ಮಂಗಳೂರು: ಹತ್ತನೇ ತರಗತಿ ಪಠ್ಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಕುರಿತಾದ ಪಠ್ಯವನ್ನು ಕೈಬಿಡಲಾದ ವಿಚಾರ ಇದೀಗ ಕರಾವಳಿಯಾದ್ಯಂತ ಮತ್ತೊಂದು ವಿವಾದ ಸೃಷ್ಟಿಸಿದೆ.
10ನೇ ತರಗತಿಯ ಈ ಹಿಂದಿನ ಸಮಾಜ ವಿಜ್ಞಾನ ಪಠ್ಯದಲ್ಲಿ ಶ್ರೀ ನಾರಾಯಣ ಗುರು ಧರ್ಮ ಪರಿಪಾಲನಾ ಯೋಗಂ ಶಿರೋನಾಮೆಯೊಂದಿಗೆ ಮಾನವತಾವಾದಿ ಶ್ರೀ ನಾರಾಯಣಗುರು ಜೀವನ ಚರಿತ್ರೆಯ ಪಠ್ಯವನ್ನು ಮುದ್ರಿಸಲಾಗಿತ್ತು.
ಈ ಪಠ್ಯದಲ್ಲಿ “ಸಮಾಜದಲ್ಲಿದ್ದ ಅಸ್ಪೃಶ್ಯತೆಯನ್ನು ಹೋಗಲಾಡಿಸಲು ಹೋರಾಡಿದ ನಾರಾಯಣ ಗುರುಗಳ “ಒಂದೇ ಜಾತಿ, ಒಂದೇ ಧರ್ಮ ಮತ್ತು ಒಬ್ಬನೇ ದೇವರು ತತ್ವ’ಗಳ ಬಗ್ಗೆ ವಿವರಣೆ ನೀಡಲಾಗಿತ್ತು. ಈ ಚರಿತ್ರೆಯನ್ನು ಈ ಬಾರಿ ಪಠ್ಯದಿಂದ ತೆಗೆದು ಹಾಕಿರುವುದು ಹಾಗೂ ಮೇಲ್ವರ್ಗದವರ ವಿರುದ್ಧ ಚಳುವಳಿಯನ್ನೇ ನಡೆಸಿದ ಪೆರಿಯಾರ್ ಬಗೆಗಿನ ಪಠ್ಯವನ್ನೂ ಕೈಬಿಟ್ಟಿರುವುದು ಕೂಡ ಖಂಡನೀಯ ಎಂದು ಕರಾವಳಿಯ ವಿವಿಧ ಬಿಲ್ಲವ ಪ್ರಮುಖರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದ್ದರಿಂದ ಸರಕಾರ ಈ ಕುರಿತು ಮರುಚಿಂತನೆ ನಡೆಸಬೇಕಾಗಿದೆ ಎಂಬ ಆಗ್ರಹ ಕೇಳಿಬಂದಿದೆ.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ, ಬಿಲ್ಲವ ಮುಖಂಡ ಪದ್ಮರಾಜ್ ಆರ್. ಅವರು “ಉದಯವಾಣಿ’ಗೆ ಪ್ರತಿಕ್ರಿಯಿಸಿ “ನಾರಾಯಣಗುರು ಮತ್ತು ಪೆರಿಯಾರ್ ಅವರ ಕುರಿತಾದ ಪಠ್ಯಭಾಗವನ್ನು ಪಠ್ಯಪುಸ್ತಕ ಪರಿಷ್ಕರಣ ಸಮಿತಿ ಕೈಬಿಟ್ಟಿದ್ದು ಖಂಡನೀಯ.
ಸಮಾಜ ಸುಧಾರಕ ಸಂತರೆನಿಸಿಕೊಂಡ ಇವರಿಬ್ಬರ ಸಂದೇಶಗಳನ್ನು ನಿರ್ಲಕ್ಷಿಸಿರುವುದು ಜಾತಿ-ಧರ್ಮಗಳ ಕಲಹದ ಬೇಗೆಯಲ್ಲಿ ರಾಜಕೀಯದ ಬೇಳೆ ಬೇಯಿಸಿಕೊಳ್ಳುವ ಪಕ್ಷಗಳ ದುರುದ್ದೇಶಪೂರಿತ ನಡೆ ಹಾಗೂ ಗುರುಗಳ ತತ್ವ-ಸಿದ್ಧಾಂತಗಳನ್ನು ಅನುಸರಿಸುತ್ತಿರುವ ಅವರ ಅನುಯಾಯಿಗಳಿಗೆ ಮಾಡಿದ ಅವಮಾನ. ಸನಾತನ ಹಿಂದೂ ಧರ್ಮದ ಬಹುಸಂಖ್ಯಾಕ ಹಿಂದು ಳಿದ ವರ್ಗದ ಜನರ ಧ್ವನಿಯಾಗಿ, ನಾರಾಯಣ ಗುರುಗಳ ತತ್ವ ಸಂದೇಶ, ಪ್ರಸ್ತುತ ಸನ್ನಿವೇಶದಲ್ಲಿ ಇಂದಿನ ಯುವ ಪೀಳಿಗೆಗೆ ಅತ್ಯಂತ ಮಹತ್ವಪೂರ್ಣದ್ದಾಗಿದೆ’ ಎಂದರು.