Advertisement

ಆಕಾಶದಲ್ಲಿ ಅಚ್ಚರಿ ಮೂಡಿಸಿದ ಕಾಮನಬಿಲ್ಲಿನ ದೃಶ್ಯ

07:09 PM Aug 11, 2021 | Team Udayavani |

ಹಾವೇರಿ: ಆಕಾಶದಲ್ಲಿ ಸೂರ್ಯನ ಸುತ್ತ ವೃತ್ತಾಕಾರದಲ್ಲಿ ಮಂಗಳವಾರ ಮಧ್ಯಾಹ್ನ ಕಂಡುಬಂದ ಕಾಮನಬಿಲ್ಲಿನ ಬಣ್ಣದ ದೃಶ್ಯ ಕೆಲಹೊತ್ತು
ಅಚ್ಚರಿ ಮೂಡಿಸಿತು.

Advertisement

ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಧ್ಯಾಹ್ನ ಕೆಲ ಗಂಟೆಗಳ ಹೊತ್ತು ಸೂರ್ಯನ ಸುತ್ತ ಕೋಟೆಯ ರೀತಿಯಲ್ಲಿ ಕಂಡು ಬಂದ ಆಕಾಶದ ವಿಸ್ಮಯವನ್ನು
ಜನತೆ ಕಣ್ತುಂಬಿಕೊಂಡು ಸಂಭ್ರಮಿಸಿದರು.

ಕೆಲವರು ತಮ್ಮ ಮೊಬೈಲ್‌ಗ‌ಳಲ್ಲಿ ಖಗೋಳದ ಈ ವಿಸ್ಮಯವನ್ನು ಸೆರೆ ಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರಿಂದ ಕೆಲ
ಹೊತ್ತಿನಲ್ಲಿಯೇ ಫೋಟೋ ವೈರಲ್‌ ಆಗಿದ್ದು, ಎಲ್ಲರ ಮೊಬೈಲ್‌ಗ‌ಳಲ್ಲಿ ಹರಿದಾಡತೊಡಗಿತು. ಭಾರತ ಜ್ಞಾನ ವಿಜ್ಞಾನ ಸಮಿತಿಯವರು ಇದಕ್ಕೆ
ಕಾರಣ, ಪರಿಣಾಮ, ಅರ್ಥವೇನು ಎಂದು ಜನರ ಪ್ರಶ್ನೆಗಳಿಗೆ ಉತ್ತರ ಕೊಟ್ಟು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹಾವೇರಿ, ಕೋಳೂರು ಹಾಗೂ
ಹೋತನಹಳ್ಳಿಯಲ್ಲಿ ತಂಡ ವೀಕ್ಷಣೆಯ ಮೂಲಕ ಜನರಿಗೆ ತಿಳಿವಳಿಕೆ ನೀಡಿದರು.

ವೈಜ್ಞಾನಿಕ ಕಾರಣ: ಸೂರ್ಯನ ಸುತ್ತ ತೇಜೋಪುಂಜದಂತೆ ಕಾಣುವ ಈ ಉಂಗುರ ನಿರ್ಮಾಣವಾಗಲು ಮುಖ್ಯ ಕಾರಣ ಬೆಳಕಿನ ವಕ್ರೀಭವನ ಕ್ರಿಯೆ. ವಾತಾವರಣದಲ್ಲಿ ಮಂಜಿನ ಹರಳುಗಳ ಮೇಲೆ ಸೂರ್ಯನ ಕಿರಣಗಳು ಬಿದ್ದಾಗ, ಕಿರಣಗಳು ವಕ್ರೀಭವನ ಹೊಂದಿ ಬಾಗುತ್ತವೆ. ಬೆಳಕಿನ ಏಳು ಬಣ್ಣಗಳು ಪ್ರಕಟಗೊಳ್ಳುತ್ತದೆ. ಅತಿ ಸೂಕ್ಷ್ಮ ಸ್ವರೂಪದ ಮೋಡಗಳ ಇರುವಿಕೆಯಿಂದ ನೋಡುಗರ ಕಣ್ಣುಗಳಿಗೆ ಈ ನೈಸರ್ಗಿಕ ಕ್ರಿಯೆ ಉಂಗುರದಂತೆ ಗೋಚರಿಸುತ್ತದೆ. ಈ ಮೋಡಗಳು ಸುಮಾರು 20,000 ಅಡಿ ಎತ್ತರದಲ್ಲಿ ಸೃಷ್ಟಿಯಾಗಿರುತ್ತವೆ.

ಮೋಡಗಳು ಕೋಟಿಗಟ್ಟಲೆ ಅತೀ ಸೂಕ್ಷ್ಮ ಮಂಜಿನ ಹರಳಗಳನ್ನು ಒಳಗೊಂಡಿರುತ್ತವೆ. ಈ ಉಂಗುರವನ್ನು ವಿಭಿನ್ನ ಕೋನಗಳಲ್ಲಿ ನೋಡಿದಾಗ
ಕೊಂಚ ಭಿನ್ನವಾಗಿ ಗೋಚರಿಸುತ್ತದೆ. ಸರಿಯಾದ ಕೋನದಲ್ಲಿ ನೋಡಿದಾಗ ಮಾತ್ರ ಕಾಮನಬಿಲ್ಲಿನ ಗೋಲದಂತೆ ಕಾಣಿಸುತ್ತದೆ. ಇಲ್ಲವಾದರೆ ಕೇವಲ ಬಿಳಿ ಉಂಗುರದಂತೆ ಕಾಣಿಸುತ್ತದೆ. ಸೂರ್ಯ ಮಾತ್ರವಲ್ಲ ರಾತ್ರಿ ವೇಳೆ ಚಂದ್ರನ ಸುತ್ತಲೂ ಕೆಲವೊಮ್ಮೆ ಇಂತಹ ಉಂಗುರ ಕಾಣಿಸಿಕೊಳ್ಳುತ್ತದೆ. ವಿಜ್ಞಾನಿಗಳು ಇದನ್ನು 22 ಡಿಗ್ರಿ ಉಂಗುರ ಎಂದೂ ಕರೆಯುತ್ತಾರೆ. ಏಕೆಂದರೆ ಈ ಉಂಗುರಗಳು ಸೂರ್ಯ ಅಥವಾ ಚಂದ್ರನ ಸುತ್ತ ಸರಿಸುಮಾರು 22 ಡಿಗ್ರಿ ತ್ರಿಜ್ಯ ಹೊಂದಿರುತ್ತವೆ.

Advertisement

ಹೋತನಹಳ್ಳಿಯಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಉಪಾಧ್ಯಕ್ಷ ಆರ್‌.ಸಿ.ನಂದೀಹಳ್ಳಿ, ರಾಮಚಂದ್ರ ಚಲವಾದಿ, ಆರ್‌.ಎಸ್‌.ಹೆಸರೂರ, ಅನುಪಮ ಕುಮಾರ, ಮಂಗಲಾ ಬೈಲುವಾಳ, ಕಾವೇರಿ ಅಸಾದಿ, ನಿತ್ಯಾ, ಭಾಗ್ಯಾ, ಸಿದ್ಧಲಿಂಗೇಶ, ಮಲ್ಲಿಕಾರ್ಜುನ, ಕುರಣ, ನವೀನ ಮುಂತಾದವರು ಖಗೋಳದ ವಿಸ್ಮಯ ವೀಕ್ಷಿಸಿದರು.ಕೋಳೂರಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿ ಕಾರ್ಯದರ್ಶಿ ಜಿ. ಎಂ. ಓಂಕಾರಣ್ಣನವರ, ಆರ್‌. ಎಸ್‌.ಮೇಲ್ಮುರಿ, ಬಿ.ಎಂ.ಅಂಗಡಿ, ವಿ.ಎಸ್‌. ಕೂಸಗೂರ, ಆರ್‌.ಕೆ.ಸಣ್ಣಮನಿ ಹಾಗೂ ಬಿ.ಬಿ. ನಾನಾಪೂರ ತಂಡ ಕಟ್ಟಿಕೊಂಡು ಜನಜಾಗೃತಿ ಮೂಡಿಸಿದರು. ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಬಿ. ಬಸವರಾಜ, ಕೇಂದ್ರ ಸಮಿತಿ ಸದಸ್ಯ ರೇಣುಕಾ
ಗುಡಿಮನಿ, ಮಾಲತೇಶ ಕರ್ಜಗಿ, ಮೊಹ್ಮದಲಿ ಮುಂತಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next