ಬೆಂಗಳೂರು: ಶಾಲಾರಂಭ ಹಾಗೂ ಶಿಕ್ಷಕರ ವರ್ಗಾವಣೆ ಸಹಿತವಾಗಿ ಶಿಕ್ಷಣ ಇಲಾಖೆಯ ಹಲವು ವಿಷಯಗಳ ಕುರಿತು ಸಚಿವ ಸುರೇಶ್ ಕುಮಾರ್ ಅವರು ಬುಧವಾರ ಬೆಳಗ್ಗೆ 11.30ಕ್ಕೆ ತಮ್ಮ ಇಲಾಖೆಯ ಅಧಿಕಾರಿಗಳ ಸಭೆ ನಡೆಸಲಿದ್ದಾರೆ.
ಶಾಲಾರಂಭಕ್ಕೆ ಸಂಬಂಧಿಸಿದಂತೆ ಈಗಾಗಲೇ ಪಾಲಕರು ಹಾಗೂ ಎಸ್‌ಡಿಎಂಸಿ ಸದಸ್ಯರ ಸಭೆ ಕರೆದು ಶಾಲಾವಾರು ಮಾಹಿತಿ ಪಡೆಯಲಾಗಿದೆ. ಬಹುತೇಕ ಪಾಲಕ, ಪೋಷಕರು ಸದ್ಯಕ್ಕೆ ಶಾಲಾರಂಭ ಬೇಡ, ಅದರಲ್ಲೂ ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ತರಗತಿಗಳನ್ನು ಕೊರೊನಾ ಪರಿಸ್ಥಿತಿ ಸಂಪೂರ್ಣ ತಿಳಿಯಾದ ನಂತರವೇ ಆರಂಭಿಸುವಂತೆ ಸಲಹೆ ನೀಡಿದ್ದರು.
ಇದಾದ ನಂತರ ತಜ್ಞರ ಅಭಿಪ್ರಾಯಗಳನ್ನು ಸಂಗ್ರಹಿಸಿದ್ದರು. ಕೆಲವರು ಶಾಲೆ ಅರಂಭಿಸಲು ಸಲಹೆ ನೀಡಿದ್ದರೆ, ಕೆಲವರು ಶಾಲಾರಂಭ ಬೇಡ, ಮಕ್ಕಳ ಸುರಕ್ಷತೆಗೆ ಸಂಬಂಧ ಅಗತ್ಯ ಕ್ರಮದ ನಂತರವೇ ಶಾಲಾರಂಭ ಮಾಡಬೇಕು ಎಂದು ಕೋರಿದ್ದರು.
ಇದನ್ನೂ ಓದಿ;ಸೇನೆಗೆ ಮತ್ತಷ್ಟು ಬಲ: ಭಾರತೀಯ ವಾಯುಪಡೆಗೆ ಸೇರ್ಪಡೆಯಾಗಲಿವೆ ಮತ್ತೆ 3 ರಫೇಲ್ ಯುದ್ಧ ವಿಮಾನ
ಈಗ ರಾಜ್ಯದಲ್ಲಿ ಕೊರೊನಾ ಪ್ರಕರಣ ಇಳಿಮುಖವಾಗುತ್ತಿರುವ ಜತೆಗೆ ಚೇತರಿಕೆ ಪ್ರಮಾಣವೂ ಚೆನ್ನಾಗಿದೆ. ಅಲ್ಲದೇ, ಕಾಲೇಜು ಆರಂಭಕ್ಕೆ ದಿನಾಂಕ ನಿಗದಿಯಾಗಿದೆ. ಈ ಹಿನ್ನೆಲೆಯಲ್ಲಿ ಶಾಲಾರಂಭ ಬಗ್ಗೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳುವ ಸಂಬಂಧ ಅಧಿಕಾರಿಗಳ ಸಭೆ ನಡೆಸಲಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಮೂಲಗಳು ತಿಳಿಸಿವೆ.