ಬೆಂಗಳೂರು: ಕೋವಿಡ್ 19 ಹಿನ್ನೆಲೆಯಲ್ಲಿ ಶಾಲಾ ದಾಖಲಾತಿ ಪ್ರಕ್ರಿಯೆಗೆ ಪಾಲಕ, ಪೋಷಕರು ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುವಂತಿಲ್ಲ. ಹಾಗೆಯೇ ಶಾಲೆಯಿಂದಲೂ ಪ್ರವೇಶ ಸಂದರ್ಭದಲ್ಲಿ ಮಕ್ಕಳನ್ನು ಕರೆತರುವ ಸೂಚನೆ ನೀಡಬಾರದು ಎಂಬ ಸಂದೇಶವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ರವಾನಿಸಲಾಗಿದೆ. ಸಾಮಾನ್ಯವಾಗಿ, ಪಾಲಕರಿಗೆ ಮಕ್ಕಳನ್ನು ಶಾಲೆಗೆ ಸೇರಿಸುವುದು ಎಂದರೆ ಎಲ್ಲಿಲ್ಲದ ಹರ್ಷ. ಎಲ್‌ಕೆಜಿ, ಯುಕೆಜಿ, 1ನೇ ತರಗತಿ ಹೀಗೆ ಮಗುವಿನ ಶಾಲಾರಂಭದ ದಿನವನ್ನು ಪಾಲಕರು ಸದಾ ನೆನಪಿಟ್ಟುಕೊಳ್ಳುತ್ತಾರೆ.
ದಾಖಲಾತಿ ದಿನವೇ ಮಗುವನ್ನು ಶಾಲೆಗೆ ಕರೆದುಕೊಂಡು ಹೋಗುವುದು, ಶಾಲೆಗೆ ದಾಖಲಿಸಿಕೊಳ್ಳುವಾಗ ಮುಖ್ಯಶಿಕ್ಷಕರು ಆ ಮಗುವಿನ ಜತೆ ಮಾತನಾಡುವುದು ಕೆಲವೆಡೆ ಪುಟ್ಟ ಸಂದರ್ಶನ ಇರುತ್ತದೆ. ಆದರೆ, 2020-21ನೇ ಶಾಲಿನ ದಾಖಲಾತಿ ಪ್ರಕ್ರಿಯೆಯಲ್ಲಿ ಉತ್ಸಾಹಕ್ಕಿಂತ ನಿರುತ್ಸಾಹವೇ ಹೆಚ್ಚಿರಲಿದೆ. ಶಾಲೆ ಯಲ್ಲಿ ಶೈಕ್ಷಣಿಕ ಚಟುವಟಿಕೆ ಆರಂಭವಾದ ದಿನದಿಂದ ಮಕ್ಕಳು ಶಾಲೆಗೆ ಹೋಗಬೇಕು. ದಾಖಲಾತಿ ಅಥವಾ ಪ್ರವೇಶಾತಿ ಸಂದರ್ಭದಲ್ಲಿ ಪಾಲಕರ ಜತೆಗೆ ಹೋಗುವಂತಿಲ್ಲ. ಮುಂದಿನ ಶೈಕ್ಷಣಿಕ ವರ್ಷದ ದಾಖಲಾತಿ ಪ್ರಕ್ರಿಯೆ ಆರಂಭಿಸಲು ಎಲ್ಲ ಶಾಲೆಗಳಿಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಅನುಮತಿ ಕಲ್ಪಿಸಿದೆ.
ಜೂನ್ 8ರಿಂದ ದಾಖಲಾತಿ ಪ್ರಕ್ರಿಯೆ ಆರಂಭವಾಗಲಿದೆ. ಆದರೆ, ದಾಖಲಾತಿ ಸಂದರ್ಭದಲ್ಲಿ ಮಕ್ಕಳು ಶಾಲೆಗೆ ಹೋಗುವಂತಿಲ್ಲ. ಪಾಲಕ, ಪೋಷಕರು ಶಾಲೆಗೆ ಹೋಗಿ ಮಗುವಿನ ಸಂಪೂರ್ಣ ಮಾಹಿತಿ ನೀಡಿ, ದಾಖಲಾತಿ ಪ್ರಕ್ರಿಯೆ ಪೂರೈಸಿ ಬರಬೇಕು. ಮಕ್ಕಳಿಗೆ ಶಾಲೆ ತೋರಿಸಲು ಬೇರೆ ಯಾವುದೇ ಕಾರಣಕ್ಕೂ ಕರೆದುಕೊಂಡು ಹೋಗುವಂತಿಲ್ಲ ಎಂದು ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಈ ನಿಯಮ ಏಕೆ?: ಜೂ.8ರಿಂದ ಪ್ರವೇಶ ಪ್ರಕ್ರಿಯೆ ಆರಂಭವಾಗುತ್ತದೆ. ಪ್ರತಿವರ್ಷ ಪಾಲಕ ಪೋಷಕರು ಪ್ರವೇಶ ಸಂದರ್ಭದಲ್ಲಿ ಮಕ್ಕಳನ್ನು ಕರೆದುಕೊಂಡು ಹೋಗುವುದು ರೂಢಿ. ಈ ವರ್ಷ ಪರಿಸ್ಥಿತಿ ಭಿನ್ನವಾಗಿದೆ. ಕೋವಿಡ್ 19 ಭೀತಿ ಹೆಚ್ಚುತ್ತಲೇ ಇದೆ. ಶಾಲಾ ದಾಖಲಾತಿ ವೇಳೆ ಹೆಚ್ಚಿನ ಸಂಖ್ಯೆಯಲ್ಲಿ ಪಾಲಕ, ಪೋಷಕರು ಬರುತ್ತಾರೆ. ಸಾಮಾಜಿಕ ಅಂತರ ಸಹಿತವಾಗಿ ವಿವಿಧ ಸುರಕ್ಷತಾ ನಿಯಮ ಕಟ್ಟುನಿಟ್ಟಾಗಿ ಪಾಲನೆಯಾಗದೇ ಇರಬಹುದು. ಹೀಗಾಗಿ ಪಾಲಕರು ಮಾತ್ರ ದಾಖಲಾತಿ ಸಂದರ್ಭದಲ್ಲಿ ಹೋಗಬೇಕು ಎಂಬ ಸೂಚನೆ ನೀಡಲಾಗಿದೆ. ಅಲ್ಲದೆ, ಶಾಲೆಗಳು ಅಗತ್ಯ ಮುನ್ನೆಚ್ಚರಿಕಾ ಕ್ರಮ ವಹಿಸಲು ನಿರ್ದೇಶನ ನೀಡಿದ್ದೇವೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ವಿವರಿಸಿದರು.
ದಾಖಲಾತಿ ಅತಿ ಮುಖ್ಯ: ಸಾಮಾನ್ಯವಾಗಿ 2ರಿಂದ ಹತ್ತನೇ ತರಗತಿವರೆಗೆ ದಾಖಲಾತಿ ಸಮಸ್ಯೆ ಕಡಿಮೆ ಯಿರುತ್ತದೆ. 1ನೇ ತರಗತಿಗೆ ಸೇರಿದ ಮಗು ಎಸ್ಸೆಸ್ಸೆಲ್ಸಿ ಮುಗಿಯುವರೆಗೂ ಒಂದೇ ಶಾಲೆಯಲ್ಲಿರುತ್ತದೆ. ಅನಿವಾರ್ಯತೆಗೆ ಅನುಗುಣವಾಗಿ ಪಾಲಕ, ಪೋಷಕರ ವರ್ಗಾವಣೆ, ಶಾಲೆಯಲ್ಲಿ ಪ್ರೌಢ ತರಗತಿ ಇಲ್ಲದೇ ಇರುವುದು ಹೀಗೆ ಕೆಲವು ಕಾರಣಕ್ಕೆ ಶಾಲೆ ಬದಲಾಯಿಸಿದಾಗ ಹೊಸ ದಾಖಲಾತಿ ಮಾಡಬೇಕಾಗುತ್ತದೆ.
ಇದನ್ನು ಹೊರತುಪಡಿಸಿ, ಎಲ್‌ಕೆಜಿ ಅಥವಾ ಕೆ ಜಿ ದಾಖಲಾತಿ, 1ನೇ ತರಗತಿಗೆ ದಾಖಲಾತಿ ಅತಿ ಮುಖ್ಯವಾಗಿ ರುತ್ತದೆ. ಈ ವೇಳೆ ಮಕ್ಕಳು ಪಾಲಕರ ಜತೆ ಹೋಗುತ್ತಾರೆ. ಉಳಿದಂತೆ 1ನೇ ತರಗತಿಗೆ ಸೇರಿದ ಮಗು ಅದೇ ಶಾಲೆಯಲ್ಲಿ ಮುಂದುವರಿಯುವಾಗ ಪ್ರತಿವರ್ಷ ದಾಖಲಾತಿ ಪ್ರಕ್ರಿಯೆ ಹೆಚ್ಚೇನೂ ಇರುವುದಿಲ್ಲ. ಶುಲ್ಕ ಪಾವತಿಯೇ ಮುಖ್ಯವಾಗಿರುತ್ತದೆ ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.
ಶಾಲೆಗಳಲ್ಲಿ ಪ್ರವೇಶ ಪ್ರಕ್ರಿಯೆ ಹೇಗೆ ನಡೆಸಬೇಕು ಮತ್ತು ಶುಲ್ಕ ಸಂಗ್ರಹಣೆ ಸಹಿತವಾಗಿ ಎಲ್ಲ ಮಾಹಿತಿಯನ್ನು ಈಗಾಗಲೇ ಶಾಲೆಗಳಿಗೆ ನೀಡಿದ್ದೇವೆ. ಜೂ.8ರಿಂದ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದ್ದು, ಮಕ್ಕಳು ಪ್ರವೇಶ ಪ್ರಕ್ರಿಯೆ ಸಂದರ್ಭದಲ್ಲಿ ಹಾಜರಾಗಬೇಕಾಗಿಲ್ಲ. ಮಕ್ಕಳ ಪಾಲಕ, ಪೋಷಕರು ಹೋಗಿ ಪ್ರವೇಶ ಪ್ರಕ್ರಿಯೆ ಪೂರೈಸಬಹುದಾಗಿದೆ. ಪ್ರವೇಶದ ವೇಳೆ ಮಕ್ಕಳನ್ನು ಕರೆದುಕೊಂಡು ಹೋಗುವಂತಿಲ್ಲ.
-ಡಾ.ಕೆ.ಜಿ.ಜಗದೀಶ್, ಆಯುಕ್ತ, ಸಾರ್ವಜನಿಕ ಶಿಕ್ಷಣ ಇಲಾಖೆ
* ರಾಜು ಖಾರ್ವಿ ಕೊಡೇರಿ