ದೊಡ್ಡಬಳ್ಳಾಪುರ: ನಗರ ಸೇರಿದಂತೆ ಹೊರ ವಲಯದಲ್ಲಿರುವ ಸಿ.ಟಿ.ಸ್ಕ್ಯಾನ್ ಕೇಂದ್ರಗಳಲ್ಲಿ ಸರ್ಕಾರ ನಿಗದಿಪಡಿಸಿರುವ ದರಕ್ಕಿಂತ ಹೆಚ್ಚಿನ ದರ ಪಡೆಯುತ್ತಿರುವ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬಂದ ಹಿನ್ನಲೆಯಲ್ಲಿ ರಾಜ್ಯ ಕ್ಷ ಕಿರಣ- ವಿಕಿರಣಾ ಸುರಕ್ಷತಾ ಉಪ ನಿರ್ದೇಶಕ ಕೆ.ಎಸ್.ರಾಜೇಶ್ ನೇತೃತ್ವದ ತಂಡ ಸ್ಕ್ಯಾನಿಂಗ್ ಕೇಂದ್ರಗಳ ಮೇಲೆ ದಾಳಿ ನಡೆಸಿ ಪರಿಶೀಲಿಸಿದೆ.
ಸೋಂಕು ಪತ್ತೆಗೆ ಹೆಚ್.ಆರ್.ಸಿ.ಟಿ ಸ್ಕ್ಯಾನ್ ಪರೀಕ್ಷೆಗಾಗಿ ಸರ್ಕಾರ ಬಿಪಿಎಲ್ ಕಾರ್ಡ್ ಇರುವವರಿಗೆ ಎಲ್ಲಾ ಶುಲ್ಕ ಸೇರಿ 1500, ಇತರೆ ವರ್ಗದ ಜನರಿಗೆ 2500 ರೂ., ಹಾಗೂ ಚೆಸ್ಟ್ ಎಕ್ಸರೇಗೆ 250 ರೂ. ಮಾತ್ರ ಪಡೆಯಲು ಸರ್ಕಾರ ಆದೇಶ ಮಾಡಿದೆ. ಕೋವಿಡ್ ಸಂಕಷ್ಟದಲ್ಲೂ ತಾಲೂಕಿನ ಬಹುತೇಕ ಸಿ.ಟಿ.ಸ್ಕ್ಯಾನಿಂಗ್ ಕೇಂದ್ರಗಳು ಹಗಲು ದರೋಡೆ ನಡೆಸುತ್ತಿವೆ. ಸರ್ಕಾರ ನಿಗದಿ ಮಾಡಿರುವುದಕ್ಕಿಂತ ಹೆಚ್ಚಿನ ಶುಲ್ಕ ಪಡೆಯುತ್ತಿದ್ದಾರೆ.
ಅಲ್ಲದೆ, ಸರ್ಕಾರ ನಿಗದಿ ಮಾಡಿರುವ ಬೆಲೆಯ ನಾಮ ಫಲಕ ಅಳ ವಡಿಸದೆ, ಸರ್ಕಾರಿ ನಿಯಮ ಉಲ್ಲಂಗಿಸುತ್ತಿರುವುದಲ್ಲದೆ, ರೋಗಿಗಳಿಗೆ ರಸೀದಿ ನೀಡುತ್ತಿಲ್ಲ. ಇಂತಹ ಸ್ಕ್ಯಾನ್ ಕೇಂದ್ರಗಳ ಪರವಾನಗಿ ರದ್ದುಗೊಳಿಸಬೇಕು ಎಂದು ಜಿಲ್ಲಾ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ಪ್ರಧಾನ ಕಾರ್ಯದರ್ಶಿ ಚುಂಚೇಗೌಡನಹೊಸಹಳ್ಳಿ ಹನುಮಂತರಾಯಪ್ಪ ದೂರಿದರು.
ಕೇಂದ್ರಗಳಿಗೆ ಅಧಿಕಾರಿಗಳು ಎಚ್ಚರಿಕೆ: ನಗರದ ವಿವಿಧ ಸ್ಕ್ಯಾನಿಂಗ್ ಕೇಂದ್ರದವರು ಸಾರ್ವಜನಿಕರಿಗೆ ಸಿ.ಟಿ ಸ್ಕ್ಯಾನ್ ಪರೀಕ್ಷೆಗಾಗಿ ಬಿಲ್ಲು ನೀಡುತ್ತಿಲ್ಲ ಎಂಬ ಮಾಹಿತಿ ದಾಖಲೆಗಳು ಮತ್ತುಸ್ಥಳದಲ್ಲಿ ಲಭ್ಯವಿದ್ದ ರೋಗಿಗಳಿಂದ ಸ್ಥಳದಲ್ಲೇ ಮಾಹಿತಿಯನ್ನ ಅಧಿಕಾರಿಗಳು ಪಡೆದುಕೊಂಡರು. ನಿಯಮ ಮೀರಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲಾ ಕೇಂದ್ರಗಳ ಮೇಲೆ ಕೆ.ಪಿ.ಎಂ.ಇ ಕಾಯ್ದೆಯಡಿ ನೋಟಿಸ್ ನೀಡಲಾಗಿದ್ದು, ಸದ್ಯದ ನ್ಯೂನತೆಗಳನ್ನು ಸರಿಪಡಿಸಿಕೊಳ್ಳದೆ ಇದ್ದಲ್ಲಿ ಎನ್.ಡಿ.ಎಂ.ಎ ಕಾಯ್ದೆ ಮತ್ತು ಎಪಿಡೆಮಿಕ್ ಡಿಸ್ಟಾರ್ ಕಾಯ್ದೆಯಡಿ ಕೇಂದ್ರವನ್ನು ಮುಚ್ಚಲು ಮತ್ತು ಶಿಕ್ಷೆಗೆ ಒಳಪಡಿಸಲು ಶಿಫಾರಸ್ಸು ಮಾಡಲಾಗುವುದು ಎಂದು ಉಪ ನಿರ್ದೇಶಕ ಕೆ.ಎಸ್.ರಾಜೇಶ್ ತಿಳಿಸಿದರು.
ಅಧಿಕಾರಿಗಳಾದ ಶಿವಕುಮಾರ, ಎಂ.ಆರ್. ರಾಮಚಂದ್ರರೆಡ್ಡಿ, ಡಾ.ನಾಗೇಶ್ ಇದ್ದರು.