Advertisement

Mangaluru: ದ್ವಿಮುಖ ಸಂಚಾರ ನಿರ್ಧಾರಕ್ಕೆ ಅಡೆತಡೆ

02:46 PM Nov 27, 2024 | Team Udayavani |

ಮಹಾನಗರ: ನಗರದ ಕ್ಲಾಕ್‌ಟವರ್‌ನಿಂದ ಎ.ಬಿ. ಶೆಟ್ಟಿ ವೃತ್ತ-ಹ್ಯಾಮಿಲ್ಟನ್‌ ವೃತ್ತ-ರಾವ್‌ ಆ್ಯಂಡ್‌ ರಾವ್‌ ವೃತ್ತದಿಂದ ಮತ್ತೆ ಕ್ಲಾಕ್‌ ಟವರ್‌ವರೆಗಿನ ಏಕಮುಖ ಸಂಚಾರ ವ್ಯವಸ್ಥೆ (ಲೂಪ್‌ ರಸ್ತೆ) ಯನ್ನು ಮತ್ತೆ ದ್ವಿಮುಖ ಸಂಚಾರ ಮಾಡುವ ನಿರ್ಧಾರವನ್ನು ಹಿಂದೆ ಕೈಗೊಳ್ಳಲಾಗಿದ್ದರೂ ಇದಕ್ಕೆ ತಾಂತ್ರಿಕ ಸಮಸ್ಯೆ, ಸಮನ್ವಯ ಸಮಸ್ಯೆಗಳು ಅಡ್ಡಿಯಾಗಿವೆ.

Advertisement

ಮಂಗಳೂರಿನ ರೈಲು ನಿಲ್ದಾಣ ಭಾಗದಿಂದ ಟೌನ್‌ ಹಾಲ್‌ ಕಡೆಗೆ ಬರುವವರು, ಆರ್‌ಟಿಒ ಕಚೇರಿಗೆ ಹೋದವರು ಮರಳಿ ಕ್ಲಾಕ್‌ ಟವರ್‌ಗೆ ಬರಬೇಕು ಎಂದರೆ ಸ್ಟೇಟ್‌ ಬ್ಯಾಂಕ್‌ನ ಹ್ಯಾಮಿಲ್ಟನ್‌ ಸರ್ಕಲ್‌ಗೆ ಸುತ್ತು ಹೊಡೆದೇ ಬರಬೇಕು. ಯಾಕೆಂದರೆ, ಕ್ಲಾಕ್‌ ಟವರ್‌ನಿಂದ ಎ.ಬಿ. ಶೆಟ್ಟಿ ಸರ್ಕಲ್‌ ಮೂಲಕ ಸಾಗಿ ಸ್ಟೇಟ್‌ ಬ್ಯಾಂಕ್‌ ವರೆಗೆ ಎಲ್ಲರೂ ದ್ವಿಮುಖ ಸಂಚಾರಕ್ಕೆ ಅವಕಾಶವಿಲ್ಲ.

ಸಾರ್ವಜನಿಕರಿಗೆ ಸಮಸ್ಯೆ ಉಂಟಾಗುವ ನಿಟ್ಟಿನಲ್ಲಿ ಈ ರಸ್ತೆಯಲ್ಲಿ ದ್ವಿಮುಖ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಸಾರ್ವಜನಿಕ ವಲಯದಿಂದ ಮನವಿ ಮಾಡಲಾಗಿತ್ತು. ಈ ಕುರಿತು ಪೊಲೀಸ್‌ ಕಮಿಷನರ್‌ ಅನುಪಮ್‌ ಅಗರ್‌ವಾಲ್‌ ಅವರ ಅಧ್ಯಕ್ಷತೆಯಲ್ಲಿ ಕೆಲ ವಾರಗಳ ಹಿಂದೆ ನಡೆದ ಸಭೆಯಲ್ಲಿ ನಿರ್ಧರಿಸಲಾಗಿತ್ತು. ದ್ವಿಮುಖ ಸಂಚಾರಕ್ಕೆ ಸಂಬಂಧಪಟ್ಟಂತೆ ಪೊಲೀಸ್‌ ಇಲಾಖೆಯಿಂದ ಸ್ಮಾರ್ಟ್‌ಸಿಟಿಗೆ ಪತ್ರ ಬರೆಯಲಾಗಿತ್ತು. ಆದರೆ ತಾಂತ್ರಿಕ ಸಮಸ್ಯೆ ಮುಂದೊಡ್ಡಿ ಇದಕ್ಕೆ ಅವಕಾಶ ನೀಡಲಾಗಿಲ್ಲ.

ದ್ವಿಮುಖ ಸಂಚಾರಕ್ಕೇನು ಅಡೆತಡೆ?
-ಏಕಮುಖ ಸಂಚಾರ ವ್ಯವಸ್ಥೆಗೆಂದು ಈಗಾಗಲೇ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ ಈ ರಸ್ತೆಯನ್ನು ಅಭಿವೃದ್ಧಿಪಡಿಸಲಾಗಿತ್ತು.
-ಹಲವಾರು ಮಾರ್ಪಾಡು ಮಾಡಲಾಗಿದ್ದು, ಮತ್ತೆ ದ್ವಿಮುಖ ಸಂಚಾರ ಮಾಡಬೇಕಾದರೆ ಮತ್ತೆ ಹಲವಾರು ಕಾಮಗಾರಿ ನಡೆಸಬೇಕು.
-ಈಗಾಗಲೇ ಕ್ಲಾಕ್‌ಟವರ್‌ ಬಳಿ ಇರುವ ಫ್ರೀ ಲೆಫ್ಟ್ ನಿರ್ಬಂಧಿಸಬೇಕು. ಕ್ಲಾಕ್‌ಟವರ್‌ನ ಅಂಚು ಮತ್ತಷ್ಟು ಕಿರಿದು ಮಾಡಬೇಕು.
-ಈಗಾಗಲೇ ಎ.ಬಿ. ಶೆಟ್ಟಿ ವೃತ್ತ, ರಾವ್‌ ಆ್ಯಂಡ್‌ ರಾವ್‌ ವೃತ್ತ ಬಳಿ ನಿರ್ಮಿಸಿದ ಟ್ರಾಫಿಕ್‌ ಐಲ್ಯಾಂಡ್‌ ಕೆಡಹಿ ಸಣ್ಣ ವೃತ್ತ ನಿರ್ಮಾಣ ಮಾಡಬೇಕು.
-ಹ್ಯಾಮಿಲ್ಟನ್‌ ವೃತ್ತ ಭಾಗದಲ್ಲಿಯೂ ಬದಲಾವಣೆ ಮಾಡಬೇಕು.
-ರಸ್ತೆಯುದ್ದಕ್ಕೂ ಡಿವೈಡರ್‌, ಅಲ್ಲಲ್ಲಿ ಹಂಪ್ಸ್‌ ಅವಡಿಸಬೇಕು.
-ಇಷ್ಟೆಲ್ಲಾ ಕಾಮಗಾರಿ ನಡೆಸಿದರೆ ಬಳಿಕ ಪ್ರಾಯೋಗಿಕವಾಗಿ ಈ ಬದಲಾವಣೆ ತಕ್ಕುದಲ್ಲ ಎಂದಾದರೆ ಮತ್ತೆ ಅದನ್ನು ಕೆಡವಬೇಕು.

2021ಕ್ಕಿಂತ ಮೊದಲು ದ್ವಿಮುಖ ಸಂಚಾರ
2021ಕ್ಕಿಂತ ಮೊದಲು ಕ್ಲಾಕ್‌ ಟವರ್‌ನಿಂದ ಎ.ಬಿ. ಶೆಟ್ಟಿ ವೃತ್ತದ ಮೂಲಕ ಹ್ಯಾಮಿಲ್ಟನ್‌ ಸರ್ಕಲ್‌ವರೆಗೆ ರಸ್ತೆ ವಿಭಾಜಕವಿದ್ದು, ಎರಡೂ ಬದಿಯಿಂದ ವಾಹನ ಸಂಚಾರಕ್ಕೆ ಅವಕಾಶವಿತ್ತು. ಹ್ಯಾಮಿಲ್ಟನ್‌ ಸರ್ಕಲ್‌ನಿಂದ ರಾವ್‌ ಆ್ಯಂಡ್‌ ರಾವ್‌ ಸರ್ಕಲ್‌ವರೆಗೆ ಸಿಟಿ ಬಸ್ಸು ತಂಗುದಾಣ ಇದ್ದುದರಿಂದ ಆ ರಸ್ತೆ ಸಂಚಾರ ಏಕಮುಖವಾಗಿತ್ತು. ಅದೇ ರೀತಿ ರಾವ್‌ ಆಂಡ್‌ ರಾವ್‌- ಕ್ಲಾಕ್‌ ಟವರ್‌ ರಸ್ತೆ ಸಂಚಾರವೂ ಏಕಮುಖವಾಗಿತ್ತು. ಆದರೆ 2021 ಆಗಸ್ಟ್‌ ತಿಂಗಳಿನಲ್ಲಿ ನಡೆದ ಪಾಲಿಕೆಯ ಸಭೆಯಲ್ಲಿ ಕ್ಲಾಕ್‌ಟವರ್‌- ಎಬಿ ಶೆಟ್ಟಿ ವೃತ್ತ- ಹ್ಯಾಮಿಲ್ಟನ್‌ ಸರ್ಕಲ್‌- ಕ್ಲಾಕ್‌ ಟವರ್‌ನ ಇಡೀ ‘ವರ್ತುಲ’ ರಸ್ತೆಯನ್ನು ಏಕಮುಖ ಸಂಚಾರ ರಸ್ತೆಯಾಗಿ ನಿರ್ಣಯ ಕೈಗೊಳ್ಳಲಾಯಿತು. ಅದರ ಆಧಾರದ ಮೇಲೆ ಸೆಪ್ಟೆಂಬರ್‌ನಲ್ಲಿ ಆಗಿನ ನಗರ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ್‌ ಈ ಕುರಿತು ಆದೇಶ ಹೊರಡಿಸಿದ್ದರು.

Advertisement

ಈ ರಸ್ತೆ ಪಾಲಿಕೆಗೆ ಹಸ್ತಾಂತರ
ಕ್ಲಾಕ್‌ಟವರ್‌ ಬಳಿಯ ವರ್ತುಲ ರಸ್ತೆಯನ್ನು ದ್ವಿಮುಖ ಸಂಚಾರಕ್ಕೆ ಅನುವು ಮಾಡಬೇಕು ಎಂದು ಪೊಲೀಸ್‌ ಇಲಾಖೆಯಿಂದ ಸ್ಮಾರ್ಟ್‌ಸಿಟಿಗೆ ಪತ್ರ ಬರೆದಿದೆ. ಈ ರಸ್ತೆ ಸದ್ಯ ಪಾಲಿಕೆಗೆ ಹಸ್ತಾಂತರಗೊಂಡಿದ್ದು, ಅವರೇ ಈ ಕಾಮಗಾರಿ ನಿರ್ವಹಣೆ ಮಾಡಬೇಕು ಎಂದು ಮರುಪತ್ರ ಬರೆಯಲಾಗಿದೆ.
– ರಾಜು ಕೆ., ಸ್ಮಾರ್ಟ್‌ಸಿಟಿ ವ್ಯವಸ್ಥಾಪಕ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next