ಹೊಸದಿಲ್ಲಿ : ಭಾರತ ಮತ್ತು ಫ್ರಾನ್ಸ್ ನಡುವೆ ಏರ್ಪಟ್ಟಿರುವ ರಫೇಲ್ ಯುದ್ಧ ವಿಮಾನ ಖರೀದಿ ವಹಿವಾಟಿನ ವಿರುದ್ಧ ಸಲ್ಲಿಸಲಾಗಿರುವ ಹೊಸ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಸುಪ್ರೀಂ ಕೋರ್ಟ್ ಅ.10ರಂದು ವಿಚಾರಣೆಗೆ ಎತ್ತಿಕೊಳ್ಳಲು ಒಪ್ಪಿದೆ.
ರಫೇಲ್ ವ್ಯವಹಾರದ ವಿವರಗಳನ್ನು ಬಹಿರಂಗಪಡಿಸುವಂತೆ ಮತ್ತು UPA -NDA ಅವಧಿಯಲ್ಲಿನ ರಫೇಲ್ ದರಗಳ ವ್ಯತ್ಯಾಸಗಳನ್ನು ಮುಚ್ಚಿದ ಲಕೋಟೆಯಲ್ಲಿ ಭದ್ರಪಡಿಸಿ ತಿಳಿಸುವಂತೆ ಕೇಂದ್ರಕ್ಕೆ ಸೂಚನೆ ನೀಡಬೇಕು ಎಂದು ಸಾರ್ವಜನಿಕ ಅರ್ಜಿ ಆಗ್ರಹಿಸಿದೆ.
ವಕೀಲ ವಿನೀತ್ ಧಂಡ ಅವರು ಸಲ್ಲಿಸಿರುವ ಈ ಸಾರ್ವಜನಿಕ ಅರ್ಜಿಯನ್ನು ವರಿಷ್ಠ ನ್ಯಾಯಮೂರ್ತಿ ರಂಜನ್ ಗೊಗೋಯ್ ಮತ್ತು ಜಸ್ಟಿಸ್‌ಗಲಾದ ಎಸ್ ಕೆ ಕೌಲ್ ಮತ್ತು ಕೆ ಎಂ ಜೋಸೆಫ್ ಅವರನ್ನು ಒಳಗೊಂಡ ಪೀಠವು ವಿಚಾರಣೆಗೆ ಎತ್ತಿಕೊಳ್ಳಲಿದೆ.
ರಫೇಲ್ ಖರೀದಿಯಲ್ಲಿ ಸರಕಾರದಿಂದ 16,000 ಕೋಟಿ ರೂ.ಗಳ ಅವ್ಯವಹಾರ ನಡೆದಿದೆ ಎಂದು
ಕಾಂಗ್ರೆಸ್ ಪಕ್ಷ ಬಹಳ ಸಮಯದಿಂದಲೂ ಆರೋಪಿಸುತ್ತಲೇ ಬಂದಿದ್ದು ಬೊಫೋರ್ಸ್ ಮೀರಿದ ರಕ್ಷಣಾ ಖರೀದಿ ಹಗರಣ ಇದಾಗಿದೆ ಎಂದು ಹೇಳಿದೆ. ಅಂತೆಯೇ ಇದನ್ನು 2019ರ ಲೋಕಸಭಾ ಚುನಾವಣೆಯಲ್ಲಿ ಪ್ರಮುಖ ವಿಷಯವನ್ನಾಗಿ ಮಾಡಲು ಉದ್ದೇಶಿಸಿದೆ.