ಬೆಂಗಳೂರು: ಯಲಹಂಕ ಮೇಲುಸೇತುವೆಗೆ ಸ್ವಾತಂತ್ರ ವೀರ ಸಾವರ್ಕರ್ ಹೆಸರು ನಾಮಕರಣ ಮಾಡಿಯೇ ತೀರುವುದಾಗಿ ಸಚಿವ ಆರ್.ಅಶೋಕ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಹೇಳಿದ್ದಾರೆ. ವಿಧಾನಸೌಧದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಆರ್.ಅಶೋಕ್, ಮೇಲುಸೇತುವೆಗೆ ಸಾವರ್ಕರ್ ಹೆಸರಿಡು ವುದಕ್ಕೆ ನಮಗೆ ಸಂತಸವಿದೆ. ಆದರೆ ಎಲ್ಲ ಯೋಜನೆಗಳಿಗೂ ನೆಹರು, ಗಾಂಧಿ ಹೆಸರನ್ನೇ ಇಟ್ಟ ಕಾಂಗ್ರೆಸ್ ನವರು ಬೇರೆಯವರ ಹೆಸರಿಡುವುದನ್ನು ಸಹಿಸುವುದಿಲ್ಲ ಎಂದು ಕಿಡಿ ಕಾರಿದರು.
ಹಿಂದೆಲ್ಲಾ ಕೆಂಪೇಗೌಡರು, ಸಂಗೊಳ್ಳಿ ರಾಯಣ್ಣ ಅವರ ಹೆಸರನ್ನು ಏಕೆ ನಾಮಕರಣ ಮಾಡಲಿಲ್ಲ. ಹಿಂದೂ ಪ್ರತಿಪಾದಕರೆಂಬ ಕಾರಣಕ್ಕೆ ಸಾವರ್ಕರ್ ಹೆಸರಿಡುವುದಕ್ಕೆ ವಿರೋಧ ಸರಿಯಲ್ಲ. ಹಿಂದೂ ಆಗಿ ಹುಟ್ಟುವುದೇ ತಪ್ಪೇ? ಕಾಂಗ್ರೆಸ್‌ನ ಗೊಡ್ಡು ಬೆದರಿಕೆಗೆ ಹೆದರುವುದಿಲ್ಲ. ಸಾವರ್ಕರ್ ಹೆಸರು ನಾಮಕರಣ ಮಾಡಿಯೇ ತೀರುತ್ತೇವೆ ಎಂದು ತಿಳಿಸಿದರು.
ತಾತ್ಕಾಲಿಕ ಮುಂದೂಡಿಕೆ: ಕಾಂಗ್ರೆಸ್ ಸ್ಥಾಪಿಸಿದವರು ಎ.ಒ. ಹ್ಯೂಮ್ ಎಂಬ ಹೊರದೇಶದ ವ್ಯಕ್ತಿ. ಹಾಗಾಗಿ ಕಾಂಗ್ರೆಸ್ ಇನ್ನೂ ಹೊರ ದೇಶದವರ ದಾಸ್ಯದಲ್ಲೇ ಇದೆ. ಈ ಹಿಂದೆ ಇಂದಿರಾ ಕ್ಯಾಂಟೀನ್ ಹೆಸರಿಟ್ಟಾಗ ನಾವು ವಿರೋಧಿಸಿರಲಿಲ್ಲ. ಆದರೆ ಬ್ರಿಟಿಷರ ವಿರುದ ಹೋರಾಡಿದ ಸೇನಾನಿಯ ಹೆಸರನ್ನು ಮೇಲುಸೇತುವೆಗೆ ನಾಮಕರಣ ಮಾಡಬಾರದೇ? ಕಾರ್ಯಕ್ರಮ ತಾತ್ಕಾಲಿಕವಾಗಿ ಮುಂದೂಡಿಕೆಯಾಗಿದ್ದು,
ಸಾವರ್ಕರ್ ಹೆಸರು ನಾಮಕರಣ ಮಾಡಿಯೇ ತೀರುತ್ತೇವೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಸ್.ಆರ್.ವಿಶ್ವನಾಥ್ ಹೇಳಿದರು. ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಸ್ವಾತಂತ್ರ ಸೇನಾನಿಗೆ ಅವಮಾನ ಮಾಡುತ್ತಿದ್ದಾರೆ. ಅವರ ಮನೆಯ ಯಾರ ಹೆಸರನ್ನಿಡಬೇಕು ಎಂದು ಮನಸ್ಸಿನಲ್ಲಿದ್ದರೆ ಹೇಳಲಿ. ಮುಂದೆ ಅವರ ಹೆಸರನ್ನೂ ಇಡಲಾಗುವುದು ಎಂದರು.