Advertisement

ಗರ್ಭಕೋಶಕ್ಕೆ ಕತ್ತರಿ: ಪರಿಹಾರಕ್ಕೆ ಮನವಿ

10:19 AM Apr 27, 2022 | Team Udayavani |

ಹಾವೇರಿ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಏ. 28ರಂದು ಶಿಗ್ಗಾವಿ ಯಲ್ಲಿ ಭೇಟಿ ಮಾಡಿಸುವುದಾಗಿ ಅಧಿಕಾರಿಗಳು ನೀಡಿದ ಭರವಸೆ ಮೇರೆಗೆ ಗರ್ಭಕೋಶ ಕತ್ತರಿಗೆ ಒಳಗಾಗಿರುವ ನೂರಾರು ಮಹಿಳೆಯರು ಪರಿಹಾರಕ್ಕೆ ಆಗ್ರಹಿಸಿ ಶಿಗ್ಗಾವಿಯ ಸಿಎಂ ನಿವಾಸದವರೆಗೆ ಹಮ್ಮಿಕೊಂಡಿದ್ದ ಪಾದಯಾತ್ರೆ ಕೈಬಿಡಲಾಯಿತು.

Advertisement

ನಗರದ ಹೊರವಲಯದ ನೆಲೋಗಲ್ಲ ಬಳಿ ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಮಂಗಳವಾರ ಬೆಳಗ್ಗೆಯಿಂದ ಸಂಜೆ 6ರ ವರೆಗೂ ಪ್ರತಿಭಟನಾಕಾರರು ಮತ್ತು ಅಧಿಕಾರಿಗಳ ನಡುವಿನ ತಿಕ್ಕಾಟ ಅಂತ್ಯ ಕಂಡಿತು.

ಶಿಗ್ಗಾವಿಗೆ ಏ. 28ರಂದು ಸಿಎಂ ಆಗಮಿಸುತ್ತಿದ್ದು, ಆ ಸಂದರ್ಭದಲ್ಲಿ ಗರ್ಭಕೋಶ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದ ಐವರು ಮಹಿಳೆಯರು, ಹೋರಾಟದ ನೇತೃತ್ವ ವಹಿಸಿದ್ದ ಮುಖಂಡರ ನಿಯೋಗವನ್ನು ಭೇಟಿ ಮಾಡಿಸುವುದಾಗಿ ಅಧಿಕಾರಿಗಳು ನೀಡಿದ ಭರವಸೆಯ ಮೇರೆಗೆ ಪಾದಯಾತ್ರೆ ಮೊಟಕುಗೊಳಿಸಲು ನಿರ್ಧರಿಸಿದರು.

ತಾಂಡಾಗಳ ಲಂಬಾಣಿ ಸೇರಿದಂತೆ 1,522 ಬಡ ಮಹಿಳೆಯರ ಗರ್ಭಕೋಶವನ್ನು ರಾಣೆಬೆನ್ನೂರಿನ ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿಯಾಗಿದ್ದ ಡಾ| ಪಿ. ಶಾಂತ ಅವರು ತೆಗೆದುಹಾಕಿದ ಪ್ರಕರಣಕ್ಕೆ ಸಂಬಂಧಿಸಿ, ಸಂತ್ರಸ್ತ ಮಹಿಳೆಯರಿಗೆ ಸೂಕ್ತ ಪರಿಹಾರ ನೀಡುವಂತೆ, ಗರ್ಭಕೋಶ ತೆಗೆದಿರುವ ವೈದ್ಯಾಧಿಕಾರಿ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ನೂರಾರು ಮಹಿಳೆಯರು ರಾಣೆಬೆನ್ನೂರಿನಿಂದ ಶಿಗ್ಗಾವಿಯ ಸಿಎಂ ಬಸವರಾಜ ಬೊಮ್ಮಾಯಿ ನಿವಾಸದವರೆಗೆ ಪಾದಯಾತ್ರೆ ಹಮ್ಮಿಕೊಂಡಿದ್ದರು. ಸೋಮವಾರ ರಾಣೆಬೆನ್ನೂರಿನಿಂದ ಪಾದಯಾತ್ರೆ ಮೂಲಕ ಆಗಮಿಸಿದ ಮಹಿಳೆಯರು, ಮಂಗಳವಾರ ನಗರದ ಹೊರವಲಯದ ನೆಲೋಗಲ್ಲ ಬಳಿ ಬರುತ್ತಿದ್ದಂತೆ ಪೊಲೀಸರು ಪಾದಯಾತ್ರೆ ತಡೆದರು.

ಆಗ ನೂರಾರು ಮಹಿಳೆಯರು ಅಲ್ಲಿಯೇ ಧರಣಿ ಆರಂಭಿಸಿದರು. ಆಗ ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ, ಹೆಚ್ಚುವರಿ ಜಿಲ್ಲಾಧಿಕಾರಿ ತಿಪ್ಪೇಸ್ವಾಮಿ ಸ್ಥಳಕ್ಕೆ ಆಗಮಿಸಿ, ಪ್ರತಿಭಟನಾ ನಿರತರ ಮನವೊಲಿಸಲು ಯತ್ನಿಸಿದರು. ನಿಮ್ಮ ಸಮಸ್ಯೆಗಳನ್ನು ಮುಖ್ಯಮಂತ್ರಿಗಳಿಗೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next