Advertisement

ಆಗಸ್ಟ್‌ ಬಳಿಕವೇ ಶಾಲೆ, ಕಾಲೇಜು ಆರಂಭ

01:45 AM Jun 08, 2020 | Sriram |

ಹೊಸದಿಲ್ಲಿ: ಮುಂದಿನ ತಿಂಗಳಿನಿಂದ ಶಾಲೆಗಳನ್ನು ತೆರೆಯುವ ರಾಜ್ಯ ಸರಕಾರಗಳ ಉತ್ಸಾಹಕ್ಕೆ ಕೇಂದ್ರ ಮಾನವ ಸಂಪದಭಿವೃದ್ಧಿ ಸಚಿವ ರಮೇಶ್‌ ಪೋಖ್ರಿಯಾಲ್  ತಣ್ಣೀರೆ ರಚಿದ್ದಾರೆ.

Advertisement

ಜುಲೈಯಲ್ಲ, ಆಗಸ್ಟ್‌ನಲ್ಲೂ ಶಾಲೆ ಆರಂಭವಾಗುವುದು ಅನುಮಾನ ಎಂಬ ಸುಳಿವನ್ನು ಅವರು ನೀಡಿದ್ದಾರೆ. “ಬಿಬಿಸಿ ಹಿಂದಿ’ ವಾಹಿನಿಗೆ ಸಂದರ್ಶನ ನೀಡಿರುವ ಅವರು, ಈ ವರ್ಷ ಆಗಸ್ಟ್‌ ಬಳಿಕ ಶಾಲೆ, ಕಾಲೇಜುಗಳು ಆರಂಭವಾಗಲಿವೆ. ಬಹುಶಃ ಆ.15ರ ಬಳಿಕ ತರಗತಿ ಆರಂಭಿಸುವ ಸಾಧ್ಯತೆ ಇದೆ ಎಂದಿದ್ದಾರೆ.

ಸಿಬಿಎಸ್‌ಇ ಸಹಿತ ಹಲವು ರಾಜ್ಯಗಳಲ್ಲಿ 10ನೇ ತರಗತಿ, ಪಿಯುಸಿ, ಡಿಪ್ಲೊಮಾ, ಪದವಿ ಪರೀಕ್ಷೆಗಳು ಬಾಕಿ ಉಳಿದಿವೆ. ಈ ಎಲ್ಲ ಪರೀಕ್ಷೆಗಳನ್ನು ನಡೆಸಿ ಆ.15ರ ವೇಳೆಗೆ ಫ‌ಲಿತಾಂಶ ಪ್ರಕಟಿಸಲು ಪ್ರಯತ್ನಿಸಲಾಗುವುದು. ಅನಂತರ ಪರಿಸ್ಥಿತಿ ಗಮನಿಸಿ ಶಾಲೆ, ಕಾಲೇಜು ಪ್ರಾರಂಭಿಸುತ್ತೇವೆ ಎಂದಿದ್ದಾರೆ.

ಯುಜಿಸಿ, ಎನ್‌ಸಿಇಆರ್‌ಟಿ ಮಾರ್ಗಸೂಚಿ
ಕಾಲೇಜು ಮತ್ತು ವಿ.ವಿ.ಗಳಿಗೆ ಯುಜಿಸಿ (ವಿ.ವಿ. ಅನುದಾನ ಆಯೋಗ), ಶಾಲೆಗಳಿಗೆ ಎನ್‌ಸಿ ಇಆರ್‌ಟಿ (ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್‌) ಮಾರ್ಗಸೂಚಿ ರೂಪಿಸುತ್ತಿವೆ.

ಶಾಲೆ, ಕಾಲೇಜು ಆರಂಭವಾದ ಬಳಿಕ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಇತರ ಸಿಬಂದಿಗೆ ಪ್ರತ್ಯೇಕ 3 ಮಾರ್ಗಸೂಚಿ ಸಿದ್ಧಪಡಿಸಲಾಗುವುದು. ಶಿಕ್ಷಕರು ಮಾಸ್ಕ್, ಕೈಗವಸು ಧರಿಸಬೇಕು. ಶಾಲೆಗಳು ಥರ್ಮಲ್‌ ಸ್ಕಾ ನರ್‌ ಅಳವಡಿಸಿಕೊಳ್ಳಬೇಕು. ಮೂವರು ಕುಳಿತುಕೊಳ್ಳುವ ಬೆಂಚ್‌ನಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಮಾತ್ರ ಅವಕಾಶ ನೀಡಬೇಕು. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ನಿಗಾ ವಹಿಸಲು ಸಿಸಿ ಕೆಮರಾಗಳನ್ನು ಅಳವಡಿಸಿ ಕೊಳ್ಳಬೇಕು ಇತ್ಯಾದಿ ಸುರಕ್ಷಾ ಕ್ರಮ ಕೈಗೊಳ್ಳಲು ಮಾರ್ಗಸೂಚಿಗಳನ್ನು ರೂಪಿಸಲಾಗುತ್ತಿದೆ.

Advertisement

ಆಗಸ್ಟ್‌ ಬಳಿಕ ಶಾಲೆ, ಕಾಲೇಜುಗಳನ್ನು ಪುನ ರಾರಂಭಿಸಿ, ಅನಂತರ ಮತ್ತಷ್ಟು ನಿಯಮ ಗಳೊಂದಿಗೆ ಪರಿಷ್ಕೃತ ಮಾರ್ಗಸೂಚಿ ರೂಪಿಸಲು ನಿರ್ಧರಿಸಲಾಗಿದೆ ಎಂದು ತಿಳಿದು ಬಂದಿದೆ.

ಶಾಲಾರಂಭದ ಕುರಿತು
ಕೇಂದ್ರದ ಸೂಚನೆ ಪಾಲನೆ
ಬೆಂಗಳೂರು: ಕೇಂದ್ರ ಸರಕಾರದ ನಿರ್ಧಾರದಂತೆ ರಾಜ್ಯದಲ್ಲೂ ಆ.25ರ ಅನಂತರವೇ ಶಾಲೆಗಳಲ್ಲಿ ಶೈಕ್ಷಣಿಕ ಚಟುವಟಿಕೆ ಆರಂಭಿಸಬೇಕು ಮತ್ತು ಈ ವಿಚಾರವಾಗಿ ಕೇಂದ್ರ ಸರಕಾರದ ಸೂಚನೆಯನ್ನು ರಾಜ್ಯ ಶಿಕ್ಷಣ ಇಲಾಖೆ ಪಾಲಿಸ ಬೇಕು ಎಂದು ಶಿಕ್ಷಣ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಮಾನವ ಸಂಪದಭಿವೃದ್ಧಿ ಸಚಿವ ರಮೇಶ್‌ ಪೋಖ್ರಿಯಾಲ್ ಅವರು ಆ.15ರ ಬಳಿಕವೇ ದೇಶಾದ್ಯಂತ ಶಾಲೆ, ಕಾಲೇಜು ಆರಂಭವಾಗಲಿವೆ ಎಂದಿದ್ದಾರೆ. ಹೀಗಾಗಿ ರಾಜ್ಯ ಸರಕಾರ ಅಥವಾ ಶಿಕ್ಷಣ ಇಲಾಖೆ ಈ ವಿಚಾರವಾಗಿ ತರಾತುರಿಯ ನಿರ್ಧಾರ ತೆಗೆದುಕೊಳ್ಳಬಾರದು. ಶಿಕ್ಷಣ ಇಲಾಖೆಯು ಜುಲೈಯಲ್ಲಿ ಶಾಲೆ ಆರಂಭಿಸುವ ಬಗ್ಗೆ ಉದ್ದೇಶಿತ ದಿನಾಂಕ ಘೋಷಣೆ ಮಾಡಿರುವುದು ಸರಿಯಲ್ಲ ಎಂದು ತಜ್ಞರು ಹೇಳಿದ್ದಾರೆ.

ಶಾಲೆ ಆರಂಭಕ್ಕೆ ಸಂಬಂಧಿಸಿ ಕೇಂದ್ರ ಸರಕಾರದ ಸೂಚನೆ ಗಳನ್ನು ಪಾಲಿಸಬೇಕು. ಹೆತ್ತವರು, ಪೋಷಕರಲ್ಲಿ ಗೊಂದಲ ಮೂಡಿಸುವ ಹೆಜ್ಜೆ ಇರಿಸಬಾರದು ಎಂದು ರಾಷ್ಟ್ರೀಯ ಶಿಕ್ಷಕರ ಫೆಡರೇಶನ್‌ನ ಬಸವರಾಜ ಗುರಿಕಾರ್‌ ಹೇಳಿದ್ದಾರೆ.

ಶಾಲಾರಂಭಕ್ಕೆ ಸಂಬಂಧಿಸಿದಂತೆ ಈಗಾಗಲೇ ಶಿಕ್ಷಣ ಸಚಿವರು ಮತ್ತು ಇಲಾಖೆಯ ಅಧಿಕಾರಿಗಳ ಮಾತುಕತೆ ನಡೆಸಿದ್ದೇವೆ. ಕೇಂದ್ರದ ನಿರ್ದೇಶನದಂತೆ ನಡೆಯುವುದೇ ಉತ್ತಮ ಎಂದು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ವಿ.ಎಂ.ನಾರಾಯಣ ಸ್ವಾಮಿ ಹೇಳಿದ್ದಾರೆ.

ಶಾಲೆ ಆರಂಭಕ್ಕೆ ಸಂಬಂಧಿಸಿ ಕೇಂದ್ರದಿಂದ ಸೂಚನೆ ಬಂದಿಲ್ಲ. ಎಂಎಚ್‌ಆರ್‌ಡಿ ನಿರ್ದೇಶನ ದಂತೆ ನಡೆಯಬೇಕಾಗುತ್ತದೆ. ಶಾಲೆಗಳ ಮೂಲಕ ಹೆತ್ತವರು, ಪೋಷಕರು ಹಾಗೂ ಎಸ್‌ಡಿಎಂಸಿ ಸದಸ್ಯರ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಿ, ಸಲ್ಲಿಸಲು ಸೂಚನೆ ಬಂದಿದೆ. ಅದರಂತೆ ನಡೆಯಲಿದ್ದೇವೆ, ಕೇಂದ್ರದ ನಿರ್ದೇಶನ ಪಾಲಿಸಲಾಗುವುದು.
-ಡಾ| ಕೆ.ಜಿ. ಜಗದೀಶ್‌, ಶಿಕ್ಷಣ ಇಲಾಖೆ ಆಯುಕ್ತ

Advertisement

Udayavani is now on Telegram. Click here to join our channel and stay updated with the latest news.

Next