ಮೈಸೂರು: ಸಾಮಾಜಿಕ ಮತ್ತು ಆರ್ಥಿಕ ಸಮಾನತೆಯನ್ನು ಮೂಲ ಹಕ್ಕಾಗಿಸಲು ಕೇಂದ್ರ ಹಾಗೂ ರಾಜ್ಯಸರ್ಕಾರಗಳು ಕೂಡಲೇ ಕ್ರಮವಹಿಸುವ ಜತೆಗೆ ಪರಿಶಿಷ್ಟಜಾತಿ- ಪರಿಶಿಷ್ಟ ವರ್ಗಗಳ ಜನಸಂಖ್ಯೆಗೆ ಅನುಗುಣವಾಗಿ ಬಜೆಟ್‌ನಲ್ಲಿ ಶೇಕಡ 25ರಷ್ಟು ಹಣವನ್ನು ಮೀಸಲಿಡಬೇಕು ಎಂದು ದಸಂಸ ಕಾರ್ಯಕರ್ತರು ಒತ್ತಾಯಿಸಿದರು.
ಸೋಮವಾರ ಜಿಲ್ಲಾಧಿಕಾರಿ ಕಚೇರಿ ಬಳಿ ಧರಣಿ ನಡೆಸಿದ ದಸಂಸ ಕಾರ್ಯಕರ್ತರು, ಶೋಷಿತ ಸಮುದಾಯದ ಅಭ್ಯುದಯವನ್ನು ಮರೆತು ಕೇಂದ್ರ ಸರ್ಕಾರ ದಲಿತ, ರೈತ ವಿರೋಧಿ ಬಜೆಟ್ ಮಂಡಿಸಿದೆ ಎಂದು ದೂರಿದರು.
ರೈತರ ಕೃಷಿ ಉತ್ಪನ್ನಗಳಿಗೆ ವೈಜಾnನಿಕ ಬೆಲೆ ನೀಡಬೇಕು. ಬರ ಪರಿಸ್ಥಿತಿಯಿಂದ ಕಂಗಾಲಾಗಿರುವ ರೈತರ ಆತ್ಮಹತ್ಯೆ ತಡೆಯಲು ರೈತರ ಎಲ್ಲಾ ಸಾಲ ಮನ್ನಾ ಮಾಡಬೇಕು. ಪರಿಶಿಷ್ಟ ಜಾತಿ- ವರ್ಗದ ಜನರಿಗೆ ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮದ ಶಿಫಾರಸಿನಂತೆ ಸಹಕಾರ ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ನೀಡಿರುವ ಎಲ್ಲಾ ಸಾಲವನ್ನು ವನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಬಗರ್‌ಹುಕುಂ ಸಾಗುವಳಿ ಸಕ್ರಮಗೊಳಿಸುವ ಭೂ ಸುಧಾರಣಾ ಕಾಯ್ದೆ ಮತ್ತು ಭೂ ಮಂಜೂರಾತಿ ನಿಯಮಗಳ 1969ರ ಕಾಲಂ 5(ಎ) ರಂತೆ ಮೀಸಲಾತಿ ನೀತಿಯನ್ನು ಅನುಸರಿಸಿ ಸಕ್ರಮಗೊಳಿಸಲು ಎಲ್ಲಾ ತಾಲೂಕಿನ ಅಕ್ರಮ-ಸಕ್ರಮ ಸಮಿತಿ ಈ ಕೂಡಲೇ ನಿರ್ದೇಶನ ನೀಡಬೇಕು ಎಂದು ಧರಣಿ ನಿರತರು ಒತ್ತಾಯಿಸಿದರು.
ಪರಿಶಿಷ್ಟ ಜಾತಿಗಳ ಮೀಸಲಾತಿ ವರ್ಗೀಕರಣಕ್ಕಾಗಿ ನ್ಯಾ.ಎ.ಜೆ.ಸದಾಶಿವ ಆಯೋಗದ ವರದಿಯನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು. ದಸಂಸ ಜಿಲ್ಲಾ ಸಂಚಾಲಕ ಸೋಸಲೆ ರಾಜಶೇಖರಮೂರ್ತಿ, ಕೆ.ರಾಮಯ್ಯ, ಮಂಜು, ಬನ್ನಳ್ಳಿ ಚಂದ್ರಶೇಖರ್, ಸ್ವಾಮಿ, ಸೋಮಶೇಖರ್, ಲೀಲಾವತಿ, ಜವರಾಯಿ, ದೇವರಾಜ್, ಮಹದೇವಮ್ಮ ಮೊದಲಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.