Advertisement

2020ರ ಟಿ20 ವಿಶ್ವಕಪ್‌ ವೇಳಾಪಟ್ಟಿ  ಪ್ರಕಟ

04:33 AM Jan 30, 2019 | Team Udayavani |

ದುಬಾೖ: ಮುಂದಿನ ವರ್ಷ ಆಸ್ಟ್ರೇಲಿಯ ದಲ್ಲಿ ನಡೆಯಲಿರುವ 7ನೇ ಐಸಿಸಿ ಟಿ20 ವಿಶ್ವಕಪ್‌ನ ಸಂಪೂರ್ಣ ವೇಳಾಪಟ್ಟಿ ಪ್ರಕಟವಾಗಿದೆ. ಅ. 18ರಿಂದ ನ.15ರ ವರೆಗೆ ಕೂಟ ನಡೆಯಲಿದೆ. ಭಾರತ ತನ್ನ ಮೊದಲ ಪಂದ್ಯವನ್ನು ದಕ್ಷಿಣ ಆಫ್ರಿಕಾ ವಿರುದ್ಧ ಅ. 24ರಂದು ಆಡಲಿದೆ. ಈ ಕೂಟ ಒಂದು ತಿಂಗಳ ಕಾಲ ನಡೆಯಲಿದೆ. 

Advertisement

ಅ. 18ರಿಂದ ಅ. 23ರ ವರೆಗೆ ಅರ್ಹತಾ ಸುತ್ತಿನ ಪಂದ್ಯಗಳು ನಡೆಯಲಿವೆ. ಅರ್ಹತಾ ಸುತ್ತಿನ “ಎ’ ಗುಂಪಿನ ಪಂದ್ಯಗಳಲ್ಲಿ ಶ್ರೀಲಂಕಾ ಮತ್ತು ಇತರೆ 3 ತಂಡಗಳು ಆಡಲಿವೆ. “ಬಿ’ ಗುಂಪಿನ ಪಂದ್ಯ ಗಳಲ್ಲಿ ಬಾಂಗ್ಲಾ
ದೇಶ ಮತ್ತು ಇತರ ತಂಡಗಳು ಆಡಲಿವೆ. ಈ ಎರಡೂ ಗುಂಪಿ ನಿಂದ ತಲಾ 2 ತಂಡಗಳು ಸೂಪರ್‌ 12 ಹಂತಕ್ಕೆ ಸ್ಥಾನ ಪಡೆಯಲಿವೆ.

ಮಾದರಿ ಹೇಗೆ? 
ಅಗ್ರ  ಶ್ರೇಯಾಂಕ ಹೊಂದಿರುವ ಒಟ್ಟು 8 ತಂಡಗಳು ನೇರವಾಗಿ ಪ್ರವೇಶ ಪಡೆದಿವೆ. ಉಳಿದ ನಾಲ್ಕು ತಂಡಗಳು ಅರ್ಹತಾ ಸುತ್ತಿನಲ್ಲಿ ಆಡಿ ಮೇಲೇರಲಿವೆ. ಟಿ20 ವಿಶ್ವಕಪ್‌ ಅನ್ನು 2 ಬಾರಿ ಗೆದ್ದಿರುವ ಶ್ರೀಲಂಕಾ ತಂಡವೂ ಅರ್ಹತಾ ಸುತ್ತಿನಲ್ಲಿ ಆಡುವ ಪರಿಸ್ಥಿತಿಗಿಳಿದಿದ್ದು ಈ ಬಾರಿಯ ವಿಪರ್ಯಾಸ. ಇನ್ನೊಂದು ಕಡೆ ಪ್ರಬಲ ತಂಡ ಬಾಂಗ್ಲಾದೇಶ ಅರ್ಹತಾ ಸುತ್ತಿನಲ್ಲಿ ಆಡಬೇಕಾಗಿ ಬಂದಿದೆ.

ಸೂಪರ್‌ 12 ಹಂತದ 1ನೇ ಗುಂಪಿನಲ್ಲಿ ಪಾಕಿಸ್ತಾನ, ಆಸ್ಟ್ರೇಲಿಯ, ವೆಸ್ಟ್‌ ಇಂಡೀಸ್‌, ನ್ಯೂಜಿಲೆಂಡ್‌ ತಂಡಗಳಿವೆ. ಈ ತಂಡಗಳ ಜತೆಗೆ “ಬಿ’ ಗುಂಪಿನ ಅರ್ಹತಾ ಸುತ್ತಿನಲ್ಲಿ ಗೆದ್ದು ಬಂದ ಎರಡು ತಂಡಗಳು ಸೇರ್ಪಡೆಯಾಗಲಿವೆ. 2ನೇ ಗುಂಪಿನಲ್ಲಿ ಭಾರತ, ಇಂಗ್ಲೆಂಡ್‌, ದ. ಆಫ್ರಿಕಾ, ಅಫ್ಘಾನಿಸ್ಥಾನ ತಂಡಗಳಿವೆ. “ಎ’ ಗುಂಪಿನ ಅರ್ಹತಾ ಸುತ್ತಿನಿಂದ ಗೆದ್ದು ಬಂದ ಎರಡು ತಂಡಗಳು ಈ ಗುಂಪನ್ನು ಕೂಡಿಕೊಳ್ಳಲಿವೆ. ಅ. 24ರಿಂದ ಮುಖ್ಯ ಸುತ್ತಿನ ಪಂದ್ಯಗಳು ನಡೆಯಲಿವೆ. ನ. 11, 12 ರಂದು ಎರಡು ಸೆಮಿಫೈನಲ್‌ ಪಂದ್ಯಗಳು ಹಾಗೂ ನ. 15ರಂದು ಮೆಲ್ಬರ್ನ್ನಲ್ಲಿ ಫೈನಲ್‌ ಪಂದ್ಯ ನಡೆಯಲಿದೆ.

ಭಾರತ-ಪಾಕ್‌ ಸೆಣಸಾಟ ಏಕಿಲ್ಲ?
ಗುಂಪು ಹಂತದಲ್ಲಿ ಭಾರತ-ಪಾಕಿಸ್ಥಾನ ತಂಡಗಳು ಪರಸ್ಪರ ಎದುರಾಗುತ್ತಿಲ್ಲ. 2011ರ ಅನಂತರ ಮೊದಲ ಬಾರಿಗೆ ಐಸಿಸಿ ಕೂಟದಲ್ಲಿ ಭಾರತ-ಪಾಕಿಸ್ಥಾನ ಗುಂಪು ಹಂತದಲ್ಲಿ ಎದುರಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದಕ್ಕೆ ಕಾರಣ ವಿಶೇಷ. ಪಾಕಿಸ್ಥಾನ ಈಗ ವಿಶ್ವ ನಂ.1 ಟಿ20 ತಂಡ, ಭಾರತ ವಿಶ್ವ ನಂ.2 ತಂಡ. ಹೀಗಾಗಿ ಎರಡೂ ತಂಡಗಳು ಪ್ರತ್ಯೇಕ ಗುಂಪುಗಳಲ್ಲಿವೆ.

Advertisement

ವನಿತಾ ತಂಡಕ್ಕೆ ಆಸ್ಟ್ರೇಲಿಯ ಎದುರಾಳಿ
ಪುರುಷರ ಹಾಗೂ ವನಿತೆಯರ ಟಿ20 ವಿಶ್ವಕಪ್‌ ಇದೇ ಮೊದಲ ಬಾರಿಗೆ ಒಂದೇ ವರ್ಷ, ಒಂದೇ ದೇಶದಲ್ಲಿ ಆಯೋಜಿಸಲಾಗಿದೆ. ವನಿತಾ ಟಿ20 ಕೂಟ ಫೆಬ್ರವರಿ 21ರಿಂದ ಮಾರ್ಚ್‌ 8ರ ವರೆಗೆ ನಡೆಯಲಿದೆ. 10 ತಂಡಗಳು ಒಟ್ಟು 23 ಪಂದ್ಯಗಳನ್ನಾಡಲಿದ್ದು, ಫೆ. 21 ರಂದು ಸಿಡ್ನಿಯಲ್ಲಿ ನಡೆಯಲಿರುವ ಮೊದಲ ಪಂದ್ಯದಲ್ಲಿ ಭಾರತ  ಹಾಲಿ ಚಾಂಪಿಯನ್‌ ಆಸ್ಟ್ರೇಲಿಯ ತಂಡವನ್ನು ಎದುರಿಸಲಿದೆ. 

“ಎ’ ಗುಂಪಿನಲ್ಲಿ ಭಾರತ, ಆಸ್ಟ್ರೇಲಿಯ, ನ್ಯೂಜಿಲ್ಯಾಂಡ್‌ ಹಾಗೂ ಒಂದು ಅರ್ಹತಾ ತಂಡವಿದ್ದರೆ, ವೆಸ್ಟ್‌ಇಂಡೀಸ್‌, ಇಂಗ್ಲೆಂಡ್‌, ದ. ಆಫ್ರಿಕಾ, ಪಾಕಿಸ್ಥಾನ ಹಾಗೂ 2ನೇ ಅರ್ಹತಾ ತಂಡ “ಬಿ’ ಗುಂಪಿನಲ್ಲಿದೆ.
ವನಿತಾ ಟಿ20ಯ ಫೈನಲ್‌ ಅಂತಾರಾಷ್ಟ್ರೀಯ ಮಹಿಳಾ ದಿನವಾದ ಮಾರ್ಚ್‌ 8ರಂದೇ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next