Advertisement

ಶಾಲಾ ವಿದ್ಯಾರ್ಥಿಗಳ ವಾಹನ;ಕಠಿನ ಕಾನೂನಿದ್ದರೂ ನಿಯಮ ಉಲ್ಲಂಘನೆ ನಿರಂತರ

05:20 AM Jul 21, 2017 | Team Udayavani |

– ಕಿರಣ್ ಸರಪಾಡಿ

Advertisement

ಮಹಾನಗರ:
ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುವ ವಾಹನಗಳ ಕುರಿತು ಎಷ್ಟೇ ಕಠಿನ ಕಾನೂನು ರೂಪಿಸಿದರೂ ನಿಯಮ ಉಲ್ಲಂಘನೆಯ ಪ್ರಕರಣಗಳು ದಾಖಲಾಗುತ್ತಲೇ ಇವೆ. ಈ ಶೈಕ್ಷಣಿಕ ವರ್ಷದಲ್ಲೇ ನಗರ ವ್ಯಾಪ್ತಿಯಲ್ಲಿ 200ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. 2008ರಲ್ಲಿ ಗುರುಪುರದ ಉಳ್ಳಾಯಿ ಬೆಟ್ಟು ಘಟನೆ ಬಳಿಕ ಕಠಿನ ಕಾನೂನು ರೂಪಿಸಿದ್ದರೂ ಕಳೆದ ವರ್ಷ ಜೂನ್‌ ತಿಂಗಳಲ್ಲಿ ಕುಂದಾಪುರದ ತ್ರಾಸಿಯಲ್ಲಿ ಭೀಕರ ದುರಂತವೊಂದು ನಡೆದಿತ್ತು. ಈ ಹಿನ್ನೆಲೆಯಲ್ಲಿ ಶಾಲಾ ವಿದ್ಯಾರ್ಥಿಗಳನ್ನು ಕರೆದೊಯ್ಯುವ ವಾಹನಗಳ ಕುರಿತು ಪೊಲೀಸ್‌ ಇಲಾಖೆ ವಿಶೇಷ ನಿಗಾ ಇಟ್ಟಿದೆ. ವಿದ್ಯಾರ್ಥಿಗಳನ್ನು ಶಾಲಾ ವಾಹನ ಗಳಲ್ಲೇ ಕೊಂಡೊಯ್ಯಬೇಕು ಎಂಬ ನಿಯಮವಿದ್ದರೂ, ಅನಿವಾರ್ಯ ತೆಯ ದೃಷ್ಟಿಯಿಂದ ಕೆಲವು ಷರತ್ತುಗಳ ಮೇಲೆ ಖಾಸಗಿ ವಾಹನಗಳಿಗೂ ಅವಕಾಶ ನೀಡಲಾಗಿದೆ. ಆದರೆ ಇಂತಹ ವಾಹನಗಳು ಸರಿಯಾಗಿ ಕಾನೂನು ಪಾಲಿಸುತ್ತಿಲ್ಲ ಎಂಬ ಆರೋಪ ಕೇಳಿ ಬರುತ್ತಿದೆ. 

17,700 ರೂ. ದಂಡ 
ನಿಯಮ ಮೀರಿ ಶಾಲಾ ವಿದ್ಯಾರ್ಥಿ ಗಳನ್ನು ಕೊಂಡೊಯ್ಯುವ ಕುರಿತು ಈ ಬಾರಿ ಸಂಚಾರ ಪೊಲೀಸರು 215 ಪ್ರಕರಣಗಳನ್ನು ದಾಖಲಿಸಿ, 17,700 ರೂ. ದಂಡ ಶುಲ್ಕ ಸಂಗ್ರಹಿಸಿದ್ದಾರೆ. ಮಂಗಳೂರು ಕಮೀಷನರೇಟ್‌ ವ್ಯಾಪ್ತಿಯ ಪಶ್ಚಿಮ, ಪೂರ್ವ ಹಾಗೂ ಉತ್ತರ ಸಂಚಾರ ಪೊಲೀಸ್‌ ಠಾಣೆಗಳಲ್ಲಿ ಈ ಪ್ರಕರಣ ದಾಖಲಾಗಿದೆ.

ಹೆಚ್ಚಿನ ಸಂದರ್ಭಗಳಲ್ಲಿ ಸಣ್ಣ ವಾಹನಗಳೇ ನಿಯಮ ಮೀರುತ್ತಿವೆ. ಆಟೋ ರಿಕ್ಷಾ, ಮಾರುತಿ ಆಮ್ನಿಯಂತಹ ವಾಹನಗಳಲ್ಲಿ ಬೇಕಾಬಿಟ್ಟಿ ವಿದ್ಯಾರ್ಥಿ ಗಳನ್ನು ತುಂಬಿಕೊಂಡು ಸಾಗಲಾಗುತ್ತಿದೆ. ಕೆಲವೊಂದೆಡೆ ರಿಕ್ಷಾಗಳಲ್ಲಿ ಚಾಲಕನ ಪಕ್ಕದಲ್ಲೂ ಅಜಾಗರೂಕತೆಯಿಂದ ವಿದ್ಯಾರ್ಥಿಗಳನ್ನು ಕುಳ್ಳಿರಿಸುವ ಬಗ್ಗೆಯೂ ದೂರು ಕೇಳಿಬಂದಿದೆ.

ಶಾಲೆಗಳ ವಾಹನವೇ ಉತ್ತಮ
ವಿದ್ಯಾರ್ಥಿಗಳ ಸುರಕ್ಷೆಯ ದೃಷ್ಟಿಯಿಂದ ಶಾಲೆಯ ಬಸ್ಸನ್ನೇ ಬಳಸುವುದು ಉತ್ತಮ. ದೊಡ್ಡ ವಾಹನಗಳು ಹೋಗದೇ ಇರುವ ಪ್ರದೇಶಕ್ಕೆ ಶಾಲೆಯ ವತಿಯಿಂದ ಸಣ್ಣ ವಾಹನಗಳ ವ್ಯವಸ್ಥೆ ಮಾಡಿ ಬಳಿಕ ಅವರನ್ನು ದೊಡ್ಡ ವಾಹನಗಳಿಗೆ ಕಳುಹಿಸುವ ವ್ಯವಸ್ಥೆ ಮಾಡಿದರೆ ಅನುಕೂಲ ಎನ್ನುತ್ತಾರೆ ಕೆಲವು ವಿದ್ಯಾರ್ಥಿಗಳ ಹೆತ್ತವರು.

Advertisement

ಇಲ್ಲದೇ ಇದ್ದರೆ ಇತರ ಖಾಸಗಿ ವಾಹನಗಳಲ್ಲಿ ಕಳುಹಿಸದ ಹೆತ್ತವರು ಒಬ್ಬ ವಿದ್ಯಾರ್ಥಿಗಾಗಿ ತಮ್ಮ ಸ್ವಂತ ಕಾರನ್ನು ಬಳಸುತ್ತಾರೆ. ಇದು ನಗರದ ಟ್ರಾಫಿಕ್‌ ಸಮಸ್ಯೆಗೂ ಕಾರಣ ವಾಗುತ್ತದೆ. ಶಾಲೆಗಳೇ ವಾಹನಗಳ ವ್ಯವಸ್ಥೆ ಮಾಡಿದರೆ ಸುರಕ್ಷೆ ಒಂದೆಡೆಯಾದರೆ, ಟ್ರಾಫಿಕ್‌ ಒತ್ತಡ ನಿವಾರಣೆಗೂ ಅನುಕೂಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ.

ನಿಯಮ ಹೀಗಿದೆ
ಶಾಲಾ ಮಕ್ಕಳನ್ನು ಕೊಂಡೊಯ್ಯುವ ಕುರಿತು ಸರ್ವೋಚ್ಚ ನ್ಯಾಯಾಲಯವು ಆರ್‌ಟಿಒ ಮೂಲಕ ಕೆಲವು ಆದೇಶಗಳನ್ನು ನೀಡಿದೆ. ಬಸ್‌ನ ಹಿಂಭಾಗ ಹಾಗೂ ಮುಂಭಾಗದಲ್ಲಿ ಕಡ್ಡಾಯವಾಗಿ ಶಾಲಾ ಬಸ್‌ ಎಂದು ಬರೆದಿರಬೇಕು, ಬಸ್‌ ಶಾಲಾ ಕರ್ತವ್ಯದಲ್ಲಿದೆ ಎಂಬ ಮಾಹಿತಿ, ನಿಗದಿತ ಆಸನ, ಪ್ರಥಮ ಚಿಕಿತ್ಸಾ ಬಾಕ್ಸ್‌, ಕಿಟಕಿಗಳಿಗೆ ಕಬ್ಬಿಣದ ಸರಳು, ಅಗ್ನಿ ನಂದಕ ವ್ಯವಸ್ಥೆ, ಶಾಲೆಯ ಹೆಸರು ಹಾಗೂ ದೂರವಾಣಿ ಸಂಖ್ಯೆ, ಬಾಗಿಲುಗಳಿಗೆ ಸಮರ್ಪಕ ಲಾಕ್‌ ವ್ಯವಸ್ಥೆ ಇರಬೇಕು. ಚಾಲಕರು 5 ವರ್ಷಗಳ ಘನ ವಾಹನ ಚಾಲನಾ ಅನುಭವ ಹೊಂದಿರಬೇಕು. ಸಂಚಾರ ನಿಯಮ ಉಲ್ಲಂಘಿಸಿದ ದಾಖಲೆ ಹೊಂದಿರಬಾರದು. ಸೀಟುಗಳ ಕೆಳ ಭಾಗದಲ್ಲಿ ಶಾಲಾ ಬ್ಯಾಗ್‌ ಇರಿಸುವ ವ್ಯವಸ್ಥೆ, ಮಕ್ಕಳ ರಕ್ತ ಮಾದರಿಯ ಮಾಹಿತಿ ಇರಬೇಕಾಗಿರುತ್ತದೆ. 

ಖಾಸಗಿ ವಾಹನ ನಿಯಮ215 ಪ್ರಕರಣ ದಾಖಲು
ನಾವು ಈ ಬಾರಿ ಶಾಲಾ ವಾಹನಗಳು ನಿಯಮ ಉಲ್ಲಂಘಿಸಿದ ಕುರಿತು ನಗರದ ಮೂರು ಠಾಣೆಗಳ ವ್ಯಾಪ್ತಿಯಲ್ಲಿ 215 ಪ್ರಕರಣಗಳನ್ನು ದಾಖಲಿಸಿಕೊಂಡಿದ್ದೇವೆ. ವಾಹನಗಳ ಕುರಿತು ಕಠಿನ ಕಾನೂನು ರೂಪಿಸಿದರೂ ನಿಯಮ ಉಲ್ಲಂಘನೆ ಕಂಡುಬರುತ್ತಿದೆ.

– ತಿಲಕ್‌ಚಂದ್ರ, ಎಸಿಪಿ, ಸಂಚಾರ ಪೊಲೀಸ್‌, ಮಂಗಳೂರು

ಅನಿವಾರ್ಯ ಸಂದರ್ಭಗಳಲ್ಲಿ ಖಾಸಗಿ ವಾಹನಗಳು ಕರಾರಿನ ಮೇರೆಗೆ ಶಾಲಾ ಮಕ್ಕಳಿಗೆ ಸಾರಿಗೆ ಸೌಲಭ್ಯ ಒದಗಿಸಬೇಕಾದರೆ ಮೋಟಾರು ವಾಹನ ಕಾಯಿದೆ 1988 ಕಲಂ 74 ರ ಪ್ರಕಾರ ವಾಹನ ರಹದಾರಿ ಹೊಂದಿರಬೇಕು. ಆಸನ ಸಾಮರ್ಥ್ಯ 12+1 ಗೆ ಮೀರದಂತೆ ಇರಬೇಕು. ಅನುಮೋದಿತ ಸ್ಪೀಡ್‌ ಗವರ್ನರ್‌ ಅಳವಡಿಸಿದ್ದು, ವೇಗಮಿತಿ ಗಂಟೆಗೆ 40 ಕಿ.ಮೀ.ಮೀರಬಾರದು. ನೋಂದಣಿ ದಿನಾಂಕ 15 ವರ್ಷ ಮೀರಿರಬಾರದು, ವಾಹನಕ್ಕೆ ಹೆದ್ದಾರಿ ಹಳದಿ ಬಣ್ಣ ಬಳಿಯಬೇಕು ಎಂಬ ನಿಯಮ ರೂಪಿಸಲಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next