ಹೊಸದಿಲ್ಲಿ : ಈ ವರ್ಷ ಜೂನ್ ನಲ್ಲಿ ಸಹೋದ್ಯೋಗಿ ಮೇಜರ್ ಅಮಿತ್ ದ್ವಿವೇದಿ ಅವರ ಪತ್ನಿ ಶೈಲಜಾ ಅವರನ್ನು ಕತ್ತು ಸೀಳಿ ಕೊಂದಿದ್ದ ಆರೋಪಿ ಆರ್ಮಿ ಮೇಜರ್ ನಿಖೀಲ್ ರಾಯ್ ಹಂಡ ಅವರು “ನಾನು ಶೈಲಜಾ ಳನ್ನು ಕೊಲ್ಲುವ ಹಿಂದಿನ ರಾತ್ರಿ, ‘ಕೊಲ್ಲುವ ವಿಧಾನಗಳನ್ನು ತಿಳಿಸುವ ಅನೇಕ ವಿಡಿಯೋಗಳನ್ನು ಯೂ ಟ್ಯೂಬ್ ನಲ್ಲಿ ನೋಡಿದ್ದೆ’ ಎಂದು ಪೊಲೀಸರಲ್ಲಿ ತಪ್ಪೊಪ್ಪಿಕೊಂಡಿದ್ದಾನೆ.
ಶೈಲಜಾ ಳನ್ನು ಕೊಲ್ಲುವ ಉದ್ದೇಶ ಆತನ ಈ ಕೃತ್ಯದಲ್ಲೇ ಇತ್ತೆನ್ನುವುದು ಖಚಿತವಿದೆ ಎಂದು ಹಂಡ ವಿರುದ್ಧ ದಾಖಲಿಸಿದ್ದ ಚಾರ್ಜ್ ಶೀಟ್‌ನಲ್ಲಿ ದಿಲ್ಲಿ ಪೊಲೀಸರು ಹೇಳಿದ್ದಾರೆ.
ಇಂದು ಸೋಮವಾರ ಪಟಿಯಾಲ ಹೌಸ್ ಕೋರ್ಟ್ ನಿಖೀಲ್ ರಾಯ್ ಹಂಡ ವಿರುದ್ಧ ಕೊಲೆ (ಐಪಿಸಿ ಸೆ.302) ಮತ್ತು ಸಾಕ್ಷ್ಯನಾಶ (ಸೆ.201)ರ ಪ್ರಕಾರ ದೋಷಾರೋಪ ದಾಖಲಿಸಿಕೊಂಡಿತು.
ಮೇಜರ್ ಅಮಿತ್ ದ್ವಿವೇದಿ ಜತೆಗೆ ವಿವಾಹವಾಗುವ ಮುನ್ನ ಶೈಲಜಾ ಳನ್ನು ಮದುವೆಯಾಗಲು ಹಂಡ ಬಯಸಿದ್ದ. ಆದರೆ ಆಕೆ ಆತನನ್ನು ತಿರಸ್ಕರಿಸಿದ್ದಳು. ಶೈಲಜಾಳ ಪತಿ ದ್ವಿವೇದಿ ಮತ್ತು ಹಂಡ ನನ್ನು ನಾಗಾಲ್ಯಾಂಡ್‌ನ ದೀಮಾಪುರದಲ್ಲಿ ಜತೆಜತೆಗೆ ನಿಯೋಜಿಸಲಾಗಿತ್ತು.
ಕತ್ತು ಸೀಳಲ್ಪಟ್ಟ ಶೈಲಜಾಳ ಮೃತ ದೇಹ ದಿಲ್ಲಿ ಕಂಟೋನ್ಮೆಂಟ್ ಪ್ರದೇಶದಲ್ಲಿನ ಬ್ರಾರ್ ಚೌಕದಲ್ಲಿ ಈ ವರ್ಷ ಜೂನ್‌ನಲ್ಲಿ ಪತ್ತೆಯಾಗಿತ್ತು.
ತನ್ನ ಪತ್ನಿ ಕೊಲೆಯಾಗಿರುವುದಕ್ಕೆ ತಾನು ಹಂಡ ನನ್ನೇ ಶಂಕಿಸುತ್ತೇನೆ ಎಂದು ದ್ವಿವೇದಿ ಪೊಲೀಸರಲ್ಲಿ ಹೇಳಿದ್ದರು. ಪೊಲೀಸರು ಸಿಸಿಟಿವಿ ಚಿತ್ರಿಕೆಗಳ ವ್ಯಾಪಕ ಪರಿಶೀಲನೆ ನಡೆಸಿ, ಶೋಧ ಕಾರ್ಯ ನಡೆಸಿ ಹಂಡ ನನ್ನು ಮೀರತ್ ನಲ್ಲಿ ಸೆರೆ ಹಿಡಿದಿದ್ದರು. ಹಂಡ ಗೆ 2015ರಿಂದಲೇ ಶೈಲಜಾ ಗೊತ್ತಿತ್ತೆಂದು ತನಿಖೆಯಲ್ಲಿ ಪತ್ತೆಯಾಯಿತು.