ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ವಾರ್ಡ್ ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಅನ್ಯಾಯವಾಗಿದೆ ಎಂಬ ಕುರಿತಾಗಿ ಸಲ್ಲಿಕೆಯಾದ ರಿಟ್‌ಅನ್ನು ಪುರಸ್ಕರಿಸಿರುವ ಹೈಕೋರ್ಟ್ ಧಾರವಾಡ ಪೀಠ, ಶುಕ್ರವಾರ ರಾಜ್ಯ ಚುನಾವಣಾ ಆಯೋಗ, ನಗರಾಭಿವೃದ್ದಿ ಕಾರ್ಯದರ್ಶಿ ಹಾಗೂ ಧಾರವಾಡ ಜಿಲ್ಲಾಧಿಕಾರಿಗೆ ನೋಟಿಸ್ ಜಾರಿಗೊಳಿಸಿದೆ.
ಮಹಾನಗರ ಪಾಲಿಕೆ ಚುನಾವಣೆಯ ವಾರ್ಡ್ ಮೀಸಲಾತಿಯಲ್ಲಿ ಪರಿಶಿಷ್ಟ ಜಾತಿ, ಪಂಗಡದವರಿಗೆ ಅನ್ಯಾಯವಾಗಿದೆ ಎಂದು ಸಾಮಾಜಿಕ ಹೋರಾಟಗಾರ ಬಸವರಾಜ ತೇರದಾಳ ಅವರು, ಹೈಕೋರ್ಟ್ ಧಾರವಾಡ ಪೀಠದ ಮೊರೆ ಹೋಗಿದ್ದರು. ರಿಟ್‌ಅನ್ನು ವಿಚಾರಣೆಗೆ ಎತ್ತಿಕೊಂಡಿರುವ ನ್ಯಾಯಾಲಯ ನೋಟಿಸ್ ಜಾರಿ ಮಾಡಿ ವಿವರಣೆ ನೀಡುವಂತೆ ಸೂಚಿಸಿದೆ. ಈ ಕುರಿತಾಗಿ ಮಾತನಾಡಿದ ಸಾಮಾಜಿಕ ಹೋರಾಟಗಾರ ಬಸವರಾಜ ತೇರದಾಳ, ಸೌಲಭ್ಯಗಳಲ್ಲಿ ಪರಿಶಿಷ್ಟ ಜಾತಿಗೆ ಶೇ.15 ಹಾಗೂ ಪರಿಶಿಷ್ಟ ಪಂಗಡಕ್ಕೆ ಶೇ.3 ಸೇರಿದಂತೆ ಒಟ್ಟು ಶೇ.18 ಪಾಲು/ ಸ್ಥಾನಗಳನ್ನು ನೀಡಬೇಕು.
ಪಾಲಿಕೆ ಚುನಾವಣೆಯಲ್ಲಿ ವಾರ್ಡ್ ಮೀಸಲು ಮೂಲಕ ಪರಿಶಿಷ್ಟ ಜಾತಿ, ಪಂಗಡದವರಿಗೆ ನೀಡಿರುವ ಸ್ಥಾನಗಳು ಮೀಸಲು ನಿಯಮ ಉಲ್ಲಂಘಿಸಿರುವುದು ಗೋಚರಿಸುತ್ತಿದೆ. ಪಾಲಿಕೆ ವ್ಯಾಪ್ತಿಯಲ್ಲಿ ವಾರ್ಡ್ ಪುನರ್ ವಿಂಗಡಣೆ ನಂತರದಲ್ಲಿ 82 ವಾರ್ಡ್ ಗಳು ಅಸ್ತಿತ್ವಕ್ಕೆ ಬಂದಿದ್ದು, ಮೀಸಲು ನಿಯಮದಂತೆ ಸ್ಥಾನಗಳನ್ನು ನೀಡಿಲ್ಲ. ಪರಿಶಿಷ್ಟ ಜಾತಿಗೆ 8 ಹಾಗೂ ಪರಿಶಿಷ್ಟ ಪಂಗಡಕ್ಕೆ 3 ಸ್ಥಾನಗಳನ್ನು ನೀಡಲಾಗಿದ್ದು, ಈ ಬಗ್ಗೆ ಆಕ್ಷೇಪಣೆ ಸಲ್ಲಿಕೆ ವೇಳೆ ಆಕ್ಷೇಪ ಸಲ್ಲಿಸಿದ್ದೆ. ಜತೆಗೆ ನಗರಾಭಿವೃದ್ದಿ ಕಾರ್ಯದರ್ಶಿ ಹಾಗೂ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಕೋರ್ಟ್ ಮೊರೆ ಹೋಗಿದ್ದಾಗಿ ತಿಳಿಸಿದರು.
ಹೈಕೋರ್ಟ್ ಧಾರವಾಡ ಪೀಠ ತಾವು ಸಲ್ಲಿಸಿದ ರಿಟ್ ಅರ್ಜಿ ಸ್ವೀಕರಿಸಿದ್ದು, ಶುಕ್ರವಾರ ವಿಚಾರಣೆ ನಡೆಸಿ, ಅರ್ಜಿದಾರರ ಅನಿಸಿಕೆ ಬಗ್ಗೆ ವಿವರಣೆ ನೀಡುವಂತೆ ರಾಜ್ಯ ಚುನಾವಣಾ ಆಯೋಗ, ನಗರಾಭಿವೃದ್ಧಿ ಕಾರ್ಯದರ್ಶಿ ಹಾಗೂ ಧಾರವಾಡ ಜಿಲ್ಲಾಧಿಕಾರಿಗೆ ನೋಟಿಸ್ ಜಾರಿ ಮಾಡಿದೆ. ತಮ್ಮ ಪರವಾಗಿ ಹೈಕೋರ್ಟ್ ವಕೀಲ ಅವಿನಾಶ ಬಣಕಾರ ಆವರು ವಾದ ಮಂಡಿಸಿದ್ದರು ಎಂದು ಬಸವರಾಜ ತೇರದಾಳ ಅವರು ತಿಳಿಸಿದರು.