ಹೊಸದಿಲ್ಲಿ: ಬಳ್ಳಾರಿ ಜಿಲ್ಲೆಯ ಮೀಸಲು ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆಗೆ ಅನುಮತಿ ನೀಡಿದ ಪ್ರಕರಣದಲ್ಲಿ ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಎಚ್.ಡಿ. ಕುಮಾರಸ್ವಾಮಿ ಮತ್ತು ಎನ್. ಧರಂ ಸಿಂಗ್ ವಿರುದ್ಧ ವಿಶೇಷ ತನಿಖಾ ದಳ (ಎಸ್‌ಐಟಿ) ಮೂಲಕ ತನಿಖೆ ನಡೆಸುವಂತೆ ಸುಪ್ರೀಂ ಕೋರ್ಟ್ ಆದೇಶಿಸಿದೆ. ಆದರೆ ಮತ್ತೂಬ್ಬ ಮಾಜಿ ಸಿಎಂ ಎಸ್.ಎಂ.ಕೃಷ್ಣ ವಿರುದ್ಧ ತನಿಖೆಗೆ ನೀಡಿದ್ದ ಆದೇಶಕ್ಕೆ ತಡೆಯಾಜ್ಞೆ ಮುಂದುವರಿಸಲಾಗಿದೆ. ನ್ಯಾಯಮೂರ್ತಿಗಳಾದ ಪಿ.ಸಿ.ಘೋಷ್ ಮತ್ತು ಆರ್.ಎಫ್. ನಾರೀಮನ್ ಅವರನ್ನೊಳಗೊಂಡ ಪೀಠ ಬುಧವಾರ ಈ ಆದೇಶ ನೀಡಿದೆ. ಜೆಡಿಎಸ್, ಕಾಂಗ್ರೆಸ್ ನಾಯಕರನ್ನೊಳಗೊಂಡಂತೆ ಇತರ 11 ಮಂದಿ ಹಾಲಿ ಮತ್ತು ಸೇವಾ ನಿವೃತ್ತಿ ಹೊಂದಿದ ಅಧಿಕಾರಿಗಳ ವಿರುದ್ಧವೂ ಎಸ್‌ಐಟಿ ತನಿಖೆ ನಡೆಯಲಿದೆ. 3 ತಿಂಗಳ ಒಳಗಾಗಿ ಪ್ರಕ್ರಿಯೆ ಮುಕ್ತಾಯ ಗೊಳಿಸಿ ವರದಿ ಸಲ್ಲಿಸುವಂತೆ ನ್ಯಾಯಪೀಠ ಆದೇಶ ನೀಡಿದೆ.
ವಿ. ಉಮೇಶ್, ಗಂಗಾರಾಮ್ ಬಡೇರಿಯಾ ಮತ್ತು ಎಂ.ರಾಮಪ್ಪ ಆರೋಪಕ್ಕೆ ಗುರಿಯಾಗಿರುವ ಅಧಿಕಾರಿಗಳ ಪೈಕಿ ಪ್ರಮುಖರು. ಆರೋಪಕ್ಕೆ ಗುರಿಯಾಗಿರುವ ಮಾಜಿ ಮುಖ್ಯಮಂತ್ರಿಗಳು ಮತ್ತು 11 ಮಂದಿ ಅಧಿಕಾರಿಗಳಿಗೆ ಹಿನ್ನಡೆಯಾಗುವ ಅಂಶವೇನೆಂದರೆ ಈ ಪ್ರಕರಣದ ಬಗ್ಗೆ ಹೈಕೋರ್ಟ್ ಮತ್ತು ಇತರ ಯಾವುದೇ ಕೋರ್ಟುಗಳು ಯಾವುದೇ ಆದೇಶ ನೀಡಬಾರದು. ಈ ಬಗ್ಗೆ ನ್ಯಾಯಪೀಠವೇ ಖುದ್ದಾಗಿ ಗಮನಹರಿಸಿ, ಪರಿಶೀಲಿಸಲಿದೆ ಎಂದು ಹೇಳಿದೆ. ‘ಕರ್ನಾಟಕ ಲೋಕಾಯುಕ್ತ ವರದಿ ಸಲ್ಲಿಸಿದ ಬಳಿಕ ಅದರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಈ ಬಾರಿ ಏನಾದರೂ ಕ್ರಮ ಕೈಗೊಳ್ಳಲಾಗುತ್ತದೆಯೋ ನೋಡಬೇಕಾಗಿದೆ’ ಎಂಬ ವಿಚಾರವನ್ನು ನ್ಯಾಯಪೀಠ ಖಡಕ್ ಆಗಿ ಹೇಳಿದೆ.
ಉದ್ಯಮಿ ಮತ್ತು ಹೋರಾಟಗಾರ ಅಬ್ರಹಾಂ ಟಿ.ಜೋಸೆಫ್ ಈ ಬಗ್ಗೆ ಸುಪ್ರೀಂಕೋರ್ಟ್ ಕದತಟ್ಟಿದ್ದರು. ಬಳ್ಳಾರಿ ಜಿಲ್ಲೆಯ 11,797 ಚದರ ಕಿಮೀ ವ್ಯಾಪ್ತಿಯ ಮೀಸಲು ಅರಣ್ಯ ಪ್ರದೇಶದ ಮಾನ್ಯತೆ ಸಡಿಲಿಸಿ, ಗಣಿಗಾರಿಕೆ ನಡೆಸಲು ಅನುಮತಿ ನೀಡಲಾಗಿದೆ. ಹೀಗಾಗಿ, ಮೂವರು ಮಾಜಿ ಮುಖ್ಯಮಂತ್ರಿಗಳು ಹಾಗೂ 11 ಮಂದಿ ಅಧಿಕಾರಿಗಳ ವಿರುದ್ಧ ಎಫ್ಐಆರ್ ದಾಖಲಿಸಬೇಕೆಂದು ಮನವಿ ಮಾಡಿಕೊಂಡಿದ್ದರು.
ಆರಂಭದಲ್ಲಿ ನ್ಯಾ| ಪಿ.ಸಿ. ಘೋಷ್ ಅವರನ್ನೊಳಗೊಂಡ ನ್ಯಾಯಪೀಠ ಕರ್ನಾಟಕ ಲೋಕಾಯುಕ್ತ ಮತ್ತು ಪೊಲೀಸ್ ಇಲಾಖೆ ಪ್ರಕರಣದ ಬಗ್ಗೆ ತನಿಖೆ ನಡೆಸಿ, ಸಂಬಂಧಿಸಿದ ಪ್ರಾಧಿಕಾರದ ಮುಂದೆ ವರದಿ ಸಲ್ಲಿಸಿವೆ. ಹೀಗಾಗಿ, ಮತ್ತೂಮ್ಮೆ ಅವುಗಳು ನಡೆಸಿದ ತನಿಖೆಗೆ ಸಮಾನಾಂತರವಾಗಿ ಹೇಗೆ ಆದೇಶ ನೀಡಲು ಸಾಧ್ಯವೆಂದು ಪ್ರಶ್ನಿಸಿತು. ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ವಿರುದ್ಧ ಲೋಕಾಯುಕ್ತ ವರದಿಯಲ್ಲಿಯೇ ಯಾವುದೇ ಉಲ್ಲೇಖ ಇಲ್ಲದೇ ಇದ್ದಾಗ ಅವರ ವಿರುದ್ಧ ತನಿಖೆ ಹೇಗೆ ಸಾಧ್ಯವೆಂದು ಸುಪ್ರೀಂ ಕೋರ್ಟ್ ಅರ್ಜಿದಾರರನ್ನು ಪ್ರಶ್ನಿಸಿತು.
1999ರಿಂದ 2004ರವರೆಗೆ ಅಧಿಕಾರದಲ್ಲಿದ್ದ ಎಸ್.ಎಂ. ಕೃಷ್ಣ ಕಣ್ಣಿಗೆ ಹಿರಿಯ ಅಧಿಕಾರಿಗಳು ಮಣ್ಣೆರಚಿದ್ದರು. ಅಂದರೆ ಅವರಿಗೆ ತಪ್ಪು ಮಾಹಿತಿ ನೀಡಿದ್ದರೆಂದು ಗಾಯಕ್ವಾಡ್ ನೇತೃತ್ವದ ಸಮಿತಿಯಲ್ಲಿ ಉಲ್ಲೇಖೀಸಲಾಗಿದೆ. ಹೀಗಾಗಿ ಅವರ ವಿರುದ್ಧದ ಆರೋಪಗಳನ್ನು ಒಪ್ಪಲಾಗದು ಎಂದು ನ್ಯಾಯಪೀಠ ಅಭಿಪ್ರಾಯ ಪಟ್ಟಿತು. ಈ ಸಂದರ್ಭ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪರ ವಕೀಲರು ಆಕ್ಷೇಪಿಸಿ, ಇದೊಂದು ಸಮಾನಾಂತರ ನ್ಯಾಯ ಕ್ರಮ ಎಂದರು. ಅದಕ್ಕೆ ಪ್ರತಿಕ್ರಿಯೆ ನೀಡಿದ ನ್ಯಾಯಪೀಠ ಪ್ರಕರಣವನ್ನು ನಾವು ಇತ್ಯರ್ಥಪಡಿಸುವುದಿಲ್ಲ, ನಿಮಗೇನಾದರೂ ಆಕ್ಷೇಪಗಳಿದ್ದಲ್ಲಿ ನಮಗೆ ಸಲ್ಲಿಸಿ ಎಂದು ಹೇಳಿತು. ಎಲ್ಲದಕ್ಕಿಂತ ಮೊದಲು ಸ್ಥಳೀಯ ನ್ಯಾಯಾಲಯ ಮೂವರು ಮಾಜಿ ಸಿಎಂಗಳ ವಿರುದ್ಧ ಗಣಿ ಅಕ್ರಮದ ವಿರುದ್ಧ ಎಫ್ಐಆರ್ ದಾಖಲಿಸಲು ಅನುಮತಿ ನೀಡಿತ್ತು. ಅದರ ವಿರುದ್ಧ ಮೂವರೂ ಕರ್ನಾಟಕ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರೂ ತಿರಸ್ಕೃತಗೊಂಡಿತ್ತು. ಮಾಜಿ ಮುಖ್ಯಮಂತ್ರಿ ಕೃಷ್ಣ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು. ಅವರ ವಿರುದ್ಧದ ತನಿಖೆಗೆ ತಡೆಯಾಜ್ಞೆಯೂ ಸಿಕ್ಕಿತ್ತು.
ಧರಂ ಸಿಂಗ್ ವಿರುದ್ಧದ ಆರೋಪವೇನು?
ಕಬ್ಬಿಣ ಮತ್ತು ಮ್ಯಾಂಗನೀಸ್ ಅದಿರು ಸಾಗಣೆಗೆ ತಾತ್ಕಾಲಿಕ ಸಾಗಣೆ ಪರವಾನಿಗೆ.
ಇದರಿಂದಾಗಿ ಕರ್ನಾಟಕ ಸರಕಾರದ ಬೊಕ್ಕಸಕ್ಕೆ 23.22 ಕೋಟಿ ರೂ.ನಷ್ಟ
ಕುಮಾರಸ್ವಾಮಿ ವಿರುದ್ಧ ಆರೋಪವೇನು?
ಶ್ರೀ ಸಾಯಿ ವೆಂಕಟೇಶ್ವರ ಮಿನರಲ್ಸ್‌ಗೆ ಅನುಕೂಲವಾಗುವಂತೆ 550 ಎಕರೆ ಅರಣ್ಯ ಪ್ರದೇಶದಲ್ಲಿ ಮೈನಿಂಗ್ ಲೀಸ್ ನೀಡಿಕೆ
ಜಂತಕಲ್ ಮೈನಿಂಗ್ ಕಂಪೆನಿಗೆ ಸಂಬಂಧಿಸಿದಂತೆ ಅವ್ಯವಹಾರ ನಡೆಸಿದ್ದು
ಮಾಜಿ ಮುಖ್ಯಮಂತ್ರಿಗಳು
ಎಚ್.ಡಿ.ಕುಮಾರಸ್ವಾಮಿ, ಎನ್.ಧರಂ ಸಿಂಗ್, ಎಸ್.ಎಂ.ಕೃಷ್ಣ
ಹಿರಿಯ ಅಧಿಕಾರಿಗಳು
ಗಂಗಾರಾಮ್ ಬಡೇರಿಯಾ, ಬಸಪ್ಪ ರೆಡ್ಡಿ, ಐ.ಆರ್.ಪೆರುಮಾಳ್, ಜೀಜಾ ಹರಿಸಿಂಗ್, ಮಹೇಂದ್ರ ಜೈನ್, ಕೆ.ಎಸ್.ಮಂಜುನಾಥ್, ರಾಮಪ್ಪ, ಶಂಕರ ಲಿಂಗಯ್ಯ, ವಿ.ಉಮೇಶ್.