Advertisement
ಮುಂದಿನ ಶೈಕ್ಷಣಿಕ ವರ್ಷ ಒಂದರಿಂದ 10ನೇ ತರಗತಿವರೆಗಿನ ವಿದ್ಯಾರ್ಥಿಗಳ ಪಠ್ಯಪುಸ್ತಕಗಳನ್ನು ಸಂಕಲನಾತ್ಮಕ ಮೌಲ್ಯಮಾಪನ ರೀತಿಯಲ್ಲಿ ಅಂದರೆ ಎಸ್‌ಎ-1 ಹಾಗೂ ಎಸ್‌ಎ-2ಗಳಾಗಿ ವಿಂಗಡಿಸಿ ಪಠ್ಯಪುಸ್ತಕಗಳನ್ನು ಮುದ್ರಿಸಿ, ಸರಬರಾಜು ಮಾಡಲು ಇಲಾಖೆ ತೀರ್ಮಾನಿಸಿದೆ. ಪ್ರಸಕ್ತ ಶೈಕ್ಷಣಿಕ ವರ್ಷ ಶಾಲಾ ಮಕ್ಕಳ ಬ್ಯಾಗ್ ಹೊರೆ ಇಳಿಸಿ ತರಗತಿವಾರು 1.5 ಕೆಜಿಯಿಂದ ಗರಿಷ್ಠ ಐದು ಕೆಜಿ ವರೆಗೆ ತೂಕ ನಿಗದಿ ಮಾಡಿದ್ದ ಶಾಲಾ ಶಿಕ್ಷಣ ಇಲಾಖೆ, ಮುಂದಿನ ವರ್ಷದಿಂದ ಶೇ.50ರಷ್ಟು ಪಠ್ಯಪುಸ್ತಕದ ಹೊರೆ ಇಳಿಸಲು ಮುಂದಾಗಿದೆ. ಇದರಿಂದ ಶಾಲಾ ಮಕ್ಕಳು ಅರ್ಧವಾರ್ಷಿಕ ಪರೀಕ್ಷೆವರೆಗೆ ಒಂದು ಪಠ್ಯಪುಸ್ತಕ (ಭಾಗ-1), ಬಳಿಕ ವಾರ್ಷಿಕ ಪರೀಕ್ಷೆವರೆಗೆ ಇನ್ನೊಂದು ಪಠ್ಯಪುಸ್ತಕ (ಭಾಗ-2) ಬಳಸುವ ಮೂಲಕ ಶಾಲಾ ಬ್ಯಾಗ್‌ನ ಹೊರೆ ತಗ್ಗಿಸಿಕೊಳ್ಳಬಹುದಾಗಿದೆ.
ಪಠ್ಯಪುಸ್ತಕಗಳಿಂದ ಮಕ್ಕಳ ಶಾಲಾ ಬ್ಯಾಗ್ ಭಾರ ಹೆಚ್ಚಾಗಿದ್ದು, ಭಾರ ಇಳಿಸುವ ಕುರಿತು ಚರ್ಚಿಸಿ ಸಲಹೆ ನೀಡಲು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿತ್ತು. ಈ ಕುರಿತು ಅಧ್ಯಯನ ನಡೆಸಿದ ಸಮಿತಿ, ಶಾಲಾ ಬ್ಯಾಗ್ ಹೊರೆ ಇಳಿಕೆಗೆ ಪಠ್ಯಪುಸ್ತಕಗಳನ್ನು ಸಂಕಲನಾತ್ಮಕ ಮೌಲ್ಯಮಾಪನ ರೀತಿಯಲ್ಲಿ ಎರಡು ವಿಭಾಗಗಳಾಗಿ ವಿಂಗಡಿಸಿ, ಮುದ್ರಿಸುವ ಸಲಹೆ ನೀಡಿದ್ದು ಇದಕ್ಕೆ ಸರ್ಕಾರ ಅಸ್ತು ಎಂದಿದೆ. ಶಾಲಾ ಬ್ಯಾಗ್‌ನಲ್ಲಿ ಮಕ್ಕಳು ಕೊಂಡೊಯ್ಯುವ ಪಠ್ಯಪುಸ್ತಕಗಳ ತೂಕ ಕಡಿಮೆ ಮಾಡುವ ಉದ್ದೇಶದಿಂದ 1ರಿಂದ 10ನೇ ತರಗತಿವರೆಗಿನ ವಿಷಯವಾರು ಎಲ್ಲ ಪಠ್ಯಪುಸ್ತಕಗಳನ್ನು ರೂಪನಾತ್ಮಕ ಮೌಲ್ಯಮಾಪನ ಮತ್ತು ಸಂಕಲನಾತ್ಮಕ ಮೌಲ್ಯಮಾಪನವಾರು ವಿಂಗಡಿಸಿ ಮುದ್ರಿಸಬಹುದು. ಅರ್ಧ ವಾರ್ಷಿಕ ಪರೀಕ್ಷೆವರೆಗೆ ಭಾಗ-1 ಹಾಗೂ ವಾರ್ಷಿಕ ಪರೀಕ್ಷೆವರೆಗೆ ಭಾಗ-2 ಪುಸ್ತಕ ಮಾತ್ರ ಬಳಸುವುದರಿಂದ ಶಾಲಾ ಮಕ್ಕಳ ಬ್ಯಾಗ್ ಹೊರೆ ಅರ್ಧದಷ್ಟು ಇಳಿಕೆಯಾಗಲಿದೆ. ವಿಷಯವಾರು ಎರಡು ಭಾಗಗಳಾಗಿ (ಎಸ್‌ಎ-1, ಎಸ್‌ಎ- 2) ಪುಸ್ತಕಗಳನ್ನು ವಿಭಾಗಿಸಿ ಮುದ್ರಿಸಿದರೆ ಪ್ರತಿ ಪಠ್ಯಪುಸ್ತಕಕ್ಕೆ 8-10 ಪುಟಗಳು ಹೆಚ್ಚಾಗಲಿದ್ದು, ಪ್ರತಿ ಪುಟಕ್ಕೆ 0.45 ಪೈಸೆ ವೆಚ್ಚು ಹೆಚ್ಚಾಗಲಿದೆ. ಅಂದಾಜು 10 ಕೋಟಿ ರೂ.ಗಳಷ್ಟು ಹೆಚ್ಚುವರಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. ಶಾಲಾ ಶಿಕ್ಷಣ ಇಲಾಖೆ ಈ ಕ್ರಮದಿಂದ ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲಾ ಬ್ಯಾಗ್ ಹೊರೆ ಗಣನೀಯ ಪ್ರಮಾಣದಲ್ಲಿ ಇಳಿಕೆಯಾಗಿ ಮಕ್ಕಳ ಅನುಕೂಲವಾಗಲಿದೆ.
Related Articles
Advertisement