Advertisement

ಶಾಲಾ ಸಮವಸ್ತ್ರ ಖರೀದಿ ವಿಳಂಬವೇಕೆ?

02:03 PM Jul 29, 2020 | Team Udayavani |

ಕೊಪ್ಪಳ: ಜಿಲ್ಲೆಯಲ್ಲಿ ವಿದ್ಯಾರ್ಥಿಗಳಿಗೆ ಶಾಲಾ ಸಮವಸ್ತ್ರ ಖರೀದಿ ಮಾಡುವಲ್ಲಿ ವಿಳಂಬ ಮಾಡುತ್ತಿರುವುದಕ್ಕೆ ಏನು ಕಾರಣ?. ಎಸ್‌ಡಿಎಂಸಿ ವಿಳಂಬ ಮಾಡುತ್ತಿದೆ ಎಂಬ ವಾದ ಒಂದೆಡೆಯಾದರೆ ಶಿಕ್ಷಣ ಇಲಾಖೆ ಈ ಬಗ್ಗೆ ಪರ್ಯಾಯ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಸಂಸದ ಸಂಗಣ್ಣ ಕರಡಿ ಡಿಡಿಪಿಐ ಅವರಿಗೆ ಪ್ರಶ್ನೆ ಮಾಡಿದರು.

Advertisement

ನಗರದ ಜಿಪಂ ಜೆ.ಎಚ್‌. ಪಟೇಲ್‌ ಸಭಾಂಗಣದಲ್ಲಿ ಮಂಗಳವಾರ ನಡೆದ ಸಮಗ್ರ ಶಿಕ್ಷಣ ಕರ್ನಾಟಕ, ಮಧ್ಯಾಹ್ನ ಬಿಸಿಯೂಟ, ಸಾಕ್ಷರ ಭಾರತ ಯೋಜನೆಗಳ 2019-20ನೇ ಸಾಲಿನ ಜಿಲ್ಲಾ ಉಸ್ತುವಾರಿ ಸಮಿತಿ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮವಸ್ತ್ರ ಖರೀದಿಗೆ ಎಸ್‌ಡಿಎಂಸಿ ವಿಳಂಬ ಮಾಡುತ್ತಿದೆ ಎನ್ನುವ ವಾದವಿದೆ. ಅಧ್ಯಕ್ಷ ವಿಳಂಬ ಮಾಡಿದ್ರೆ ಶಾಲೆ ಹಿರಿಯ ಶಿಕ್ಷಕರ ಉಸ್ತುವಾರಿಯಲ್ಲಿ ಬಟ್ಟೆ ಖರೀದಿಸಬಹುದು. ವಿಳಂಬ ಮಾಡಿ ವಿತರಿಸಿದರೆ ಏನರ್ಥ? ಎಂದು ಸಂಸದ ಕರಡಿ ಅಧಿಕಾರಿಗಳ ಕಾರ್ಯ ವೈಖರಿಗೆ ಗರಂ ಆದರು. ಅಲ್ಲದೇ ಮುಂದೆ ಈ ರೀತಿಯಾಗದಂತೆ ನಿಗಾ ವಹಿಸಬೇಕು ಎಂದರು.

ಜಿಪಂ ಸಿಇಒ ರಘುನಂದನ್‌ ಮೂರ್ತಿ ಮಾತನಾಡಿ, 2019-20ನೇ ಸಾಲಿನಲ್ಲಿ ಎರಡನೇ ಜೊತೆ ಸಮವಸ್ತ್ರ ಅವಧಿ ಮುಗಿದ ನಂತರ ವಿತರಿಸಿದ ಕುರಿತ ಆರೋಪ ಕೇಳಿ ಬಂದಿದ್ದು, ಒಂದು ವಾರದೊಳಗೆ ಈ ಕುರಿತು ಶಾಲಾವಾರು ಮಾಹಿತಿ ಸಂಗ್ರಹಿಸಿ ವರದಿ ಸಲ್ಲಿಸಿ ಎಂದು ಶಿಕ್ಷಣ ಇಲಾಖೆ ಉಪನಿರ್ದೇಶಕರಿಗೆ ಸೂಚನೆ ನೀಡಿದರು.

ಸಂಸದರು ಮಾತನಾಡಿ, ಸಮಗ್ರ ಶಿಕ್ಷಣ ಅಭಿಯಾನ ಯೋಜನೆಯಡಿ ಖಾಸಗಿ ಶಾಲೆಗಳಿಗೆ ಆರ್‌ಟಿಇ ಶುಲ್ಕ ಮರುಪಾವತಿ ಕುರಿತ ಮಾಹಿತಿ ತಾಲೂಕುವಾರು ವಿಂಗಡಿಸಿ, ಬಾಕಿ ಉಳಿದ ಶಾಲೆಗಳ ಪಟ್ಟಿ ಕಾರಣ ಸಹಿತ ವರದಿ ಸಲ್ಲಿಸಬೇಕು. ಜಿಲ್ಲೆಯಲ್ಲಿ ಒಟ್ಟು 276 ಖಾಸಗಿ ಶಾಲೆಗಳಿಗೆ ಆರ್‌ಟಿಇ ಶುಲ್ಕ ಮರುಪಾವತಿ ಮಾಡಲಾಗುತ್ತದೆ. ಅವುಗಳಲ್ಲಿ ಯಾವ ಶಾಲೆಗೆ ಪೂರ್ಣ ಮರುಪಾವತಿ ಮಾಡಲಾಗಿದೆ, ಬಾಕಿ ಉಳಿದ ಶಾಲೆಗಳೆಷ್ಟು ಎಂಬ ಕುರಿತು ಶಾಲಾವಾರು-ತಾಲೂಕುವಾರು ಮಾಹಿತಿ ವರದಿ ಸಲ್ಲಿಸಿ ಎಂದರು.

ಕೆಕೆಆರ್‌ಡಿಬಿಯಿಂದ ಶಾಲಾ ಕಟ್ಟಡಗಳ ನಿರ್ಮಾಣ, ದುರಸ್ತಿಗೆ ಅನುದಾನ ಬಿಡುಗಡೆಗೊಂಡಿದ್ದರೂ ಈ ವರೆಗೂ 2017-18ನೇ ಸಾಲಿನ ಕಾಮಗಾರಿ ಪೂರ್ಣಗೊಳಿಸಿಲ್ಲ. ಬಹುತೇಕ ಶಾಲಾ ಮುಖ್ಯೋಪಾಧ್ಯಾಯರಿಗೆ ತಮ್ಮ ಶಾಲೆಯಲ್ಲಿ ಕಾಮಗಾರಿ ನಡೆಸುತ್ತಿರುವ ಏಜೆನ್ಸಿ ಕುರಿತು ಮಾಹಿತಿಯೇ ತಿಳಿದಿಲ್ಲ. ಚುನಾಯಿತ ಪ್ರತಿನಿಧಿಗಳು ಕಾಮಗಾರಿ ಪರಿಶೀಲನೆಗೆ ತೆರಳಿದಾಗ ಮುಖ್ಯೋಪಾಧ್ಯಾಯರಿಂದ ಸಮರ್ಪಕ ಮಾಹಿತಿ ದೊರೆಯುವುದಿಲ್ಲ. ಆದ್ದರಿಂದ ಜಿಲ್ಲೆಯಲ್ಲಿ ಎಲ್ಲ ಶಾಲಾ ಮುಖ್ಯೋಪಾಧ್ಯಾಯರಿಗೆ ಈ ಕುರಿತು ಪತ್ರ ಬರೆದು ಜನಪ್ರತಿನಿಧಿಗಳು ಶಾಲೆಗೆ ಭೇಟಿ ನೀಡಿದಾಗ ಸೂಕ್ತ ಮಾಹಿತಿ ನೀಡುವಂತೆ ಸೂಚನೆ ನೀಡಿ ಹಾಗೂ ವರ್ಷಗಳ ಹಿಂದಿನ ಕಾಮಗಾರಿ ಇನ್ನೂ ಪೂರ್ಣಗೊಂಡಿರದ ಬಗ್ಗೆ ಸೂಕ್ತ ಕಾರಣಗಳೊಂದಿಗೆ ವಾರದೊಳಗೆ ವರದಿ ನೀಡಿ ಎಂದರು.

Advertisement

ಕುಷ್ಟಗಿ ಶಾಸಕ ಅಮರೇಗೌಡ ಬಯ್ಯಾಪೂರ ಮಾತನಾಡಿ, ಜಿಲ್ಲೆಯಲ್ಲಿ ಶಿಕ್ಷಣ ತಜ್ಞರ ವರದಿ ಆಧಾರದಲ್ಲಿ ಶಾಲೆಗಳ ಉನ್ನತೀಕರಣಕ್ಕೆ ಕ್ರಮ ಕೈಗೊಳ್ಳಬೇಕು. ಗಣಿತ, ಇಂಗ್ಲಿಷ್‌ ಹಾಗೂ ವಿಜ್ಞಾನ ವಿಷಯಕ್ಕೆ ನಮ್ಮಲ್ಲಿ ಶಿಕ್ಷಕರೇ ಇಲ್ಲ. ಹೀಗಾದರೆ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ದೊರೆಯುವುದು ಹೇಗೆ? ಎಂದು ಪ್ರಶ್ನಿಸಿ ಕೂಡಲೇ ಅನುಭವಿ ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡು ಬೋಧನೆ ಮಾಡಿಸಬೇಕು ಎಂದರು.

ಶಿಕ್ಷಕರ ಕೊರತೆಯಿಂದ ಶೈಕ್ಷಣಿಕ ಹಿನ್ನಡೆ: ಮಕ್ಕಳ ಸಂಖ್ಯೆಯನುಸಾರ ಶಿಕ್ಷಕರ ಲಭ್ಯತೆ ಇರಬೇಕು. ಆದರೆ ಶಿಕ್ಷಕರ ಕೊರತೆಯಿಂದ ಉನ್ನತ ಉದ್ದೇಶಕ್ಕಾಗಿ ಆರಂಭವಾದ ಶಾಲಾ ಉನ್ನತೀಕರಣ ಯೋಜನೆ ಸಮರ್ಪಕ ಜಾರಿಗೆ ಬರದೇ ಶೈಕ್ಷಣಿಕ ಹಿನ್ನಡೆಗೆ ಕಾರಣವಾಗುತ್ತಿದೆ. ಯೋಜನೆಗಳ ಸಮರ್ಪಕ ಜಾರಿಯಿಂದ ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಕ್ರಮ ವಹಿಸಬೇಕು. ಜಿಲ್ಲಾ ಮಟ್ಟದಲ್ಲಿ ಸಂಸದರ ಅಧ್ಯಕ್ಷತೆಯಲ್ಲಿ ನಡೆಯುವ ಸಭೆಗೆ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಾಗದೆ ಅವರ ಪ್ರತಿನಿಧಿಗಳನ್ನು ಕಳುಹಿಸುತ್ತಾರೆ. ಅಂತಹ ಅಧಿಕಾರಿಗಳ ವಾರ್ಷಿಕ ವೇತನ ಬಡ್ತಿ ತಡೆಹಿಡಿದು, ಸೂಕ್ತ ಕ್ರಮ ಜರುಗಿಸಿ ಎಂದು ಸಂಬಂ ಧಿಸಿದ ಅಧಿಕಾರಿಗೆ ಒತ್ತಾಯಿಸಿದರು.

ವಾಸ್ತವಾಂಶ ಪಟ್ಟಿ ಮಾಡಿ: ಯಲಬುರ್ಗಾ ಶಾಸಕ ಹಾಲಪ್ಪ ಆಚಾರ್‌ ಮಾತನಾಡಿ, ಜಿಲ್ಲೆಯಲ್ಲಿ ಶಾಲೆಯಿಂದ ಹೊರಗುಳಿದ ಮಕ್ಕಳ ಸಂಖ್ಯೆ ಕುರಿತ ಮಾಹಿತಿ ಸರಿಯಾಗಿಲ್ಲ. ಸರಿಯಾಗಿ ಸಮೀಕ್ಷೆ ಮಾಡಿದರೆ ಪ್ರತಿ ತಾಲೂಕಿನಲ್ಲಿ ಕನಿಷ್ಠ 100 ಮಕ್ಕಳು ಸಿಗುತ್ತಾರೆ. ಅಧಿಕಾರಿಗಳು ವಾಸ್ತವಾಂಶ ಪಟ್ಟಿ ಮಾಡಿ ವರದಿ ನೀಡಬೇಕು. ವಿವಿಧ ಕಾರಣಗಳಿಂದ ಶಾಲೆಯಿಂದ ಹೊರಗುಳಿದ ಮಕ್ಕಳನ್ನು ಮತ್ತೆ ಶಾಲೆಗೆ ಸೇರಿಸಿ ಅವರಿಗೆ ಶಿಕ್ಷಣ ನೀಡಬೇಕು ಎಂದರು.

ಸಭೆಯಲ್ಲಿ ಜಿಪಂ ಸದಸ್ಯರಾದ ಗವಿಸಿದ್ದಪ್ಪ ಕರಡಿ, ಅಮರೇಶ ಗೋನಾಳ, ನಾಮನಿರ್ದೇಶಿತ ಸದಸ್ಯರಾದ ಹುಲುಗಪ್ಪ ಕಟ್ಟಿಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next