ಕಲಬುರಗಿ: ಸರಕಾರಗಳು ಹಾಗೂ ವಿಜ್ಞಾನಿಗಳು ಮಾಡುತ್ತಿರುವ ವಿಜ್ಞಾನದ ವಿಸ್ತರಣೆ ಮತ್ತು ಹೊಸ ಆವಿಷ್ಕಾರಗಳ ಕುರಿತು ಮಕ್ಕಳಿಗೆ ಮಾಹಿತಿ ತಲುಪಿಸಬೇಕು ಎಂದು ಗುವಿವಿ ಕುಲಸಚಿವ ಪ್ರೊ| ದಯಾನಂದ ಅಗಸರ ಹೇಳಿದರು.
ನಗರದ ರಾಜಾಪುರದ ಸರಕಾರಿ ಮಹಾವಿದ್ಯಾಲಯದಲ್ಲಿ ರಾಜ್ಯ ವಿಜ್ಞಾನ ಪರಿಷತ್ತು ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಕಾಲೇಜು ಶಿಕ್ಷಣ ಇಲಾಖೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿದ್ದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ವಿಜ್ಞಾನ ಬೆಳಕನ್ನು ಸರಿಯಾದ ದಿಕ್ಕಿನೆಡೆಗೆ ಕೊಂಡೊಯ್ಯುವ ಸಾಧನ ಮಕ್ಕಳು. ಅವರಲ್ಲಿ ಈ ಕುರಿತು ಸರಿಯಾದ ತಿಳಿವಳಿಕೆ ಮತ್ತು ಆಸಕ್ತಿ ಮೂಡಿಸಬೇಕು. ಇವತ್ತು ಪ್ರತಿ ದಿನವೂ ಹೊಸದೊಂದು ಬೆಳವಣಿಗೆ ನಡೆಯುತ್ತಿದೆ. ಇದನ್ನು ಮಕ್ಕಳಿಗೆ ಮನವರಿಕೆ ಮಾಡಿಕೊಟ್ಟು ಅವರಲ್ಲಿ ಆಸಕ್ತಿ ಮೂಡಿಸಬೇಕು ಎಂದು ಹೇಳಿದರು.
ಕರಾವಿಪ ಗೌರವ ಕಾರ್ಯದರ್ಶಿ ಗಿರೀಶ ಕಡ್ಲೆàವಾಡ ಮಾತನಾಡಿ, ವಿದ್ಯಾರ್ಥಿಗಳು ವಿಜ್ಞಾನದ ತತ್ವಗಳನ್ನು ಸರಿಯಾಗಿ ಬಳಕೆ ಮಾಡಿಕೊಂಡು ಜನಸಾಮಾನ್ಯರಿಗೆ ಉಪಯುಕ್ತವಾದ ತಂತ್ರಜ್ಞಾನ ಅಭಿವೃದ್ಧಿ ಪಡಿಸುವಂತೆ ಮುಂದಡಿ ಇಡಬೇಕು.
ಇದರಿಂದ ಸಮಾಜಕ್ಕೂ ಹಾಗೂ ವಿಜ್ಞಾನ ಕ್ಷೇತ್ರಕ್ಕೂ ಅನುಕೂಲವಾಗಲಿದೆ ಎಂದು ಹೇಳಿದರು. ಹಗರಿಬೊಮ್ಮನಹಳ್ಳಿ ಸರಕಾರಿ ಮಹಾವಿದ್ಯಾಲಯದ ವಿದ್ಯಾರ್ಥಿನಿ ಅಂಜನಾ ಕೆ. ಕೊಟ್ರಬಸ್ಸಯ್ಯ ಪ್ರಥಮ, ಕಲಬುರಗಿ ಎನ್‌ವಿ ಪದವಿ ಮಹಾವಿದ್ಯಾಲಯದ ಪ್ರವೀಣಕುಮಾರ ಆನಂದ ದ್ವಿತೀಯ, ಸರಕಾರಿ ಮಹಾವಿದ್ಯಾಲಯದ ಅಕ್ಷತಾ ಎಸ್.ಗೀತಾ ಎಸ್.ಬಿ ಅವರಿಗೆ ತೃತೀಯ ಬಹುಮಾನ ನೀಡಲಾಯಿತು.
ಅಧ್ಯಕ್ಷತೆ ವಹಿಸಿದ್ದ ಡಾ| ನಂದಗಿ ರಾಚಪ್ಪ ಮಾತನಾಡಿದರು. ಪ್ರೊ| ರಾಜಾಸಮರಸೇನ ಮೋದಿ ಸ್ವಾಗತಿಸಿದರು. ಡಾ| ನಾಗರಾಜ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು. ಡಾ| ರಾಜೇಂದ್ರ ಸಿಂಗ್ ವಂದಿಸಿದರು.