ಮಾಗಡಿ: ಶಾಲೆ ಛಾವಣಿ ಕುಸಿಯುತ್ತಿದ್ದು ಕೂಡಲೇ ಅಧಿಕಾರಿಗಳು ದುರಸ್ತಿಗೆ ಮುಂದಾಗಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದಾರೆ. ಮಾಗಡಿ ತಾಲೂಕಿನ ಬಾಚೇನಹಟ್ಟಿ ಗ್ರಾಪಂ ವ್ಯಾಪ್ತಿಯ ಕಲ್ಲೂರು ಗ್ರಾಮದಲ್ಲಿ ಹಿರಿಯ ಪ್ರಾಥಮಿಕ ಶಾಲೆಯಿದೆ.
ಇಲ್ಲಿ ನೂರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಜ್ಞಾನ ದೇಗುಲಕ್ಕೆ ಕಾಲಿಟ್ಟರೆ ಸಾಕು ಮಕ್ಕಳ ಮನಸ್ಸು ಉಲ್ಲಾಸದಿಂದ ಕೂಡಿರುವಂತಿರಬೇಕು. ಆದರೆ ಇಲ್ಲಿ .ಮಳೆ ಬಿದ್ದರೆ ಸಾಕು ಕಲ್ಲೂರು ಹಿರಿಯ ಪ್ರಾಥಮಿಕ ಶಾಲಾ ಛಾವಣೆ ದಿನೇ ದಿನೆ ಉದುರುತ್ತಿರುವುದರಿಂದ ಮಕ್ಕಳು ಶಾಲೆ ಮೆಟ್ಟೆಲೇರಲು ಹಿಂಜರಿಯುತ್ತಾರೆ ಎಂಬ ಆತಂಕ ಪೋಷಕರಲ್ಲಿ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ;- ಕೇಂದ್ರ ಸಚಿವ ಅಜಯ್ ಮಿಶ್ರಾ ವಜಾಕ್ಕೆ ಆಗ್ರಹ
ಸರ್ಕಾರ ಗ್ರಾಮೀಣ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಸಾಕಷ್ಟು ಸುಧಾರಣೆ ಮಾಡುತ್ತಿದೆ. ಉತ್ತಮ ಬೋಧಕರಿದ್ದಾರೆ. ಮಕ್ಕಳೂ ಅತ್ಯಂತ ಕ್ರಿಯಾಶೀಲತೆಯಿಂದ ಶಾಲೆಗೆ ತೆರಳುತ್ತಿದ್ದಾರೆ. ಆದರೆ, ಮಕ್ಕಳು ಛಾವಣಿ ನೋಡಿದರೆ ಭಯ ಪಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಶಿಕ್ಷಕರಲ್ಲೂ ಭಯದ ವಾತಾವರಣವಿದೆ. ಪೋಷಕರೂ ತಮ್ಮ ಮಕ್ಕಳ ಭವಿಷ್ಯದ ಚಿಂತನೆ ಮಾಡುತ್ತಿದ್ದು, ಶಾಲೆ ಛಾವಣಿ ದುರಸ್ತಿಗೆ ಕ್ಷೇತ್ರ ಶಿಕ್ಷಣಾಧಿಕಾರಿಯಲ್ಲಿ ದೂರು ಸಲ್ಲಿಸಿದ್ದಾರೆ.
ಬಿಇಒ ಸ್ಥಳ ಪರಿಶೀಲನೆ ಮಾಡಬೇಕು. ಶಾಲಾ ದುರಸ್ತಿಗೆ ತುರ್ತು ಕ್ರಮ ವಹಿಸಬೇಕು. ಇಲ್ಲದಿದ್ದರೆ ಛಾವಣೆ ಯಾರ ತಲೆ ಮೇಲಾದರೂ ಬಿದ್ದರೆ ಕ್ಷೇತ್ರ ಶಿಕ್ಷಣಾಧಿಕಾರಿಗಳೇ ಹೊಣೆ ಎಂಬುದು ಗ್ರಾಮಸ್ಥರ ಆರೋಪ. ಈ ಸಂಬಂಧ ಕ್ಷೇತ್ರದ ಶಾಸಕ ಎ.ಮಂಜುನಾಥ್‌ಅವರಿಗೂ ಶಾಲಾ ಕಟ್ಟಡ ದುರಸ್ಥಿಗೆ ಮನವಿ ಮಾಡಿ ಒತ್ತಾಯಿಸುವುದಾಗಿ ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.