ಬಾಲಸೋರ್: ಒಡಿಶಾದ ಬಾಲಸೋರ್ ಜಿಲ್ಲೆಯಲ್ಲಿ ಇತ್ತೀಚೆಗೆ ಭೀಕರ ರೈಲ್ವೆ ದುರಂತ ನಡೆದಿದ್ದು ಎಲ್ಲರಿಗೂ ನೆನಪಿದೆ. ಅಲ್ಲಿ ಮೃತಪಟ್ಟವರ ಶವಗಳನ್ನು ತಾತ್ಕಾಲಿಕವಾಗಿ ಬಹನಾಗ ಪ್ರೌಢಶಾಲೆಯಲ್ಲಿಡಲಾಗಿತ್ತು. ಇದೀಗ ಶಿಕ್ಷಕರು ಮತ್ತು ಮಕ್ಕಳು ಈ ಶಾಲೆಗೆ ಕಾಲಿಡಲು ಹಿಂಜರಿ ಯುತ್ತಿದ್ದಾರೆ. ಜೂ.16ರಿಂದ ಶಾಲೆ ಆರಂಭವಾಗುತ್ತಿದ್ದರೂ ಎಲ್ಲರೂ ಹಿಂದೇಟು ಹಾಕುತ್ತಿರುವು ದರಿಂದ, 65 ವರ್ಷದ ಈ ಶಾಲಾ ಕಟ್ಟಡವನ್ನು ಕೆಡವಲು ಒಡಿಶಾ ಸರ್ಕಾರ ತೀರ್ಮಾನಿಸಿದೆ.ಮಾತ್ರವಲ್ಲ ಶುಕ್ರವಾರದಿಂದಲೇ ನೆಲಸಮಗೊಳಿಸುವ ಕಾರ್ಯ ಆರಂಭವಾಗಿದೆ. ಇದೇ ಸ್ಥಳದಲ್ಲಿ ಜಿಲ್ಲಾಡಳಿತ ನೂತನ ಶಾಲೆಯನ್ನು ನಿರ್ಮಿಸಲಿದೆ.
ಶಾಲಾ ವ್ಯವಸ್ಥಾಪಕ ಸಮಿತಿ(ಎಸ್ಎಂಸಿ) ಸದಸ್ಯರು ಮತ್ತು ಲೋಕೋಪಯೋಗಿ ಇಲಾಖೆ ಅಧಿ ಕಾರಿಗಳ ಸಮ್ಮುಖದಲ್ಲಿ ಕಟ್ಟಡ ಕೆಡವಲಾಗುತ್ತಿದೆ. “ಕಟ್ಟಡವು ಹಳೆಯದಾಗಿದೆ, ಸುರಕ್ಷಿತವಲ್ಲ. ಶವಗಳನ್ನು ಇರಿಸಲಾಗಿರುವ ಶಾಲೆಯಲ್ಲಿ ತರಗತಿಗಳಿಗೆ ಹಾಜರಾಗಲು ಮಕ್ಕಳು ಹಿಂಜರಿಯುತ್ತಾರೆಎಂದು ಎಸ್ಎಂಸಿ ಹೇಳಿದ ಬಳಿಕ ಕಟ್ಟಡವನ್ನು ನೆಲಸಮಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ’ ಎಂದು ಬಾಲಸೋರ್ ಜಿಲ್ಲಾಧಿಕಾರಿ ದತ್ತಾತ್ರೇಯ ಬಾಹುಸಾಹೇಬ್ ಶಿಂಧೆ ತಿಳಿಸಿದ್ದಾರೆ.
ಗುರುವಾರ ಶಾಲೆಗೆ ಭೇಟಿ ನೀಡಿದ್ದ ಅವರು, “ಭಯ ಮತ್ತು ಮೂಢನಂಬಿಕೆಯನ್ನು ಹರಡಬೇಡಿ. ಯುವ, ಪ್ರಭಾವಶಾಲಿ ಮನಸ್ಸಿನಲ್ಲಿ ವೈಜ್ಞಾನಿಕ ಮನೋಭಾವವನ್ನು ಬೆಳೆಸಲು ಪ್ರಯತ್ನಿಸ ಬೇಕು’ ಎಂದು ಗ್ರಾಮಸ್ಥರಲ್ಲಿ ಮನವಿ ಮಾಡಿದ್ದರು.
ಮೃತದೇಹಗಳನ್ನು ಶಾಲೆಗೆ ಸಾಗಿಸುವ ಫೋಟೋಗಳು ಮಕ್ಕಳ ಮನಸ್ಸಿನಲ್ಲಿ ಅಚ್ಚೊತ್ತಿರುವು ದರಿಂದ ಕಟ್ಟಡವನ್ನು ಕೆಡವಲು
ಪೋಷಕರು ಒತ್ತಾಯಿಸಿದ್ದರು. ಇನ್ನೊಂದೆಡೆ, ಶಾಲೆಯ ಎಸ್ಎಂಸಿಯ ನಿರ್ಧಾರ ಹಾಗೂ ಪಾಲಕರು ಮತ್ತು ಸ್ಥಳೀಯರ ಮನವಿಯ ಆಧಾರದ ಮೇಲೆ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿ ಸೇರಿದಂತೆ ಹಿರಿಯ ಅಧಿಕಾರಿಗಳೊಂದಿಗೆ ಗುರುವಾರ ಸಭೆ ನಡೆಸಿದ್ದರು.
Related Articles
ಈ ವೇಳೆ ಶಾಲೆಯ ಮರುನಿರ್ಮಾಣಕ್ಕೆ ಹಣಕಾಸು ಮಂಜೂರು ಮಾಡಿದ್ದರು. ಜತೆಗೆ ಗ್ರಂಥಾಲಯ, ವಿಜ್ಞಾನ ಪ್ರಯೋಗಾಲಯ, ಡಿಜಿಟಲ್ ತರಗತಿಗಳಂತಹ ಆಧುನಿಕ ಸೌಲಭ್ಯಗಳನ್ನು ಹೊಂದಿರುವ ಮಾದರಿ ಶಾಲೆಯನ್ನಾಗಿ ಮಾಡುವ ಪ್ರಸ್ತಾವನೆಗೆ
ಅನುಮೋದನೆ ನೀಡಿದ್ದರು.
ಜೂ.2ರಂದು ನಡೆದಿದ್ದ ರೈಲು ದುರಂತದಲ್ಲಿ 288 ನಾಗರಿಕರು ಮೃತಪಟ್ಟಿದ್ದರು. ಅಲ್ಲದೇ 1,200ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದರು. “ಇದುವರೆಗೆ 200ಕ್ಕೂ ಹೆಚ್ಚು ಶವಗಳನ್ನುಗುರುತಿಸಲಾಗಿದ್ದು, ಅವರ ಕುಟುಂಬಗಳಿಗೆ ಹಸ್ತಾಂತರಿಸಲಾಗಿದೆ’ ಎಂದು ಅಧಿಕಾರಿಗಳು ಇದೇ ವೇಳೆ ತಿಳಿಸಿದ್ದಾರೆ.