Advertisement

ದುಂದು ವೆಚ್ಚದ ಮದುವೆಗಳಿಗೆ ಕಡಿವಾಣವಿರಲಿ

07:22 PM Mar 31, 2017 | Karthik A |

ಅದ್ದೂರಿ ಮದುವೆಗಳ ನಿಜವಾದ ಬಲಿಪಶುಗಳು ಬಡವರು ಮತ್ತು ಮಧ್ಯಮ ವರ್ಗದವರು. ಸಾಮಾಜಿಕ ಪ್ರತಿಷ್ಠೆಯ ಅಲಿಖೀತ ನಿಯಮ ಬಿಸಿತುಪ್ಪವಾಗಿ ಪರಿಣಮಿಸಿ ಅವರು ಪರಿತಪಿಸುತ್ತಾರೆ. 

Advertisement

ಇತ್ತೀಚೆಗಿನ ವರ್ಷಗಳಲ್ಲಿ ಜಮ್ಮು ಕಾಶ್ಮೀರದ ಹೆಸರು ಕೇಳಿದ ತತ್‌ಕ್ಷಣ ಕಣ್ಣಿನ ಮುಂದೆ ಕಾಣುವುದು ಉಗ್ರಗಾಮಿಗಳ ಅಟ್ಟಹಾಸ, ರಕ್ತಪಾತ, ಭದ್ರತಾ ಪಡೆಗಳ ಮೇಲೆ ಕಲ್ಲು ತೂರಾಟ, ಪ್ರತ್ಯೇಕತಾವಾದಿಗಳ ಕ್ರೌರ್ಯ, ಹಿಂಸೆ, ಬಂದ್‌ ಮತ್ತು ಗಡಿಯಾಚೆಯಿಂದ ನುಸುಳಿಬಂದವರ ಹಿಂಸಾ ಚಟುವಟಿಕೆಗಳು. ಇವೆಲ್ಲವುಗಳನ್ನೂ ಮರೆಸಿ ಮತ್ತು ಮೀರಿಸಿ, ಜಮ್ಮು ಮತ್ತು ಕಾಶ್ಮೀರ ರಾಜ್ಯ ಇಡೀ ದೇಶದ ಗಮನ ಸೆಳೆದಿದೆ. ದೇಶವೇ ಹಿಂದೇಟು ಹಾಕುತ್ತಿರುವಾಗ, ಚಿಂತನ -ಮಂಥನ ಹೆಸರಿನಲ್ಲಿ ಮೀನ ಮೇಷ ಎಣಿಸುತ್ತಿರುವಾಗ, ದುಂದು ವೆಚ್ಚದ ಮದುವೆ ಮತ್ತು ಇತರ ಸಮಾರಂಭಗಳಿಗೆ ಕಡಿವಾಣ ಹಾಕುವ ಅಧಿಸೂಚನೆ ಹೊರಡಿಸಿ, ಇಡೀ ದೇಶಕ್ಕೆ ಮಾದರಿಯಾಗಿ, ಉಳಿದ ರಾಜ್ಯಗಳು ಮತ್ತು ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಶೀಘ್ರವಾಗಿ ದಿಟ್ಟ ಹೆಜ್ಜೆ ಇಡುವಂತೆ ಪ್ರೇರೇಪಿಸಿದೆ. ಈ ಅಧಿಸೂಚನೆ ಮುಂದಿನ ದಿನಗಳಲ್ಲಿ ಯಾವ ರೂಪ ಪಡೆಯುತ್ತದೆ, ಜನರು ಹೇಗೆ ಸ್ಪಂದಿಸುತ್ತಾರೆ ಮತ್ತು ನ್ಯಾಯಾಲಯದ ಪರೀಕ್ಷೆಯಲ್ಲಿ ತೇರ್ಗಡೆಯಾಗುತ್ತದೋ ಹೇಗೆ ಎನ್ನುವುದು ಬೇರೆ ಮಾತು. ಆದರೆ, ಈ ಸಾಮಾಜಿಕ ಪಿಡುಗನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಜಮ್ಮು ಮತ್ತು ಕಾಶ್ಮೀರ ಸರಕಾರದ ಮೊದಲ ಹೆಜ್ಜೆ ಶ್ಲಾಘನಿಯ, ಸ್ತುತ್ಯರ್ಹ ಮತ್ತು ಅನುಕರಣೀಯ. ಸಾಮಾಜಿಕ ಧುರೀಣರು, ಪ್ರಜ್ಞಾವಂತರು ಎಲ್ಲೆಡೆ ಸಮಾನತೆ ತತ್ವಕ್ಕೆ ಮುನ್ನುಡಿ ಬರೆಯುವ ಈ ಕ್ರಮವನ್ನು ಮುಕ್ತ ಕಂಠದಿಂದ ಪ್ರಶಂಸಿಸಿದ್ದಾರೆ.

ಈ ಅಧಿಸೂಚನೆಯ ಪ್ರಕಾರ, ಮಗನ ಮದುವೆಯಾದರೆ 400 ಮತ್ತು ಮಗಳ ಮದುವೆಯಾದರೆ 500 ಜನರನ್ನು ಅಮಂತ್ರಿಸಲು ಅವಕಾಶ ಇದೆ. ಮಗ ಮತ್ತು ಮಗಳ ಮಧ್ಯದ ಈ ವ್ಯತ್ಯಾಸ ಬಗೆಗೆ ಮುಂದಿನ ದಿನಗಳಲ್ಲಿ ವಿಸ್ತೃತ ಮಾಹಿತಿ ದೊರಕಬಹುದು. ನಿಶ್ಚಿತಾರ್ಥದಂಥ ಸಣ್ಣ ಸಮಾರಂಭ ಮತ್ತು ಕಾರ್ಯಕ್ರಮಗಳಿಗೆ 100 ಅತಿಥಿಗಳ ಮಿತಿಯನ್ನು ವಿಧಿಸಲಾಗಿದೆ. ಯಾವುದೇ ಖಾಸಗಿ ಅಥವಾ ಸರಕಾರಿ ಸಮಾರಂಭಗಳು ಇರಲಿ, ಅಲ್ಲಿ ಧ್ವನಿವರ್ಧಕ ಬಳಕೆ ಮತ್ತು ಪಟಾಕಿ ಸಿಡಿಸುವುದನ್ನು ನಿಷೇಧಿಸಲಾಗಿದೆ. ಆಮಂತ್ರಣ ಪತ್ರಿಕೆಗಳೊಂದಿಗೆ ಒಣಹಣ್ಣುಗಳನ್ನು ನೀಡುವಂತಿಲ್ಲ ಮತ್ತು ಏಳಕ್ಕಿಂತ ಹೆಚ್ಚು ತಿನಿಸುಗಳನ್ನು ವ್ಯವಸ್ಥೆಗೊಳಿಸುವಂತಿಲ್ಲ. 

ಶ್ಲಾಘ್ಯ ಅಧಿಸೂಚನೆ
ವಿಚಿತ್ರವೆಂದರೆ, ಲೋಕಸಭೆಯಲ್ಲೂ ಕಾಂಗ್ರೆಸ್‌ ಸಂಸದೆ ರಂಜೀತ್‌ ರಂಜನ್‌ ಅವರು ಈ ನಿಟ್ಟಿನಲ್ಲಿ ಖಾಸಗಿ ಮಸೂದೆ ಮಂಡಿಸಿದ್ದರು. ಅವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, 5 ಲಕ್ಷ ರೂ.ಗಿಂತ ಹೆಚ್ಚು ಖರ್ಚು ಮಾಡಿ ಮದುವೆ ಮಾಡುವವರು, ಆ ಮದುವೆಯ ಶೇ. 10ರಷ್ಟು ಹಣವನ್ನು ಬಡ ಯುವತಿಯರ ಮದುವೆಗೆ ಸಹಾಯವಾಗಿ ನೀಡಬೇಕು ಎಂಬುದನ್ನು ಕಡ್ಡಾಯ ಮಾಡುವಂತೆ ಬಲವಾಗಿ ಆಗ್ರಹಿಸಿದ್ದರು. ಈ ಮಸೂದೆ ಸರಕಾರದ ಗಮನ ಸೆಳೆಯುವ ಮೊದಲು, ಸಂಸದರು ಈ ಬಗೆಗೆ ಚರ್ಚಿಸುವ ಮೊದಲು, ವಿಷಯ ಸಾರ್ವಜನಿಕ ಚರ್ಚೆಗೆ ಆಹಾರ ಆಗುವ ಮೊದಲು, ಮಾಧ್ಯಮಗಳು ಈ ವಿಷಯವನ್ನು ತಮ್ಮ ಚಿಂತನ -ಮಂಥನದಲ್ಲಿ, ಬಿಗ್‌ ಫೈಟ್‌ನಲ್ಲಿ ಅಳವಡಿಸುವ ಮೊದಲು, ಜಮ್ಮು ಮತ್ತು ಕಾಶ್ಮೀರ ರಾಜ್ಯ ಎಲ್ಲರನ್ನೂ ಹಿಂದೆ ಹಾಕಿ ಜನಸಾಮಾನ್ಯರ ಬಗೆಗೆ ತನಗಿರುವ ಸಾಮಾಜಿಕ ಕಾಳಜಿಯ ಆಳವನ್ನು ಎತ್ತಿ ತೋರಿಸಿದೆ. ಈ ಅಧಿಸೂಚನೆ ಇದೇ ರೀತಿಯಲ್ಲಿ ಜಾರಿಯಾಗುತ್ತದೆ ಎಂದು ಹೇಳುವುದು ಕಷ್ಟ. ಮುಂದಿನ ದಿನಗಳಲ್ಲಿ ಅದಕ್ಕೆ ಕೆಲವು ತಿದ್ದುಪಡಿಗಳಾಗಬಹುದು, ಅದು ಮಾರ್ಪಾಡಾಗಬಹುದು ಕೂಡ. ಅದರೆ, ಆಡಂಬರದ ಮತ್ತು ದುಂದು ವೆಚ್ಚದ ಮದುವೆಗಳಿಗೆ ಕಡಿವಾಣ ಹಾಕುವ ಮೂಲ ಉದ್ದೇಶ ಸ್ವಲ್ಪ ವಿಳಂಬವಾದರೂ ಗುರಿ ಮುಟ್ಟುವ ಆಶಯವನ್ನು ಕಾಣಬಹುದು. ಆದರೆ, ಸ್ವಯಂ ನಮ್ಮ ಜನಪ್ರತಿನಿಧಿಗಳು ಮತ್ತು ಅವರನ್ನು ಆ ಸ್ಥಾನಕ್ಕೆ ಏರಲು ಸಹಾಯ ಮಾಡಿದ ಅವರ ಒಡ್ಡೋಲಗಗಳು ಈ ಆಡಂಬರ ಮದುವೆಗಳ ಚಂದಾದಾರರಾಗಿರುವಾಗ ದೇಶಾಧಿದ್ಯಂತ ಇಂಥ ಕಾನೂನು ಜಾರಿಗೆ ಅವರು ಅಡೆತಡೆ ಒಡ್ಡದೆ ಸುಮ್ಮನಿರಬಹುದೇ ಎನ್ನುವುದು ಪ್ರಮುಖ ಪ್ರಶ್ನೆ.

ಮದುವೆ ತೀರಾ ವೈಯಕ್ತಿಕ ವಿಚಾರ, ತಮ್ಮ ಮಕ್ಕಳ ಮದುವೆಯನ್ನು ತಮಗೆ ಬೇಕಾದಂತೆ, ತಮ್ಮ ಹಣಕಾಸು ಸಾಮರ್ಥ್ಯಕ್ಕೆ ತಕ್ಕಂತೆ ಮಾಡುವ ಸ್ವಾತಂತ್ರ್ಯ ಇದೆ, ಇದನ್ನು ಪ್ರಶ್ನಿಸಲಾಗದು ಎನ್ನುವ ಪ್ರತಿವಾದ ಸಮಾಜದ ಕೆಲವು ವರ್ಗಗಳಿಂದ ಮತ್ತು ಮುಖ್ಯವಾಗಿ ಆರ್ಥಿಕವಾಗಿ ಸ್ಥಿತಿವಂತರಾದವರಿಂದ, ಸೆಲೆಬ್ರಿಟಿಗಳು ಎಂದು ಕರೆಸಿಕೊಳ್ಳುವವರಿಂದ, ಉದ್ಯಮಿಗಳಿಂದ, ರಾಜಕಾರಣಿಗಳಿಂದ ಮತ್ತು ಕೆಲವು ಜನಪ್ರತಿನಿಧಿಗಳಿಂದ ವ್ಯಕ್ತವಾಗುವುದನ್ನು ತಳ್ಳಿಹಾಕಲಾಗದು. ತಾವು ಗಳಿಸಿದ್ದನ್ನು ತಮ್ಮ ಇಷ್ಟದಂತೆ ಖರ್ಚು ಮಾಡಲು ಸಾಧ್ಯವಿಲ್ಲದಿದ್ದರೆ, ತಾವು ಗಳಿಸುವುದಾದರೂ ಏಕೆ ಎಂದು ಕೇಳುವ ಇವರ ಪ್ರಶ್ನೆಯಲ್ಲಿ ತಥ್ಯವಿಲ್ಲದಿಲ್ಲ. ಮಕ್ಕಳ ಮದುವೆಗೂ ಖರ್ಚು ಮಾಡದಿದ್ದರೆ ಇನ್ನು ಯಾವುದಕ್ಕೆ ಖರ್ಚು ಮಾಡಲು ಈ ದುಡಿಮೆ ಎನ್ನುವ ಅವರ ತರ್ಕ ಹಲವರನ್ನು ಸೆಳೆಯದಿರದು. ದುಂದು ವೆಚ್ಚ ಮತ್ತು ಆಡಂಬರ ಮತ್ತು ವೈಭೋಗಗಳ ಮೂಲಕ ತಮ್ಮತನವನ್ನು, ತಮ್ಮ ಇರುವಿಕೆಯನ್ನು, ತಮ್ಮ ಸ್ಥಾನಮಾನವನ್ನು, ಅಂತಸ್ತನ್ನು ಹೊರಜಗತ್ತಿಗೆ ಸಾದರಪಡಿಸುವ, ತೋರ್ಪಡಿಸುವ ಮತ್ತು ತಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳುವ ಇಂಥ ಅವಕಾಶವನ್ನು ಅವರು ಬಿಟ್ಟು ಕೊಡಬಹುದೇ?

Advertisement

ಸಾಮಾಜಿಕ ಪ್ರತಿಷ್ಠೆಯ ಪ್ರಶ್ನೆ
ಮದುವೆಯ ಮುಖ್ಯ ಧಾರ್ಮಿಕ ಪ್ರಕ್ರಿಯೆಗಳು ತಮ್ಮ ಪಾರಂಪರಿಕ ಮೌಲ್ಯವನ್ನು ಕಳೆದುಕೊಂಡು, ಅವುಗಳ ಸ್ಥಾನವನ್ನು ನಿಶ್ಚಿತಾರ್ಥ, ಬಾರಾತ್‌, ಮೆಹಂದಿ, ಸಂಗೀತ, ವಿಡಿಯೋ ಶೂಟಿಂಗ್‌, ಭಾರೀ ಊಟಗಳು, ಪಟಾಕಿ ಸುಡುವುದು ಮತ್ತು ಆರತಕ್ಷತೆಗಳು ಅಕ್ರಮಿಸಿಕೊಂಡಾಲೇ ಮದುವೆ ಅದ್ದೂರಿತನವನ್ನು ಪಡೆಯತೊಡಗಿತು. ಮದುವೆಯ ಅನಂತರದ ಹನಿಮೂನ್‌ ಸಾಂಪ್ರದಾಯಿಕ, ಊಟಿ, ಮೈಸೂರು, ಕಾಶ್ಮೀರ, ಸಿಮ್ಲಾ, ಆಗ್ರಾ, ಮಹಾಬಲೇಶ್ವರಗಳನ್ನು ಬಿಟ್ಟು ವಿದೇಶಗಳತ್ತ ಹೊರಳಿದಾಗ ಈ ಅದ್ದೂರಿತನ ಹಿಮಾಲಯದೆತ್ತರಕ್ಕೆ ಏರಿತು. ಮದುವೆ ಕಾರ್ಯವನ್ನು ನಿರ್ವಹಿಸಲು ಇವೆಂಟ್‌ ಮ್ಯಾನೇಜ್‌ಮೆಂಟ್‌ ಕಂಪೆನಿಗಳ ರಂಗ ಪ್ರವೇಶದೊಂದಿಗೆ ಅದ್ದೂರಿತನ ಮುಗಿಲು ಮುಟ್ಟಿತು. ಮದುವೆ ಊಟದ ಖರ್ಚಿಗಿಂತ ವೀಡಿಯೋ ಶೂಟ್‌ಗೆ ಹೆಚ್ಚು ಖರ್ಚು ಕಾಣತೊಡಗಿತು. ಊಟ, ಆರತಕ್ಷತೆ, ವಿಡಿಯೋ ಮತ್ತು ಹನಿಮೂನ್‌ ಖರ್ಚುಗಳು ಮದುವೆಯ ಇತರ ಖರ್ಚುಗಳನ್ನು ಮೀರಿಸತೊಡಗಿತು.

ಒಬ್ಬರು ಲಕ್ಷ ಖರ್ಚು ಮಾಡಿದರೆ, ಪಕ್ಕದ ಮನೆಯವನು ಸಮಾಜದಲ್ಲಿ ತಲೆ ಎತ್ತಿ ಓಡಾಡಲು ಅಷ್ಟೇ ಅಥವಾ ಸ್ವಲ್ಪ ಹೆಚ್ಚು ಖರ್ಚು ಮಾಡಲೇ ಬೇಕಾಗುತ್ತದೆ. ಇದು ಸಮಾಜದ ಅಲಿಖೀತ, ಆದರೆ ಕಣ್ಮುಚ್ಚಿ ಅನುಸರಿಸಲೇಬೇಕಾದ ಮತ್ತು ಲಾಗಾಯ್ತಿನಿಂದ ಬಂದ ನಿಯಮ. ಇದನ್ನು ಸಾಲ ಸೋಲ ಮಾಡಿಯಾದರೂ ಆತ ಮಾಡಲೇ ಬೇಕಾಗುತ್ತದೆ. ಇದು ಒಂದು ರೀತಿಯಲ್ಲಿ ಅರ್ಥಶಾಸ್ತ್ರದಲ್ಲಿ ಹೇಳುವಂತೆ ಡೆಮಾನ್‌ಸ್ಟ್ರೇಷನ್‌ ಪರಿಣಾಮ. ಅಂತೆಯೇ ಮಕ್ಕಳ ಮದುವೆಗಾಗಿ ಮಾಡಿದ ಸಾಲವನ್ನು ತೀರಿಸಲಾಗದೇ ಆತ್ಮಹತ್ಯೆಗೆ ಶರಣಾದ ಸಾಕಷ್ಟು ಉದಾಹರಣೆಗಳಿವೆ.

ಈ ಅದ್ದೂರಿ ಮದುವೆಯ ನಿಜವಾದ ಬಲಿಪಶುಗಳು ಬಡವರು ಮತ್ತು ಮಧ್ಯಮ ವರ್ಗದವರು. ಈ ವರ್ಗದವರು ಉಳ್ಳವರ ಮದುವೆಯನ್ನು ಅನಿವಾರ್ಯವಾಗಿ ಅನುಸರಿಸಲು ಹೋಗಿ ಹಳ್ಳಕ್ಕೆ ಬೀಳುತ್ತಾರೆ. ಸಾಮಾಜಿಕ ಪ್ರತಿಷ್ಠೆಯ ಈ ಅಲಿಖೀತ ನಿಯಮ ಬಿಸಿ ತುಪ್ಪವಾಗಿ ಪರಿಣಮಿಸಿ ಅವರು ಪರಿತಪಿಸುತ್ತಾರೆ. ಸಾಂಪ್ರದಾಯಿಕ ಸಮಾಜದಲ್ಲಿ ಹಣ ಮತ್ತು ವಿದ್ಯೆಗಿಂತ ಗೌರವ ಮುಖ್ಯ. ಒಂದು ಅದ್ದೂರಿ ಮದುವೆಯಿಂದ, ಆ ಮದುವೆಗಾಗಿ ಮಾಡಿದ ಸಾಲವನ್ನು ತೀರಿಸುವ ಕಷ್ಟದಲ್ಲಿ ನಾಗರಿಕನೊಬ್ಬನ ಜೀವನ ಹತ್ತು ವರ್ಷಗಳಷ್ಟು ಹಿಂದೆ ಹೋಗುತ್ತದೆ. ಆದರೂ ಆಡುವವರಿಂದ ತಪ್ಪಿಸಿಕೊಳ್ಳಲು ಮತ್ತು ಅವಮಾನದಿಂದ ಬಚಾವಾಗಲು ಸಾಲ ಮಾಡಲೇ ಬೇಕಾಗುತ್ತದೆ. ಬಡವರು ಮತ್ತು ಮಧ್ಯಮ ವರ್ಗದವರನ್ನು ಮದುವೆಯ ಅನಂತರದ ಪರಿಣಾಮಗಳಿಂದ ರಕ್ಷಿಸಲು ಇಂಥ ಕಾಯ್ದೆಯ ಅನಿವಾರ್ಯತೆಯನ್ನು ತಳ್ಳಿಹಾಕಲಾಗದು.

– ರಮಾನಂದ ಶರ್ಮಾ

Advertisement

Udayavani is now on Telegram. Click here to join our channel and stay updated with the latest news.

Next