ವಿಜಯಪುರ: ಶಿಕ್ಷಣ ಇಲಾಖೆಯ ಅನುಮತಿ ಇಲ್ಲದೇ ಪಿಕ್ನಿಕ್ ಹೊರಟಿದ್ದ ಶಾಲಾ ವಾಹನ ಪಲ್ಟಿಯಾಗಿ ಕ್ಲೀನರ್ ಸ್ಥಳದಲ್ಲೇ ಮೃತಪಟ್ಟಿದ್ದು, 15ಕ್ಕೂ ಹೆಚ್ಚು ಮಕ್ಕಳು ಗಾಯಗೊಂಡ ಘಟನೆ ತಾಳಿಕೋಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.
ಶುಕ್ರವಾರ ತಾಳಿಕೋಟೆ ತಾಲೂಕಿನ ಚೋಕಾವಿ ಸರ್ಕಾರಿ ಪ್ರಾಥಮಿಕ ಶಾಲೆಯ ಮಕ್ಕಳು ಪಿಕ್ನಿಕ್ ಹೊರಡಿದ್ದರು. ಖಾಸಗಿ ವಾಹನದಲ್ಲಿ ಸದರಿ ಶಾಲೆಯ 30 ಕ್ಕೂ ಹೆಚ್ಚು ಮಕ್ಕಳು ಆಲಮಟ್ಟಿ ಶಾಸ್ತ್ರೀ ಜಲಾಶಯ ಪರಿಸರದ ವೀಕ್ಷಣೆಗೆ ಪಿಕ್ನಿಕ್ ಹೊರಟಿದ್ದರು.
ಇದನ್ನೂ ಓದಿ:ವಾಡಿ ಪುರಸಭೆ: 19 ಕೋಟಿ ಬಜೆಟ್ ಮಂಡನೆ
ತಾಳಿಕೋಟಿ ತಾಲೂಕಿನ ಕೂಚಬಾಳ-ಬಾವೂರ ಮಧ್ಯೆ ಚಾಲಕನ ನಿಯಂತ್ರಣ ತಪ್ಪಿ ವಾಹನ ಪಲ್ಟಿಯಾಗಿದೆ. ಅಪಘಾತದಲ್ಲಿ ಕ್ಲೀನರ್ ದಾವಲಸಾಬ ಸಾಲವಾಡಗಿ (40) ಮೃತಪಟ್ಟಿದ್ದಾನೆ. 15 ಕ್ಕೂ ಹೆಚ್ಚು ಮಕ್ಕಳಿಗೆ ಗಾಯಗಳಾಗಿದ್ದು, ಹಲವು ಮಕ್ಕಳನ್ನು ತಾಳಿಕೋಟಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಕೆಲವು ಮಕ್ಕಳನ್ನು ಸಮೀಪದ ತಮದಡ್ಡಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸಾಗಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
ಶಾಲಾ ಪಿಕ್ನಿಕ್ ಹೋಗಲು ಸದರಿ ಶಾಲೆಯ ಮುಖ್ಯೋಪಾಧ್ಯಾಯರು ಶಿಕ್ಷಣ ಇಲಾಖೆಯ ಅನುಮತಿ ಪಡೆದಿರಲಿಲ್ಲ ಎಂಬ ಆರೋಪ ಕೇಳಿ ಬಂದಿದ್ದು, ಮಕ್ಕಳ ಪೋಷಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.