ವೆಲ್ಲಿಂಗ್ಟನ್: ಪ್ರವಾಸಿ ಶ್ರೀಲಂಕಾ ವಿರುದ್ಧ ಸಾಂಘಿಕ ಪ್ರದರ್ಶನ ನೀಡಿದ ನ್ಯೂಜಿಲ್ಯಾಂಡ್ ಮೊದಲ ಏಕದಿನ ಪಂದ್ಯದಲ್ಲಿ 9 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಬ್ಯಾಟಿಂಗ್ ಕುಸಿತಕ್ಕೆ ಸಿಲುಕಿದ ಶ್ರೀಲಂಕಾ 43.4 ಓವರ್ಗಳಲ್ಲಿ 178ಕ್ಕೆ ಆಲೌಟ್ ಆಯಿತು. ನ್ಯೂಜಿಲ್ಯಾಂಡ್ 26.2 ಓವರ್ಗಳಲ್ಲಿ ಒಂದೇ ವಿಕೆಟಿಗೆ 180 ರನ್ ಬಾರಿಸಿತು.
ಚೇಸಿಂಗ್ ವೇಳೆ ವಿಲ್ ಯಂಗ್ ಅಜೇಯ 90, ರಚಿನ್ ರವೀಂದ್ರ 45 ರನ್ ಬಾರಿಸಿದರು. ಈ ಆರಂಭಿಕ ಜೋಡಿಯಿಂದ ಮೊದಲ ವಿಕೆಟಿಗೆ 12.3 ಓವರ್ಗಳಲ್ಲಿ 93 ರನ್ ಹರಿದು ಬಂತು. ಮಾರ್ಕ್ ಚಾಪ್ಮನ್ ಔಟಾಗದೆ 29 ರನ್ ಮಾಡಿದರು.
ಶ್ರೀಲಂಕಾದ ಆರಂಭ ಅತ್ಯಂತ ಆಘಾತಕಾರಿಯಾಗಿತ್ತು. 10 ಓವರ್ ಅಂತ್ಯಕ್ಕೆ ಕೇವಲ 23 ರನ್ನಿಗೆ 4 ವಿಕೆಟ್ ಉರುಳಿತ್ತು. ಆರಂಭಕಾರ ಆವಿಷ್ಕ ಫೆರ್ನಾಂಡೊ 56, ಜನಿತ್ ಲಿಯನಗೆ 36, ವನಿಂದು ಹಸರಂಗ 35 ರನ್ ಮಾಡಿ ಒಂದಿಷ್ಟು ಹೋರಾಟ ಸಂಘಟಿಸಿದರು.
ಮ್ಯಾಟ್ ಹೆನ್ರಿ 19ಕ್ಕೆ 4, ಜೇಕಬ್ ಡಫಿ ಮತ್ತು ನಥನ್ ಸ್ಮಿತ್ ತಲಾ 2 ವಿಕೆಟ್ ಉರುಳಿಸಿದ ಲಂಕೆಯನ್ನು ಕಾಡಿದರು. ಹೆನ್ರಿಗೆ ಪಂದ್ಯಶ್ರೇಷ್ಠ ಗೌರವ ಒಲಿಯಿತು.