ಮಹಾನಗರ: ಸ್ಮಾರ್ಟ್ ಸಿಟಿಯಾಗಿ ರೂಪುಗೊಳ್ಳುತ್ತಿರುವ ನಗರದ ಪ್ರಮುಖ ರಸ್ತೆಗಳಲ್ಲಿ ಸುಗಮ ವಾಹನ ಸಂಚಾರದ ಉದ್ದೇಶದಿಂದ ವಿವಿಧ ವಾರ್ಡ್‌ಗಳಲ್ಲಿ ವೈಜ್ಞಾನಿಕ ರಸ್ತೆ ಹಂಪ್ಸ್ ಅಳವಡಿಸುವ ಕಾಮಗಾರಿ ನಡೆಯುತ್ತಿದೆ.
ರಸ್ತೆ ಹಂಪ್ಸ್ ನಿರ್ಮಾಣಕ್ಕೆ ಸಂಬಂಧಿಸಿ ಮಹಾನಗರ ಪಾಲಿಕೆ ಈಗಾಗಲೇ 116 ಪ್ರದೇಶಗಳನ್ನು ಗುರುತು ಮಾಡಿದ್ದು, ಒಟ್ಟು 222 ವೈಜ್ಞಾನಿಕ ರಸ್ತೆ ಹಂಪ್ಸ್ ಅಳವಡಿಸಲು ಪಾಲಿಕೆ ಮುಂದಾಗಿದೆ.
ಮನಪಾ ವ್ಯಾಪ್ತಿಯ ಸಂಚಾರ ಪಶ್ಚಿಮ ಪೊಲೀಸ್ ಠಾಣೆ, ಪಾಂಡೇಶ್ವರ ಮತ್ತು ಸಂಚಾರ ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 36.15 ಲಕ್ಷ ರೂ. ವೆಚ್ಚದಲ್ಲಿ ವೈಜ್ಞಾನಿಕ ಹಂಪ್ಸ್ ಅಳವಡಿಸಲಾಗುತ್ತದೆ. ಈ ನಿಟ್ಟಿನಲ್ಲಿ ಪಾಲಿಕೆ ಈಗಾಗಲೇ ಟೆಂಡರ್ ಕೂಡ ಕರೆದಿದೆ. ಅದರಂತೆ ರಸ್ತೆ ಹಂಪ್ಸ್, ಸೂಚನ ಫಲಕ, ಲೈನ್ ಪಿಟ್ಟಿಂಗ್, ಬ್ಲಿಂಕರ್ ಕೂಡ ಅಳವಡಿಸಲಾಗುತ್ತದೆ.
ನಗರದ ರಸ್ತೆ ಹಂಪ್ಸ್ ಅವೈಜ್ಞಾನಿ ಕವಾಗಿದೆ ಎಂದು ಸಾರ್ವಜನಿಕ ವಲಯದಲ್ಲಿ ತೀವ್ರ ವಿರೋಧಕ್ಕೆ ಕಾರಣ ವಾಗಿತ್ತು. ಅವೈಜ್ಞಾನಿಕ ರಸ್ತೆ ಉಬ್ಬುಗಳು ಅಪಘಾತಕ್ಕೆ ಕಾರಣವಾ ಗುತ್ತಿತ್ತು. ಅದರಲ್ಲೂ ದ್ವಿಚಕ್ರ ವಾಹನ ಸವಾರಿ ತ್ರಾಸದಾಯವಾಗುತ್ತಿತ್ತು. ಇಂಡಿಯನ್ ರೋಡ್ ಕಾಂಗ್ರೆಸ್ (ಐಆರ್‌ಸಿ) ಪ್ರಕಾರ ವಸತಿ ಪ್ರದೇಶಗಳಲ್ಲಿ ರಸ್ತೆ ಹಂಪ್‌ಗ್ಳ ಎತ್ತರ 3 ರಿಂದ 3.5 ಇಂಚು ಇರಬೇಕು. 12 ರಿಂದ 14 ಅಡಿ ಉದ್ದ ಇರಬೇಕು. ಅದೇ ರೀತಿ ಖಾಸಗಿ ರಸ್ತೆ, ಪಾರ್ಕಿಂಗ್ ಜಾಗಗಳಲ್ಲಿ 3ರಿಂದ 6 ಇಂಚು ಎತ್ತರ ಇರಬೇಕು. 76 ರಿಂದ 152 ಮಿ.ಮೀ. ಉದ್ದ ಇರಬೇಕು ಎಂದಿದೆ. ಸದ್ಯ ನಗರದಲ್ಲಿರುವ ಹೆಚ್ಚಿನ ರಸ್ತೆ ಉಬ್ಬುಗಳು ಈ ನಿಯಮದಂತೆ ಇಲ್ಲ. ಆದರೆ, ನೂತನವಾಗಿ ನಿರ್ಮಿಸಲಿರುವ ವೈಜ್ಞಾನಿಕ ರಸ್ತೆ ಉಬ್ಬುಗಳು ಐಆರ್‌ಸಿ ಮಾನದಂಡದಂತೆ ನಿರ್ಮಾಣವಾಗಲಿದೆ.
ವೈಜ್ಞಾನಿಕ ಹಂಪ್ಸ್
ಸುಗಮ ಸಂಚಾರ ವ್ಯವಸ್ಥೆಯನ್ನು ಸುಧಾರಿಸುವ ನಿಟ್ಟಿನಲ್ಲಿ ನಗರದಲ್ಲಿ ವೈಜ್ಞಾನಿಕ ರಸ್ತೆ ಹಂಪ್ಸ್ ಅಳವಡಿಸುವ ಕಾಮಗಾರಿ ನಡೆಯುತ್ತಿದೆ. ಈಗಾಗಲೇ ಕೆಲವು ಕಡೆಗಳಲ್ಲಿ ಕಾಮಗಾರಿ ಆರಂಭವಾಗಿದ್ದು, ಇದು ನಿರಂತರ ಪ್ರಕ್ರಿಯೆಯಾಗಿದೆ.
-ಡಾ| ಜಿ.ಸಂತೋಷ್ ಕುಮಾರ್, ಮನಪಾ ಉಪ ಆಯುಕ್ತರು,