ಕಲಬುರಗಿ: ಹಣದಾಸೆಗಾಗಿ ಅನಗತ್ಯ ಗರ್ಭಕೋಶಕ್ಕೆ ಕತ್ತರಿ ಹಾಕುವ ವೈದ್ಯರ ಕಾರ್ಯಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಲ್ಲಿಸಲಾದ ವರದಿ ಜಾರಿಗೆ ಮೀನ ಮೇಷ ಎಣಿಸುತ್ತಿರುವ ಸರ್ಕಾರದ ಕ್ರಮಕ್ಕೆ ರಾಜ್ಯ ಮಹಿಳಾ ಆಯೋಗ ಅಸಮಾಧಾನ ವ್ಯಕ್ತಪಡಿಸಿದೆ.
ನಗರದಲ್ಲಿನ ನಾಲ್ಕು ಖಾಸಗಿ ಆಸ್ಪತ್ರೆಗಳಲ್ಲಿ 2200ಕ್ಕೂ ಹೆಚ್ಚು ಮಹಿಳೆಯರ ಅನಗತ್ಯ ಗರ್ಭಕೋಶಕ್ಕೆ ಕತ್ತರಿ ಹಾಕಿರುವ ಪ್ರಕರಣ ಸೇರಿದಂತೆ ರಾಜ್ಯದಾದ್ಯಂತ ನಡೆಯುತ್ತಿರುವ ವಸ್ತುಸ್ಥಿತಿ ಕುರಿತಾಗಿ 2016ರ ಮಾರ್ಚ್ ತಿಂಗಳಲ್ಲಿಯೇ ವರದಿ ಸಲ್ಲಿಸಿದ್ದರೂ ಇಂದಿನ ದಿನದವರೆಗೂ ವರದಿ ಜಾರಿ ಸಂಬಂಧವಾಗಿ ಯಾವುದೇ ಹೆಜ್ಜೆ ಇಡದ ಹಿನ್ನೆಲೆಯಲ್ಲಿ ಎರಡು ವಾರಗಳ ಹಿಂದೆ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ ಎಂದು ಮಹಿಳಾ ಆಯೋಗದ ಅಧ್ಯಕ್ಷೆ ಕೆ.ಜಿ. ನಾಗಲಕ್ಷ್ಮೀಬಾಯಿ ತಿಳಿಸಿದರು.
ಮಂಗಳವಾರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅನಗತ್ಯ ಗರ್ಭಕೋಶಕ್ಕೆ ಕತ್ತರಿ ಹಾಕುವ ವೈದ್ಯರ ಕಾರ್ಯಕ್ಕೆ ಕಡಿವಾಣ ಹಾಕುವ ವರದಿ ಶೀಘ್ರ ಜಾರಿ ತರುವಂತೆ ಹಾಗೂ ಈ ವಿಷಯದಲ್ಲಿ ಹಿಂದೇಟು ಬೇಡ ಎಂಬುದಾಗಿ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಹಣಸಾದೆಗೆ ಅನಗತ್ಯ ಗರ್ಭಕೋಶಕ್ಕೆ ಕತ್ತರಿ ಹಾಕುವ ವೈದ್ಯರಿಗೆ ದೇವರು ಸಹ ರಕ್ಷಣೆ ಮಾಡಲ್ಲ.
ಅನ್ಯಾಯಕ್ಕೊಳಗಾದ ಮಹಿಳೆಯರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಆಯೋಗ ಶ್ರಮಿಸಲಿದೆ ಎಂದು ತಿಳಿಸಿದರು. ಚಿಂಚೋಳಿ ತಾಲೂಕಿನ ಕುಂಚಾವರಂ ಹಾಗೂ ಸುತ್ತಮುತ್ತಲಿನ ತಾಂಡಾಗಳಲ್ಲಿ ಮಕ್ಕಳ ಮಾರಾಟ ಸಂಬಂಧವಾಗಿ 2001ರಲ್ಲಿಯೇ ತಾಂಡಾಗಳಿಗೆ ಭೇಟಿ ನೀಡಿ ಕನ್ನಡ ಮತ್ತು ಇಂಗ್ಲಿಷದಲ್ಲಿ ಪುಸ್ತಕ ಬರೆದಿದ್ದಲ್ಲದೆ, ಸಿನೇಮಾವೊಂದನ್ನು ತಯಾರು ಮಾಡಲಾಗಿತ್ತು. ಸಿನೇಮಾ μಲ್ಮ್ ಫೆಸ್ಟಿವಲ್ ಅವಾಡ್‌ಗೂ ಸಹ ಆಯ್ಕೆಯಾಗಿದೆ.
ಈಗಿನ ಪರಿಸ್ಥಿತಿ ಕುರಿತು ಅವಲೋಕಿಸಲಾಗುತ್ತಿದೆ. ಸರ್ಕಾರದ ಯೋಜನೆಗಳ ಪರಿಣಾಮಕಾರಿ ಜಾರಿಗೆ ಆಯೋಗ ಗಮನಹರಿಸುತ್ತಿದೆ ಎಂದರು. ಕಲಬುರಗಿ ಜಿಲ್ಲಾಸ್ಪತ್ರೆಯಲ್ಲಿ ಕೆಲವು ಆರೋಗ್ಯ ಸೇವೆಗಳು ಅವ್ಯವಸ್ಥೆ ಕೂಡಿವೆ. ಆಸ್ಪತ್ರೆಗೆ ಪ್ರಸೂತಿಗಾಗಿ ಬಂದಿರುವ ಮಹಿಳೆಯರನ್ನು ಖಾಸಗಿ ಆಸ್ಪತ್ರೆಗೆ ಕಳುಹಿಸುತ್ತಿರುವುದಾಗಿ ತಿಳಿದು ಬಂದಿದೆ. ದಿನಾಲು 30ರಿಂದ 40 ಮಹಿಳೆಯರ ಪ್ರಸೂತಿ ಯಾಗುತ್ತಿದೆ. ಬೆಡ್ ಸಿಗದಿದ್ದಕ್ಕೆ ಕೆಳಗಡೆಯೇ ಮಗು ಹಾಗೂ ಹಸಿ ಬಾಣಂತಿಯನ್ನು ಹಾಕುತ್ತಿರುವ ದೃಶ್ಯಗಳು ಕಂಡು ಬರುತ್ತಿವೆ. ಇದಕ್ಕೆ ಕಡಿವಾಣ ಹಾಕುವ ಕುರಿತಾಗಿ ಬಂಧಿಸಿದವರಿಗೆ ಸೂಚಿಸಲಾಗುವುದು ಎಂದು ತಿಳಿಸಿದರು.