Advertisement

ಸ್ಕೂಬಾ ಡೈವಿಂಗ್‌ ಸೂಪರ್‌ ಗೊತ್ತಾ!

10:48 AM May 25, 2017 | |

ಸಮುದ್ರ ಅಪಾರ ನಿಗೂಢಗಳನ್ನು ತನ್ನ ಗರ್ಭದಲ್ಲಿ ಅಡಗಿಸಿಟ್ಟುಕೊಂಡಿದೆ. ಅದರ ಒಂದೊಂದೇ ವಿಸ್ಮಯಗಳನ್ನು ಅರಿಯಲು ಹೊರಟ ಮಾನವನಿಗೆ ನೆರವಾಗಿದ್ದೇ ಸ್ಕೂಬಾ ಡೈವಿಂಗ್‌… ಅಂದರೆ, ನೀರೊಳಗೆ ಧುಮುಕುವ ಕಲೆ. ಇಲ್ಲಿ ವ್ಯಕ್ತಿ ಈಜು ಕಲೆಯನ್ನು ಅರಿತಿರಬೇಕಾಗುತ್ತದೆ. ಸುರಕ್ಷಾ ಉಡುಪನ್ನು ಧರಿಸಿ, ಉಸಿರಾಟದ ಉಪಕರಣ (ಸ್ಕೂಬಾ) ಬಳಸಿಕೊಂಡು, ನೀರಿನೊಳಗೆ ಧುಮುಕಬೇಕಾಗುತ್ತದೆ.

Advertisement

ಮೊದಲ ಸ್ಕೂಬಾ ಡೈವಿಂಗ್‌
ಎರಡನೇ ವಿಶ್ವಯುದ್ಧದ ಸಮಯದಲ್ಲಿ ಫ್ರೆಂಚ್‌ ನೌಕಾದಳದ ಅಧಿಕಾರಿ ಜಾಕೆಸ್‌ ಕೌಸ್ಟೆಯು 1943ರಲ್ಲಿ ಮೊದಲ ಬಾರಿಗೆ ಸ್ಕೂಬಾ ಡೈವಿಂಗ್‌ ಮಾಡಿದರು. ಆದರೆ, ಕೇವಲ ಅಕ್ವಾಲಂಗ್‌ ಸಿಲಿಂಡರ್‌ ಕಟ್ಟಿಕೊಂಡು ಸಾಗರಕ್ಕೆ ಜಿಗಿದಿದ್ದರು. ಕೇವಲ 8 ನಿಮಿಷದಲ್ಲಿ ಸಿಲಿಂಡರ್‌ನಲ್ಲಿದ್ದ ಆಮ್ಲಜನಕ ಬರಿದಾಗಿ, ಅವರು ಸುರಕ್ಷಿತವಾಗಿ ಮೇಲೆ ಬಂದಿದ್ದರು.

ವಯಸ್ಸಿನ ಮಿತಿ ಏನು?
14 ವರುಷದ ಮೇಲ್ಪಟ್ಟ ಮಕ್ಕಳು ಕಲಿಯಬಹುದು. 40 ವರ್ಷ ಮೇಲ್ಪಟ್ಟವರಿಗೆ ಸ್ಕೂಬಾ ಡೈವಿಂಗ್‌ಗೂ ಮುನ್ನ ಹೃದಯ ತಪಾಸಣೆ ಮಾಡಿಕೊಂಡು, ವೈದ್ಯರ ಅನುಮತಿಯ ಮೇರೆಗೆ ಸಾಹಸಕ್ಕೆ ಮುಂದಾಗಬಹುದು. 
 
ಉಡುಪು ಹೇಗಿರುತ್ತೆ?
– ಮೀನಿನ ರೆಕ್ಕೆಯಂತೆ ಇರುವ ಕಾಲು ಚೀಲವನ್ನು ಈಜುವ ವ್ಯಕ್ತಿ ಧರಿಸುತ್ತಾನೆ. ಇದರಿಂದ ಸರಾಗ ಚಲನೆ ಸಾಧ್ಯ. 
– ಪುಟ್ಟದಾದ ಫೀಡ್‌ ಗ್ಯಾಸ್‌ ಸಿಲಿಂಡರ್‌ ಅನ್ನು ಬೆನ್ನಿಗೆ ಫಿಕ್ಸ್‌ ಮಾಡಿರುತ್ತಾರೆ. ಇದು ಉಸಿರಾಟಕ್ಕೆ ನೆರವಾಗುತ್ತದೆ.
– ಈಜಿನ ವೇಗವನ್ನು ನಿಯಂತ್ರಿಸುವ ಸಾಧನಗಳನ್ನು ಕಟ್ಟಿಕೊಂಡಿರುತ್ತಾರೆ. ಎದುರು ಬಂಡೆ, ಸಮುದ್ರ ಜೀವಿಗಳು ಎದುರಾದರೆ ಆ ವೇಳೆ ವೇಗವನ್ನು ನಿಯಂತ್ರಿಸಿಕೊಳ್ಳಬಹುದು.
– ಡೈವ್‌ ಮುಖವಾಡದ ಕನ್ನಡಕ ಧರಿಸುವುದರಿಂದ ನೀರಿನೊಳಗೆ ದೃಷ್ಟಿ ಸರಿಯಾಗಿ ಕಾಣಿಸುತ್ತದೆ.

ಸವಾಲುಗಳೇನು?
ಸ್ಕೂಬಾ ಡೈವಿಂಗ್‌ ಮಾಡುವ ಮುನ್ನ ಅನೇಕ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕು. ಮುಖ್ಯವಾಗಿ ಸ್ಕೂಬಾ ಡೈವರ್‌ ತರಬೇತುದಾರರ ಬಳಿ ತರಗತಿಗಳನ್ನು ತೆಗೆದುಕೊಳ್ಳಬೇಕು. ಅವರು ಹೇಳಿದ್ದನ್ನು ಚೆನ್ನಾಗಿ ಕಲಿತು, ಅದನ್ನು ನೀರಿನಲ್ಲಿ ಚಾಚೂ ತಪ್ಪದೆ ಪಾಲಿಸಬೇಕು. ಸಮುದ್ರದಡಿ ಹುಡುಗಾಟ ಸಲ್ಲದು. ಏಕೆಂದರೆ ಒಂಚೂರು ಮೈಮರೆತರೂ ಅಪಾಯ ತಪ್ಪಿದ್ದಲ್ಲ. ಸಮುದ್ರ ಯಾವತ್ತಿಗೂ ರಹಸ್ಯವೇ ಎಂಬುದು ನೆನಪಿರಲಿ.

ಆಳದಲ್ಲಿ ಅನುಭವ ಹೇಗಿರುತ್ತೆ?
ಸಮುದ್ರದಲ್ಲಿ 10 ಮೀಟರ್‌ ಕೆಳಕ್ಕೆ ಹೋದಾಗ ವ್ಯಕ್ತಿಗೆ ಅರಿಶಿನ, ಕೆಂಪು ಅಥವಾ ಇನ್ನಾéವುದೇ ಬಣ್ಣ ಕಾಣಿಸದೇ ಹೋಗಬಹುದು. ಈಜುಪಟುವಿನ ರಕ್ತ ಕೂಡ ನೀಲಿ ಬಣ್ಣದಲ್ಲಿಯೇ ಗೋಚರಿಸುತ್ತದೆ. ಅಷ್ಟು ದಟ್ಟ ನೀಲಿ ಕೆಳ ಭಾಗದಲ್ಲಿರುತ್ತದೆ. ಸಮುದ್ರದ ಆಳದಲ್ಲಿ ಶಬ್ದವು ಗಾಳಿಗಿಂತ 5 ಪಟ್ಟು ಹೆಚ್ಚು ವೇಗದಲ್ಲಿ ಚಲಿಸುತ್ತದೆ. ಸಾಗರದ ಯಾವುದೋ ದಿಕ್ಕಿನಲ್ಲಿ ಶಬ್ದವಾದರೂ, ಅದರ ಶಬ್ದ ಕಂಪನ ಈಜುಪಟುವನ್ನು ತಲುಪುತ್ತದೆ. ಅಂದಹಾಗೆ, ಸಮುದ್ರದ ಆಳದಲ್ಲಿ ಯಾವುದೇ ಅಲೆಗಳು ಇರುವುದಿಲ್ಲ. ಅದು ನಿಂತ ನೀರಿನಂತಿರುತ್ತದೆ.

Advertisement

ಸ್ಕೂಬಾ ಡೈವಿಂಗ್‌ಗೆ ಹೆಸರುವಾಸಿ ತಾಣ
ಆಸ್ಟ್ರೇಲಿಯಾದ ದಿ ಗ್ರೇಟ್‌ ಬ್ಯಾರಿಯರ್‌ ರೀಫ್, ಭಾರತದ ಅಂಡಮಾನ್‌ ಮತ್ತು ನಿಕೋಬರ್‌ ದ್ವೀಪಗಳು, ಗೋವಾ, ಲಕ್ಷದ್ವೀಪ, ಪಾಂಡಿಚೇರಿ, ಸೇಜೆಲ್ಸ್‌, ವೆಸ್ಟ್‌ಇಂಡೀಸ್‌ ಕೇಮ್ಯಾನ್‌ ದ್ವೀಪ, ಬಹಮಾಸ್‌, ಕ್ಯಾಲಿಫೋರ್ನಿಯಾ.

– ಸೌರಭ

Advertisement

Udayavani is now on Telegram. Click here to join our channel and stay updated with the latest news.

Next