ಮೊನ್ನೆ ಮಗಳ ಹುಟ್ಟಿದ ಹಬ್ಬವಿತ್ತು. ಪ್ರತಿ ವರ್ಷವೂ ಮಕ್ಕಳ ಹುಟ್ಟುಹಬ್ಬಕ್ಕೆ ಹೋಟೆಲಿಗೋ, ಐಸ್‌ಕ್ರೀಮ್ ಪಾರ್ಲರ್‌ಗೊà ಹೋಗುವುದು ರೂಢಿ. ಅವಳಿಗಿನ್ನೂ ನಾಲ್ಕು ವರ್ಷ. ಅವಳು, ತನ್ನ ಹುಟ್ಟಿದ ದಿನವನ್ನು ಲೆಕ್ಕವಿಡುವಷ್ಟು ದೊಡ್ಡವಳಲ್ಲ. ಆದರೆ, ಅವಳ ಅಣ್ಣನಿಗೆ ಗೊತ್ತು, ತಂಗಿಯ ಬರ್ತ್ ಡೇ ಯಾವತ್ತೆಂದು.
“ಅಮ್ಮಾ, ನಾವು ಬೆಂಗಳೂರಿನ ನಮ್ಮ ಮನೇಲಿದ್ದಿದ್ರೆ ಹೋಟೆಲ್‌ಗೆ ಹೋಗಬಹುದಿತ್ತು ಅಲ್ವಾ? ಅಲ್ಲಿ ಬ್ಲಾಕ್ ಫಾರೆಸ್ಟ್ ಕೇಕು ಕಟ್ ಮಾಡಬಹುದಿತ್ತು ಆಲ್ವಾ?’ ಅಂತ ಕೇಳುತ್ತಿದ್ದ. ಹೌದು, ನಾವು ಈಗ ಬೆಂಗಳೂರಿನ ಮನೆಯಲ್ಲಿಲ್ಲ. ಸಾಲ ಮಾಡಿ ತೆಗೆದು ಕೊಂಡ, ಸಾವಿರ ಕನಸುಗಳ ಜೊತೆಗೆ ಪೂರ್ತಿ ಮೂರು ವರ್ಷ ವಾಸ ಮಾಡಿದ ಬೆಂಗಳೂರಿನ ಮನೆಯನ್ನು ಖಾಲಿ ಮಾಡಿ, ಊರಿಗೆ ಬಂದಿದ್ದೇವೆ.
ಯಜಮಾನರ ಹುಟ್ಟೂರು ಇದು. ಪುಟ್ಟ ಹಳ್ಳಿ ಎಂದು ಬಿಡಿಸಿ ಹೇಳಬೇಕಿಲ್ಲ ತಾನೇ? ಈ ಊರಿ ನಲ್ಲಿ ಹೋಟೆಲ್ ಬಿಡಿ, ಹತ್ತಿರದಲ್ಲಿ ಅಂಗಡಿಯೂ ಇಲ್ಲ. ಹಾಗಂತ ಸಂಭ್ರಮಕ್ಕೆ ಕೊರತೆಯೂ ಇಲ್ಲ. ಮೊಮ್ಮಗಳ ಹುಟ್ಟಿದಹಬ್ಬ ಅಂತ, ಅತ್ತೆ ಸ್ವೀಟ್ ಮಾಡಿದ್ದಾರೆ. ಸಂಜೆ ಪೂಜೆಗೆ ಬನ್ನಿ ಎಂದು ಅಕ್ಕ ಪಕ್ಕದ ಮನೆಗಳ ಜನರಿಗೂ ಹೇಳಿದ್ದಾರೆ. ಅವರಿಗೆ, ನಾವೆಲ್ಲಾ ಮನೆಗೆ ಬಂದಿರುವ ಖುಷಿ.
“ಅಜ್ಜಿ, ಹೋದ್ವರ್ಷ ಬರ್ತ್ ಡೇ ದಿನ ನಾವು ಐಸ್‌ಕ್ರೀಮ್ ಪಾರ್ಲರ್‌ಗೆ ಹೋಗಿದ್ವಿ. ಆಮೇಲೆ ಮೂವಿಗೂ…’ ಕಳೆದ ದಿನಗಳ ಕಥೆಯನ್ನು ನೆನಪಿಸಿಕೊಳ್ಳುತ್ತಾ ಖುಷಿಪಡುತ್ತಿದ್ದಾನೆ ಮಗ. ಈ ನಡುವೆಯೇ ಬೆಂಗಳೂರಿನಿಂದ ಸುದ್ದಿ ಬಂದಿದೆ. ಯಜಮಾನರ ಸಹೋದ್ಯೋಗಿಗಳಿಬ್ಬರು ಕೆಲಸ ಕಳೆದುಕೊಂಡಿದ್ದಾರೆ. ಕಂಪನಿ ಲಾಸ್ ನಲ್ಲಿ ಇದೆ ಎಂಬ ಕಾರಣವನ್ನು ಮುಂದಿಟ್ಟು, ಇನ್ನೂ ಕೆಲವರನ್ನು ತೆಗೆಯುವ ಸಾಧ್ಯತೆ ಕೂಡ ಇದೆಯಂತೆ. ಹಾಗೆಯೇ ಒಂದಷ್ಟು ಜನರಿಗೆ ಶೇಕಡಾ 50ರಷ್ಟು ಸಂಬಳ ಕೊಟ್ಟು ಹೆಚ್ಚು ಕೆಲಸ ಮಾಡಿಸಿಕೊಳ್ಳುವ ಲೆಕ್ಕಾಚಾರ ಕೂಡ ಇದೆಯಂತೆ…
ಇಂಥವೇ ಸುದ್ದಿಗಳು ದಿನವೂ ಕೇಳಿಸುತ್ತಿವೆ. ಮುಂದಿನ ದಿನಗಳನ್ನು ನೆನೆಸಿಕೊಳ್ಳಲಾಗದೆ ಚಡಪಡಿಸುತ್ತಿದ್ದೇನೆ ನಾನು. ಮುಂದೆ ಎಲ್ಲವೂ ಸರಿ ಹೋಗಬ ಹುದಾ? ನಾವು ಮತ್ತೆ ಬೆಂಗಳೂರಿನ ನಮ್ಮ ಮನೆಗೆ ಹೋಗುತ್ತೇವಾ? ಬ್ಯಾಂಕ್‌ಗೆ ಸಾಲದ ಕಂತುಗಳನ್ನು ಕಟ್ಟುವಷ್ಟು ಮೊತ್ತದ ಸಂಬಳ ಸಿಗುತ್ತದೆಯಾ? ಹುಟ್ಟಿದ ಹಬ್ಬ ಅಂತ ಹೋಟೆಲ್ ಗೆ ಹೋಗುವ ಖುಷಿ, ಅಲ್ಲಿ ಖರ್ಚು ಮಾಡಲು ಬೇಕಿರುವಷ್ಟು ಕಾಸು ಉಳಿ ಯುತ್ತದೆಯಾ? ಅಕಸ್ಮಾತ್ ಯಜ ಮಾನರ ಕೆಲಸ ಹೋಗಿಬಿಟ್ಟರೆ ಮನೆಯ ಸಾಲದ ಕಂತು ಕಟ್ಟುವುದು ಹೇಗೆ? ಅಲ್ಲಿನ ಮನೆ ಮಾರಿ, ಒಂದು ಅಂಗಡಿಯೂ ಇಲ್ಲದ ಈ ಊರಿಗೆ ಶಾಶ್ವತವಾಗಿ ವಾಪಸ್ ಬರಲು ಮನಸ್ಸು ಒಪ್ಪುತ್ತದಾ? ಹಾಗೆ ಬಂದರೆ ಮಕ್ಕಳ ಭವಿಷ್ಯದ ಕಥೆ ಏನು?…
ಪ್ರಶ್ನೆಗಳ ಕೊನೆಗೊಂದು ಪ್ರಶ್ನೆಯೇ ಹುಟ್ಟಿ, ಚಿಂತೆಯೆಂಬ ತಳವಿರದ ಬಾವಿಗೆ ಮನಸ್ಸು ಬೀಳುತ್ತದೆ. “ಅಮ್ಮಾ, ನಾವು ವಾಪಸ್ ಹೋಗೋದು ಯಾವಾಗ?’- ನನ್ನ ಚಿಂತೆಗಳ ಬಗ್ಗೆ ಏನೇನೂ ಗೊತ್ತಿಲ್ಲದ ಮಗ ಮಗ ಕೇಳುತ್ತಾನೆ. ಏನೆಂದು ಉತ್ತರಿಸಲಿ? “ಇನ್ನೊಂದ್ ಸ್ವಲ್ಪ ತಿನ್ನೂ…’ ಅತ್ತೆ ಪ್ರೀತಿಯಿಂದ ಬಡಿಸಿದ ಸಿಹಿಯೂ, ಯಾಕೋ ಕಹಿ ಕಹಿ ಅನ್ನಿಸುತ್ತಿದೆ. ಏನು ಮಾಡಲಿ?
– ಮಮತಾ ಚೆನ್ನಪ್ಪ