ಬೆಂಗಳೂರು: ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಜ.19 ಮತ್ತು 20ರಂದು ಬೆಂಗಳೂರಿನ ಅತಿ ದೊಡ್ಡ ಹೋಮ್ ಲೋನ್ ಉತ್ಸವ ಆಯೋಜಿಸಿದೆ. ಸೇಂಟ್ ಮಾರ್ಕ್ ರಸ್ತೆಯ ಎಸ್‌ಬಿಐ ಸ್ಥಳೀಯ ಕೇಂದ್ರ ಕಚೇರಿ ಆವರಣದಲ್ಲಿ ನಡೆಯಲಿರುವ ಎರಡು ದಿನಗಳ ಸಾಲ ಮೇಳವು ಹೆಸರಾಂತ ಬಿಲ್ಡರ್‌ಗಳಾದ ಜಿ.ಎಂ. ಇನ್ಫಿನೈಟ್, ಕೆಎಸ್‌ಆರ್ ಪ್ರಾಪರ್ಟೀಸ್, ಬ್ರಿಗೇಡ್ ಎಂಟರ್‌ಪ್ರೈಸಸ್ ಪ್ರಾಯೋಜಕತ್ವದಲ್ಲಿ ನಡೆಯಲಿದೆ.
ಎಸ್‌ಬಿಐ ಸ್ಥಳೀಯ ಕೇಂದ್ರ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಬ್ಯಾಂಕಿನ ಮುಖ್ಯ ಮಹಾಪ್ರಬಂಧಕ ಅಭಿಜಿತ್ ಮಜುಂದಾರ್, ಎಸ್‌ಬಿಐ ಬೆಂಗಳೂರು ವೃತ್ತ ಭಾರತದಲ್ಲೇ ಅತಿ ವೇಗವಾಗಿ ಬೆಳೆಯುತ್ತಿರುವ ವೃತ್ತ ಎನಿಸಿದೆ. ನಾನು ಅಧಿಕಾರ ವಹಿಸಿಕೊಂಡ ನಂತರ ನಡೆಯುತ್ತಿರುವ ಎರಡನೇ ಗೃಹ ಸಾಲ ಉತ್ಸವ ಇದಾಗಿದೆ ಎಂದರು.
ಗೃಹ ಸಾಲ ಉತ್ಸವದ ವಿಶೇಷ: ಬೆಳಗ್ಗೆ 10ರಿಂದ ಸಂಜೆ 7.30 ರವರೆಗೆ ನಡೆಯುವ ಉತ್ಸವದಲ್ಲಿ ಗ್ರಾಹಕರಿಗೆ ಸ್ಥಳದಲ್ಲೇ ಸಾಲ ಮಂಜೂರು ಮಾಡಲಾಗುವುದು. ಸಾಲಕ್ಕೆ ನೋಂದಣಿ ಮಾಡಿಸಿಕೊಳ್ಳುವವರಿಗೆ ಬಡ್ಡಿ ದರದಲ್ಲಿ ರಿಯಾಯಿತಿ, ನಿರ್ವಹಣಾ ಶುಲ್ಕ, ಮೌಲ್ಯ ಮಾಪನ ವೆಚ್ಚಗಳ ಮನ್ನಾ ಮಾಡಲಾಗುವುದು. ಒಂದೇ ಸೂರಿನಡಿ ಪ್ರಮುಖ ಬಿಲ್ಡರ್‌ಗಳು ಹಾಗೂ ಆಟೋಮೊಬೈಲ್ ವಿತರಕರು ದೊರೆಯಲಿದ್ದಾರೆ ಎಂದು ಹೇಳಿದರು.
ಜಿಎಂ ಇನ್ಫಿನೈಟ್ ಎಂ.ಡಿ ಗುಲಾಂ ಮುಸ್ತಾಫ ಅವರು ಮಾತನಾಡಿ, ಎಸ್‌ಬಿಐ ಮತ್ತು ನಮ್ಮ ಸಂಬಂಧ ವಿಶಿಷ್ಟವಾಗಿದೆ. ನಮ್ಮಲ್ಲಿ ಮನೆ ಖರೀದಿಸುವ ಗ್ರಾಹಕರಿಗೆ ಒಂದೇ ದಿನದಲ್ಲಿ ಸಾಲ ಮಂಜೂರು ಮಾಡುವ ಎಸ್‌ಬಿಐ, ನಮ್ಮ ಕಂಪನಿಯ ಬ್ಯಾಂಕ್ ಇದ್ದಂತಿದೆ ಎಂದರು.
ಜಿಎಸ್‌ಟಿ ಬಗೆಗಿನ ಪ್ರಶ್ನೆಗೆ ಅವರು ಉತ್ತರಿಸಿ ಜಿಎಸ್‌ಟಿಯಿಂದ ಬಿಲ್ಡರ್‌ಗಳಿಗೆ ಬಹಳ ತೊಂದರೆಯಾಗಿದೆ. ಆರು ಸಾವಿರ ಚದರ ಅಡಿ ಜಾಗದ ಮನೆ ಖರೀದಿಸುವ ಗ್ರಾಹಕ, ಪ್ರತಿ ಚ.ಅಡಿಗೆ 600 ರೂ. ಜಿಎಸ್‌ಟಿ ಕಟ್ಟಬೇಕಾಗಿದೆ ಎಂದರು. ಬ್ರಿಗೇಡ್ ಎಂಟರ್‌ಪ್ರೈಸಸ್‌ನ ಹಿರಿಯ ಉಪಾಧ್ಯಕ್ಷ ವಿಶ್ವಪ್ರತಾಪ್, ಪ್ರಸ್ಟೀಜ್ ಗ್ರೂಪ್‌ನ ನಂದನ್, ಎಸ್‌ಬಿಐನ ಜಿ.ಎಂಗಳಾದ ವಿನ್ಸೆಂಟ್, ಮುರಳಿಧರನ್ ಇತರರು ಉಪಸ್ಥಿತರಿದ್ದರು.