Advertisement

Sagara ರಸ್ತೆ ಪಕ್ಕದಲ್ಲಿಯೇ ಶಾಲಾ ಬಸ್‌ಗಳ ನಿಲುಗಡೆ

08:31 PM Jul 03, 2024 | Shreeram Nayak |

ಸಾಗರ: ನಗರದಿಂದ ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ವರದಪುರಕ್ಕೆ ಹೋಗುವ ದಾರಿಯಲ್ಲಿ ಇರುವ ಶಾಲೆಯೊಂದರ ಮುಂದೆ ಆರಕ್ಕೂ ಹೆಚ್ಚು ಶಾಲಾ ಬಸ್‌ಗಳನ್ನು ಬೆಳಗ್ಗಿನಿಂದ ಸಂಜೆಯವರೆಗೆ ನಿಲ್ಲಿಸುವುದರಿಂದ ಸದ್ಯದಲ್ಲಿಯೇ ಅಪಘಾತಗಳಾಗುವ ಎಲ್ಲ ಸಾಧ್ಯತೆಗಳಿದ್ದು, ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಸಾರ್ವಜನಿಕರು ಎಚ್ಚರಿಕೆ ನೀಡಿದ್ದಾರೆ.

Advertisement

ಹಲವು ಬಾರಿ ಇಜೆ ಮನೆ ಗ್ರಾಪಂನ ಸೆಟ್ಟಿಸರದ ಗ್ರಾಮಸ್ಥರು ಶಾಲಾ ಮುಖ್ಯಸ್ಥರ ಗಮನಕ್ಕೆ ವಿಷಯ ತಂದಿದ್ದರೂ ಅವರು ಗಮನ ಕೊಟ್ಟಿಲ್ಲ ಎನ್ನಲಾಗಿದೆ.

ನಗರದಿಂದ ಸುಮಾರು ಎರಡು ಕಿಮೀ ಕ್ರಮಿಸಿದರೆ ರಸ್ತೆ ಪಕ್ಕದಲ್ಲಿಯೇ ಇರುವ ರಾಧಾಕೃಷ್ಣ ಪಬ್ಲಿಕ್ ಸ್ಕೂಲ್‌ನ ಶಾಲಾ ಬಸ್‌ಗಳು ಶಾಲೆಯ ಪಕ್ಕದಲ್ಲಿ ಡಾಂಬಾರು ರಸ್ತೆಗೆ ಅಂಟಿಕೊಂಡಂತೆಯೇ ನಿಲ್ಲುತ್ತದೆ. ಯಾವುದೇ ವ್ಯಕ್ತಿ, ವಾಹನ ಈ ವಾಹನಗಳ ಸಂದಿಯಿಂದ ಶಾಲೆಯ ಮುಖ್ಯ ದ್ವಾರದಿಂದ ಮುಖ್ಯ ರಸ್ತೆಗೆ ಏಕಾಏಕಿ ಬರುವ ಸಂದರ್ಭದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಶಾಲಾವಧಿ ಆರಂಭದ ಸಂದರ್ಭದಲ್ಲಿ, ಮುಕ್ತಾಯದ ಸಮಯದಲ್ಲಂತೂ ಬಸ್‌ಗಳ ಜೊತೆ ಮಕ್ಕಳನ್ನು ಕರೆದೊಯ್ಯುವ ಪೋಷಕರ ವಾಹನಗಳೂ ಬರುತ್ತವೆ.

ಈ ಸಂದರ್ಭದಲ್ಲಿ ಎದುರಿನಿಂದ ಬರುವ ವಾಹನಗಳು ರಸ್ತೆ ಬಿಟ್ಟು ಪಕ್ಕಕ್ಕಿಳಿದರೆ ಸ್ಕಿಡ್ ಆಗುವ ಅಪಾಯವೂ ಇದೆ. ಇದೇ ಶಾಲೆಯಿಂದ ಸ್ವಲ್ಪ ಮುಂದೆ ಎದುರಿನಿಂದ ಬಂದ ವಾಹನಕ್ಕೆ ರಸ್ತೆ ಬಿಟ್ಟು ಕೆಳಕ್ಕಿಳಿದ ಜೀಪ್ ಸ್ಕಿಡ್ ಆಗಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದ ಘಟನೆ ಮಂಗಳವಾರವಷ್ಟೇ ನಡೆದಿದೆ.

ಅದೃಷ್ಟಕ್ಕೆ ಓರ್ವನಿಗೆ ಅಲ್ಪ ಸ್ವಲ್ಪ ಗಾಯಗಳಷ್ಟೇ ಆಗಿ ದೊಡ್ಡ ಅಪಾಯದಿಂದ ಪಾರಾದಂತಾಗಿದೆ.

Advertisement

ವರದಪುರದ ಶ್ರೀಧರಾಶ್ರಮ, ವರದಳ್ಳಿಯ ದುರ್ಗಾಂಬಾ ದೇವಸ್ಥಾನ ಸೇರಿದಂತೆ ವಿವಿಧ ಧಾರ್ಮಿಕ, ಪ್ರೇಕ್ಷಣೀಯ ಸ್ಥಳಗಳು ಈ ಭಾಗದಲ್ಲಿರುವುದರಿಂದ ಈ ಮಾರ್ಗದಲ್ಲಿ ವಾಹನಗಳ ಸಂಚಾರ ನಿಬಿಡವಾಗಿಯೇ ಇರುತ್ತದೆ. ಈ ಹಿನ್ನೆಲೆಯಲ್ಲಿ ಶಾಲಾ ಬಸ್‌ಗಳನ್ನು ಈ ರೀತಿ ರಸ್ತೆಯ ಪಕ್ಕದಲ್ಲಿ ನಿಲ್ಲಿಸಿರುವುದು ಅಪಾಯವನ್ನು ಆಹ್ವಾನಿಸುವಂತಿದೆ ಎಂದು ಈ ರಸ್ತೆಯಲ್ಲಿ ಪ್ರತಿ ದಿನ ಸಂಚರಿಸುವ ಶ್ರೀಕಾಂತ್ ಭಟ್ ಆತಂಕ ವ್ಯಕ್ತಪಡಿಸಿದರು.

ಈ ಮೊದಲು ಬಸ್‌ಗಳು ಹೊರಗೆ ನಿಲ್ಲುತ್ತಿರಲಿಲ್ಲ. ಮಳೆಯ ಕಾರಣ ತಾತ್ಕಾಲಿಕವಾಗಿ ಇಲ್ಲಿ ನಿಲ್ಲಿಸಿರಬಹುದು. ಯಾವ ಕಾರಣಕ್ಕೂ ಇದು ಸರಿಯಲ್ಲ. ಬೇಕಿದ್ದರೆ ಅನತಿ ದೂರದಲ್ಲಿ ಇರುವ ಹೆಲಿಪ್ಯಾಡ್‌ನ ಆವರಣದಲ್ಲಿ ನಿಲ್ಲಿಸುವ ಕೆಲಸ ಮಾಡಬೇಕು ಎಂದು ಶಮಂತ ಕರ್ಕಿಕೊಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

ಈ ಭಾಗ ಎಡಜಿಗಳೇಮನೆ ಗ್ರಾಮ ಪಂಚಾಯ್ತಿ ವ್ಯಾಪ್ತಿಗೆ ಬರುತ್ತದೆ. ಇಲ್ಲಿನ ಪಿಡಿಓ ಹಾಗೂ ಇತರ ಅಧಿಕಾರಿಗಳು ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ. ಇಂತಹ ಅಪಾಯವನ್ನು ಅರಿತು ಅವರು ಕೂಡಲೇ ಸಂಬಂಧಿಸಿದ ಶಿಕ್ಷಣ ಇಲಾಖೆಯ ಬಿಇಓ, ಶಾಲಾ ಮುಖ್ಯಸ್ಥರ ಗಮನಕ್ಕೆ ತರಬೇಕಿತ್ತು. ಅಪಾಯಗಳು ಆದ ನಂತರ ಕ್ರಮಕ್ಕೆ ಮುಂದಾಗುವುದಕ್ಕಿಂತ ತಕ್ಷಣ ಎಚ್ಚೆತ್ತುಕೊಳ್ಳುವುದು ಜಾಣತನ.
-ಜಯಪ್ರಕಾಶ್ ಗೋಳಿಕೊಪ್ಪ, ಮಾಹಿತಿ ಹಕ್ಕು ಕಾರ್ಯಕರ್ತ

Advertisement

Udayavani is now on Telegram. Click here to join our channel and stay updated with the latest news.

Next