿ: ಐಪಿಎಲ್‌ 10ನೇ ಆವೃತ್ತಿಯ ಪಂದ್ಯಾವಳಿಯಲ್ಲಿ ರಾಜ್ಯದ ರಾಯಲ್‌ ಚಾಲೆಂಜರ್ ಬೆಂಗಳೂರು ತಂಡ ಈಗಾಗಲೇ ಹೊರಬಿದ್ದಿದೆ. ತಂಡ ತಳ ಕಂಡಿರುವ ಹಂತದಲ್ಲೇ ಕೊಹ್ಲಿ ಪಡೆಗೆ ಚಿಯರ್‌ ಅಪ್‌ ನೀಡಲು ಉಜಿರೆ ಎಸ್‌ಡಿಎಂ ಕಾಲೇಜಿನ ಹಳೆ ವಿದ್ಯಾರ್ಥಿಗಳು ಆಲ್ಬಂ ಹಾಡೊಂದನ್ನು ತಯಾರಿಸಿದ್ದರು. ಯೂಟ್ಯೂಬ್‌ನಲ್ಲಿ 2 ವಾರದೊಳಗೆ 69 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿ ಮೆಚ್ಚುಗೆ ಸೂಚಿಸಿದ್ದಾರೆ. 

Advertisement

ವಿಶ್ವದ ಶ್ರೀಮಂತ ಕ್ರಿಕೆಟ್‌ ಲೀಗ್‌ ಐಪಿಎಲ್‌ನಲ್ಲಿ ವಿರಾಟ್‌ ಕೊಹ್ಲಿ ನಾಯಕತ್ವದ ಆರ್‌ಸಿಬಿ ಅಭಿಮಾನಿಗಳಿಗೇನೂ ಕಡಿಮೆಯಿಲ್ಲ. ಪ್ರತಿ ಬಾರಿಯೂ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲೊಂದಾಗಿರುವ ಆರ್‌ಸಿಬಿ ಈ ವರೆಗೂ ಚಾಂಪಿಯನ್‌ ಆಗದಿದ್ದರೂ ಅಭಿಮಾನಕ್ಕೇನೂ ಬರವಿಲ್ಲ. ಅದೇ ರೀತಿ ಮಂಗಳೂರಿನ “ವೇಕ್‌ ಅಪ್‌ ರಾಕ್‌ ಬ್ಯಾಂಡ್‌’ ತಂಡವೊಂದು ಹಾಡಿನ ಆಲ್ಬಂ ಚಿತ್ರೀಕರಿಸಿ, ಎಡಿಟಿಂಗ್‌ ಮಾಡಿ ಯೂಟ್ಯೂಬ್‌ನಲ್ಲಿ ಅಪ್‌ಲೋಡ್‌ ಮಾಡುವುದರೊಂದಿಗೆ ಮಲ್ಯರ ಹುಡುಗರಿಗೆ ಉತ್ಸಾಹ ನೀಡುವ ಪ್ರಯತ್ನ ಮಾಡಿದ್ದರು. ಆದರೆ ಇದು ಫ‌ಲಕಾರಿಯಾಗಲಿಲ್ಲ ಎಂಬುದು ಬೇರೆ ಮಾತು.

69 ಸಾವಿರ ದಾಟಿದ ವೀಕ್ಷಕರ ಸಂಖ್ಯೆ: ಕನ್ನಡ, ತುಳುವಿನಲ್ಲಿರುವ ಈ ಹಾಡನ್ನು ಯೂಟ್ಯೂಬ್‌ನಲ್ಲಿ ಇದುವರೆಗೆ ದಾಖಲೆ ಎನ್ನುವಂತೆ 69 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. 2.17 ನಿಮಿಷದ ಈ ಹಾಡನ್ನು ಅಪ್‌ಲೋಡ್‌ ಮಾಡಿದ ಎರಡೇ ವಾರದಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ವೀಕ್ಷಿಸಿರುವುದು ವಿಶೇಷ. ಅದರಲ್ಲೂ ಮುಖ್ಯವಾಗಿ ಮೊದಲ ದಿನವೇ 11 ಸಾವಿರಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಾರೆ. 5 ದಿನಗಳಲ್ಲಿ 50 ಸಾವಿರ ಮಂದಿ ವೀಕ್ಷಿಸಿದ್ದಾರೆ.

ಮಂಗಳೂರಿನಲ್ಲೇ ಚಿತ್ರೀಕರಣ: ವಿಶೇಷ ವೆಂದರೆ, ಈ ಹಾಡಿಗಾಗಿ ನಡೆದದ್ದು ಒಂದೇ ವಾರದ ಚಿತ್ರೀಕರಣ. ನೇತ್ರಾವತಿ ನದಿಯ ರೈಲ್ವೇ ಸೇತುವೆ ಮೇಲೆ, ಜ್ಯೋತಿ ಸರ್ಕಲ್‌ ಹಾಗೂ ಪಣಂಬೂರು ಬೀಚ್‌ನಲ್ಲಿ ಚಿತ್ರೀಕರಣ ನಡೆದಿದೆ. ಸೋತರೂ ನಾವು ಮಾತ್ರ ಕೊನೆವರೆಗೂ ಆರ್‌ಸಿಬಿ ಅಭಿಮಾನಿಗಳೇ ಎನ್ನುವುದು ಈ ಹಾಡಿನ ಆಶಯ. 

ಆಲ್ಬಂ ಹಿಂದಿನ ಸಾಧಕರು: ನಿರ್ದೇಶನ, ಚಿತ್ರೀಕರಣ, ಸಾಹಿತ್ಯ ಬರೆದು ಹಿಮ್ಮೇಳದಲ್ಲಿ ಹಾಡಿಗೆ ಧ್ವನಿಯಾಗಿದ್ದು, ದೊಡ್ಡ ದೊಡ್ಡ ತಂತ್ರಜ್ಞರಿಲ್ಲದೆ ವಿದ್ಯಾರ್ಥಿಗಳೇ ರಚಿಸಿದ್ದು ಈ ಆಲ್ಬಂನ ಹೆಚ್ಚುಗಾರಿಕೆ. 

Advertisement

ಸಾಹಿತ್ಯ ಹಾಗೂ ನಿರ್ದೇಶನ ಸುಜಯ್‌ ರಾಜ್‌ (ಮಂಗಳೂರು ವಿ.ವಿ.) ಅವರದು. ಬೇಸ್‌ ಗಿಟಾರಿಸ್ಟ್‌ ಸಕೇಶ್‌, ಪ್ರಮುಖ ಗಾಯಕರಾಗಿ ನಾಗೇಂದ್ರನಾಥ್‌ ನಾಯಕ್‌, ಪೃಥ್ವಿ ಗಾಣಿಗ, ಲೀಡ್‌ ಗಿಟಾರಿಸ್ಟ್‌ ಆಗಿ ತೇಜಸ್‌, ಶೈಲೇಶ್‌ ಗೌಡ, ಪ್ರೋಗ್ರಾಮಾರ್‌ ನಿಖೀಲೇಶ್‌ ಭಟ್‌, ಡ್ರಮ್ಮರ್‌ ಮೋಹನ್‌, ಕೆಮರಾ ಜೋಯಲ್‌ ಡಿ’ಸೋಜಾ, ರ್ಯಾಪರ್‌ ಆಗಿ ರಾಜೇಶ್‌, ಡ್ರೋಣ್‌ ಕೆಮೆರಾ ಜಾನ್‌ ನಿಖೀಲ್‌, ಎಡಿಟಿಂಗ್‌ ವಿವೇಕ್‌ ಗೌಡ, (ಎಸ್‌ಡಿಎಂ ಹಳೆ ವಿದ್ಯಾರ್ಥಿಗಳು), ಕೀಬೊರ್ಡ್‌ ನಲ್ಲಿ ರಾಹುಲ್‌ ವಶಿಷ್ಠ, ಜೋಯಲ್‌ ಡಿ’ಸೋಜಾ (ಸೈಂಟ್‌ ಅಲೋಶಿಯಸ್‌) ಕರ್ತವ್ಯ ನಿಭಾಯಿಸಿದ್ದಾರೆ.

ಪಾಕೆಟ್‌ ಮನಿಯಿಂದಲೇ ರಚನೆ
ಉಜಿರೆಯ ಎಸ್‌ಡಿಎಂ ಕಾಲೇಜಿನ ಹಳೆ ವಿದ್ಯಾರ್ಥಿಗಳನ್ನೊಂಡ ತಂಡ ಪ್ರಾಯೋಜಕರು ಸಿಗದ ಕಾರಣ ತಮ್ಮ ಸ್ವಂತ ಹಣದಿಂದಲೇ ಹಾಡು ರಚಿಸಿದೆ. ಈ ಹಾಡಿಗೆ ಸುಮಾರು 35ರಿಂದ 40 ಸಾವಿರ ರೂ. ಖರ್ಚಾಗಿರಬಹುದು ಎಂದು ವೇಕ್‌ ಆಪ್‌ ರಾಕ್‌ ಬ್ಯಾಂಡ್‌ ತಂಡ ಹೇಳಿದೆ. ಕೆಲವರು ಇವರಲ್ಲಿ ವಿದ್ಯಾರ್ಥಿಗಳಾದರೆ, ಮತ್ತೆ ಕೆಲವರು ಉದ್ಯೋಗದಲ್ಲಿದ್ದಾರೆ. 

ವಿರಾಟ್‌ ಕೊಹ್ಲಿ, ಟಿ- 20 ಯೂನಿವರ್ಸಲ್‌ ಬಾಸ್‌ ಕ್ರಿಸ್‌ ಗೇಲ್‌, ಮಿ. 360 ಖ್ಯಾತಿಯ ಎಬಿ ಡಿ ವಿಲಿಯರ್, ವಿಶ್ವದರ್ಜೆಯ ಆಲ್‌ರೌಂಡರ್‌ ಶೇನ್‌ ವಾಟ್ಸನ್‌ ಅವರಂಥ ಖ್ಯಾತನಾಮ ಆಟಗಾರರಿದ್ದರೂ ಇದುವರೆಗೆ ಸಾಮರ್ಥ್ಯಕ್ಕೆ ತಕ್ಕ ಪ್ರದರ್ಶನ ಹೊರಬರದಿರುವುದು ಅಭಿಮಾನಿಗಳಲ್ಲೂ ನಿರಾಸೆ ತಂದಿದೆ. ಉಳಿದ ಲೀಗ್‌ ಪಂದ್ಯಗಳನ್ನಾದರೂ ಗೆದ್ದು ಹಾನಿಗೊಂಡ ಪ್ರತಿಷ್ಠೆಯನ್ನು ಸ್ವಲ್ಪ ಮಟ್ಟಿಗಾದರೂ ಮರಳಿ ಗಳಿಸಲಿ ಎಂಬುದಷ್ಟೇ ಈ ಜಾಡಿನ ಮುಂದಿನ ಉದ್ದೇಶ.

“ಈ ಬಾರಿ ನಾವೆಲ್ಲ ಸೇರಿ ಐಪಿಎಲ್‌ಗಾಗಿ ಏನಾದರೂ ಮಾಡಬೇಕು ಎನ್ನುವ ಆಶಯವಿತ್ತು. ಪ್ರಾಯೋಜಕರಿಲ್ಲದ ಕಾರಣ ಸ್ವಲ್ಪ ತಡವಾಗಿ ಈ ಹಾಡನ್ನು ನಿರ್ಮಾಣ ಮಾಡಿದ್ದೇವೆ. ರಾಜ್ಯದ ತಂಡವಾಗಿದ್ದು, ಭಾರತದ ನಾಯಕ ವಿರಾಟ್‌ ಕೊಹ್ಲಿ ಆರ್‌ಸಿಬಿಯಲ್ಲೂ ನೇತೃತ್ವ ವಹಿಸಿರುವುದು ನಮ್ಮ ಅಭಿಮಾನಕ್ಕೆ ಕಾರಣ.  ಆರ್‌ಸಿಬಿ ಪರ ಹಿಂದಿ, ಇಂಗ್ಲಿಷ್‌ನಲ್ಲಿ ಹಾಡುಗಳು ಬಂದಿದ್ದು, ಆದರೆ ಕನ್ನಡದಲ್ಲಿ ಇದುವರೆಗೆ ಯಾವುದೇ ಹಾಡು ಬಂದಿಲ್ಲ. ಇದಕ್ಕಾಗಿ ಹಾಡಲ್ಲಿ ಕನ್ನಡ ಹಾಗೂ ತುಳು ಪದ ಬಳಸಲಾಗಿದೆ. ದೊಡ್ಡ ದೊಡ್ಡ ತಂತ್ರಜ್ಞರಿಲ್ಲದೆ ಯುವಕರೇ ಸಂಘಟಿತವಾಗಿ ಹಾಡು ತಯಾರಿಸಿದ್ದು ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ…’
– ಸುಜಯ್‌ ರಾಜ್‌, 
ವೇಕ್‌ ಅಪ್‌ ತಂಡದ ಮ್ಯಾನೇಜರ್‌

– ಪ್ರಶಾಂತ್‌ ಪಾದೆ

Advertisement

Udayavani is now on Telegram. Click here to join our channel and stay updated with the latest news.

Next